‘ಪ್ರಾಮಾಣಿಕತೆಯಿಂದ ಜನರ ವಿಶ್ವಾಸ ಗಳಿಸಿ’

7
ಶ್ರೀಹಾಲುಮತ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಉದ್ಘಾಟನೆ

‘ಪ್ರಾಮಾಣಿಕತೆಯಿಂದ ಜನರ ವಿಶ್ವಾಸ ಗಳಿಸಿ’

Published:
Updated:
Deccan Herald

ದಾವಣಗೆರೆ: ‘ಹಾಲುಮತ ಸೌಹಾರ್ದ ಪತ್ತಿನ ಸಹಕಾರದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕುರುಬ ಕೊಟ್ಟ ಮಾತು ತಪ್ಪುವುದಿಲ್ಲ; ಕುರಿ ಹೊಲಸು ತಿನ್ನುವುದಿಲ್ಲ ಎಂಬ ಮಾತನ್ನು ಸಾಬೀತು ಪಡಿಸಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಹಾಲುಮತ ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹಣಕಾಸಿನ ವ್ಯವಸ್ಥೆಯಡಿ ಕೆಲಸ ಮಾಡುವವರು ವಿಚಲಿತರಾಗಬಾರದು. ವ್ಯವಹಾರಗಳು ಕನ್ನಡಿಯ ಬಿಂಬದಂತೆ ಸ್ಪಷ್ಟವಾಗಿದ್ದರೆ ಜನರ ವಿಶ್ವಾಸ ಗಳಿಸಲು ಸಾಧ್ಯ. ಆಗ ಅವರೂ ಸಹಕಾರಕ್ಕೆ ಬರುತ್ತಾರೆ’ ಎಂದರು.

‘ಟ್ರಸ್ಟ್‌, ಸಂಘಗಳು ಕೆರೆ ಇದ್ದಂತೆ. ಕೆರೆಗೆ ಎಲ್ಲಾ ಪ್ರಾಣಿಗಳೂ ನೀರು ಕುಡಿಯಲು ಬರುವಂತೆ ಇಲ್ಲಿಗೂ ಎಲ್ಲ ಬಗೆಯ ಜನ ಬರುತ್ತಾರೆ. ಹಸು ಕೆರೆಯೊಳಗೆ ಇಳಿದು ನೀರು ಕುಡಿದರೆ, ಎಮ್ಮೆ ಕೆರೆಯೊಳಗೆ ಇಳಿದು ರಾಡಿಯೆಬ್ಬಿಸುತ್ತದೆ. ಆದರೆ, ಮೇಕೆ ಕೆರೆಯ ಬದಿಯಲ್ಲಿ ಮೊಳಕಾಲು ಊರಿ ನೀರನ್ನು ಕುಡಿದು ಹೋಗುತ್ತದೆ. ಮೇಕೆಯ ಸ್ವಾಭಾವದೊಂದಿಗೆ ಕೆಲಸ ಮಾಡಬೇಕು. ಒಮ್ಮೆ ನಂಬಿಕೆ ಕಳೆದು ಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ‘ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲು ‘ಕಾಯಕ’ ಯೋಜನೆ ಆರಂಭಿಸಲಾಗಿದೆ. ಇದರಡಿ ಒಟ್ಟು ₹ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದ್ದು, ₹ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರ ಇರಲಿದೆ. ಉಳಿದ ₹ 5 ಲಕ್ಷಕ್ಕೆ ಶೇ 4 ಬಡ್ಡಿದರ ವಿಧಿಸಲಾಗುತ್ತಿದೆ. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ‘ಬಡವರ ಬಂಧು’ ಯೋಜನೆಯನ್ನೂ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಬ್ಯಾಂಕ್‌ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ‘ಹಾಲುಮತ ಸಮಾಜ ಇಷ್ಟು ವರ್ಷಗಳ ಬಳಿಕ ಸಹಕಾರ ಬ್ಯಾಂಕ್‌ ಆರಂಭಿಸುತ್ತಿರುವುದು ಶೋಚನೀಯ ವಿಷಯ. ಸಮಾಜದ ವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸಬೇಕು. ಸಂಸ್ಥೆಯನ್ನು ರಾಜ್ಯದ ಮೊದಲ ಸ್ಥಾನಕ್ಕೆ ತರಲು ಪದಾಧಿ ಕಾರಿಗಳು ಶ್ರಮಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶೀಲಾ ಕೆ.ಆರ್‌, ‘ವೈಯಕ್ತಿಕ ಕಾರಣಗಳಿಂದ ಹಲವು ಸಹಕಾರ ಸಂಘಗಳು ಮುಚ್ಚಿ ಹೋಗಿವೆ. ಅವುಗಳಿಗೆ ಅವಕಾಶ ನೀಡಬಾರದು. ಮುಂದುವರಿದ ಸಮಾಜವನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆ ಯಬೇಕು’ ಎಂದು ಸಲಹೆ ನೀಡಿದರು.

ಹಾಲುಮತ ಮಹಾಸಭಾದ ರಾಜ್ಯ ಅಧ್ಯಕ್ಷ ರುದ್ರಣ್ಣ ಗುಳಗುಳಿ, ‘ಹಾಲುಮತ ಸಮಾಜದವರಾದ ಕಣಗಿನಹಾಳದ ಸಿದ್ದನಗೌಡ ಪಾಟೀಲರು ಏಷ್ಯಾದಲ್ಲೇ ಮೊದಲು ಸಹಕಾರ ಸಂಘ ಸ್ಥಾಪಿಸಿದವರು. ಆದರೆ, ಇಂದು ಅವರ ಮನೆ ಹಾಗೂ ಸಂಘ ದುಸ್ಥಿತಿಯಲ್ಲಿದೆ. ಶ್ರೀಗಳು ಅದರ ಪುನಶ್ಚೇತನಕ್ಕೆ ಮುಂದಾ ಗಬೇಕು’ ಎಂದು ಮನವಿ ಮಾಡಿದರು.

ಬ್ಯಾಂಕ್‌ ಆರಂಭಗೊಂಡ ಎರಡು ತಿಂಗಳಲ್ಲಿ ₹ 7 ಲಕ್ಷದ ಶೇರು ಖರೀದಿ ಯಾಗಿದೆ. ₹ 40 ಲಕ್ಷ ಬಂಡವಾಳ ಪಡೆಯಲಾಗಿದೆ. ಹಾಲುಮತ ಸಮಾಜ ದಿಂದ ‘ಕನಕ ಒಡ್ಡೋಲಗ’, ‘ಕನಕನ ಹುಂಡಿ’ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಸೌಹಾರ್ದ ಪತ್ತಿನ ಸಹಕಾರದ ಅಧ್ಯಕ್ಷ ಎಸ್‌. ವೆಂಕಟೇಶ್‌ ಮಾಯಕೊಂಡ ಅಧ್ಯಕ್ಷತೆ ವಹಿಸಿದ್ದರು. ಹಾಲುಮತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ. ವೀರಣ್ಣ, ಇನ್‌ಸೈಟ್‌ ಆನ್‌ ಇಂಡಿಯಾ ಐಎಎಸ್‌ ತರಬೇತಿ ಕೇಂದ್ರದ ಜಿ.ಬಿ. ವಿನಯ್‌, ಕನಕ ಪಟ್ಟಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಚ್‌.ಜಿ. ಸಂಗಪ್ಪ, ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ಅಹಿಲ್ಯಾಬಾಯಿ ಹೋಳ್ಕರ್‌ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಆನಂದ್‌, ಮುಖಂಡರಾದ ರಾಜನಹಳ್ಳಿ ಶಿವಕುಮಾರ್‌, ವಿ. ಮಂಜುನಾಥ, ಗೌಡ್ರ ಚನ್ನಬಸಪ್ಪ, ಜಿ. ಷಣ್ಮುಖಪ್ಪ, ಪಿ.ಜೆ. ರಮೇಶ್‌ ಅವರೂ ಹಾಜರಿದ್ದರು.

ಎಸ್‌.ಎಂ. ಸಿದ್ದಲಿಂಗಪ್ಪ ಸ್ವಾಗತಿಸಿದರು. ಮಾಲತೇಶ್‌ ಅರಸ್‌ ಹರ್ತಿಕೋಟೆ ನಿರೂಪಿಸಿದರು.

ಅಧ್ಯಕ್ಷರ ಬದಲಾವಣೆಗೆ ರಾಮಪ್ಪ ಒತ್ತಾಯ

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸ್ಥಾನದಿಂದ ಕೆಂಗೊ ಹನುಮಂತಪ್ಪ ಅವರನ್ನು ಕೆಳಗಿಳಿಸಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಯುವಕರೊಬ್ಬರನ್ನು ಆಯ್ಕೆ ಮಾಡಬೇಕು ಎಂದು ಶಾಸಕ ಎಸ್‌. ರಾಮಪ್ಪ ಒತ್ತಾಯಿಸಿದರು.

ಸುಮಾರು 25 ವರ್ಷಗಳಿಂದ ಅವರೊಬ್ಬರೇ ಅಧ್ಯಕ್ಷರಾಗಿದ್ದಾರೆ. ಅವರು ನಿಂತ ನೀರಾಗಿದ್ದಾರೆ. ಈಗ ನೀರು ಕೊಳೆಯುತ್ತಿದೆ. ಹೀಗಾಗಿ ಹೊಸ ನೀರನ್ನು ತರಬೇಕಾಗಿದೆ. ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ಶೀಘ್ರವೇ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ‘ಜಿಲ್ಲೆಯಲ್ಲಿ ಸಮಾಜದ ಆಯಕಟ್ಟಿನ ಜಾಗ ವ್ಯಕ್ತಿಗಳ ಸ್ವತ್ತುಗಳಾಗಿವೆ. ಅದನ್ನು ಅವರ ಕೈಯಿಂದ ಬಿಡಿಸಿ ಸಮಾಜದ ಸ್ವತ್ತನ್ನಾಗಿಸುವ ಕೆಲಸವನ್ನು ಕನಕ ಗುರುಪೀಠ ಕೈಗೆತ್ತಿಕೊಳ್ಳಲಿದೆ’ ಎಂದು ಭರವಸೆ ನೀಡಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !