ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆ ಉಸ್ತುವಾರಿ ನಿಭಾಯಿಸುವೆ: ಪಿ.ಟಿ.ಪರಮೇಶ್ವರ ನಾಯ್ಕ

Last Updated 22 ಡಿಸೆಂಬರ್ 2018, 14:42 IST
ಅಕ್ಷರ ಗಾತ್ರ

ಹರಪನಹಳ್ಳಿ: ‘ನಿರೀಕ್ಷೆ ಇಟ್ಟುಕೊಂಡು ನಾನು ಯಾವತ್ತೂ ರಾಜಕಾರಣ ಮಾಡಿಲ್ಲ. ಪಕ್ಷದ ವರಿಷ್ಠರು ಯಾವ ಖಾತೆಯನ್ನು ನೀಡುತ್ತಾರೋ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ’ ಎಂದು ನೂತನ ಸಚಿವ ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ಬೆಂಗಳೂರಿಗೆ ಪ್ರಮಾಣ ವಚನ ಸ್ವೀಕರಿಸಲು ತೆರಳುವ ಮುನ್ನ ಅವರು ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಿಕೊಳ್ಳುತ್ತೇನೆ. ಜನರ ಸೇವೆಯೇ ನನ್ನ ಕಾಯಕ. ಕೆಲಸ ಮಾಡುವವರು ಸಮಿಶ್ರ ಸರ್ಕಾರ ಮತ್ತು ಏಕ ಪಕ್ಷದ ಸರ್ಕಾರವಿದ್ದರೂ ಉತ್ತಮ ಕೆಲಸವನ್ನೇ ಮಾಡುತ್ತಾರೆ. ಅವರಿಗೆ ಯಾವುದೇ ಸಮಸ್ಯೆಯೂ ಅಡ್ಡಿಯಾಗಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ನಾನು ಎರಡನೇ ಬಾರಿಗೆ ಸಚಿವನಾಗಲು ಅವಕಾಶ ಕಲ್ಪಿಸಿದೆ. ಹೈಕಮಾಂಡ್, ಪಕ್ಷದ ನಾಯಕರು ಬಂಜಾರಾ ಸಮಾಜದ ಮೇಲೆ ಗೌರವವಿಟ್ಟು, ಹಡಗಲಿ ಕ್ಷೇತ್ರದ ಮೇಲೆ ನಂಬಿಕೆಯಿಟ್ಟು ನನಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ಮತದಾರರಿಗೆ ಹಾಗೂ ನನ್ನ ಸಮಾಜಕ್ಕೆ ಸಲ್ಲುವ ಗೌರವವಾಗಿದೆ’ ಎಂದು ಹೇಳಿದರು.

‘ರಾಜಕೀಯದಲ್ಲಿ ಅಸ್ಥಿರತೆ ನಿರ್ಮಾಣ ಮಾಡುವುದು ಬಿಜೆಪಿ ನಾಯಕರ ಕೆಲಸ. ಅವರು ಏನೇ ಮಾಡಿದರೂ ಯಶಸ್ಸು ಕಾಣಲ್ಲ. ಆಪರೇಶನ್ ಕಮಲ ಎನ್ನುವುದು ಬರೀ ಊಹಾಪೋಹ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ, ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಸಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರ ಜತೆ ಒಂದೇ ವಿಮಾನದಲ್ಲಿ ಪ್ರಯಾಣಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದರು.

‘ದೇಶದ ಇತಿಹಾಸದಲ್ಲಿ ದೇವರಾಜು ಅರಸು ನಂತರ ಜನಪರ, ಬಡವರ ಪರವಾದ ಕೆಲಸ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಸಮ್ಮಿಶ್ರ ಸರ್ಕಾರದಲ್ಲಿಯೇ ಅವರು ಸಿಎಂ ಆಗಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲ ಕೂಡಿ ಬಂದಾಗ ಸಿದ್ದರಾಮಯ್ಯ ಮತ್ತೊಂದು ಬಾರಿ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್, ಹೂವಿನ ಹಡಗಲಿ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ಪರಮೇಶ್ವರನಾಯ್ಕ ‘ದೇವರ ತಿಮ್ಮಲಾಪುರ ಹಾಗೂ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಿ ದರ್ಶನ ಪಡೆದು ಬೆಂಗಳೂರಿಗೆ ತೆರಳಿದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಐಗೋಳ ಚಿದಾನಂದ, ಪಿ.ಎಲ್.ಪೋಮ್ಯನಾಯ್ಕ, ಪೂಜಾರ ಶಶಿಧರ, ಪಿ.ಟಿ. ಭರತ್, ಮಹ್ಮದ್‌ ಗೌಸ್, ಅಟವಾಳಗಿ ಈರಣ್ಣ, ರವಿನಾಯ್ಕ, ತಿಮ್ಮನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT