ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ ಸಂಭ್ರಮ: ಭರವಸೆಯ ಆಶಾಕಿರಣ ಮೂಡಲಿ

ದೇಶದ ಇಂದಿನ ಸ್ಥಿತಿಗತಿಗೆ ಯುವಮನಸುಗಳ ಚಡಪಡಿಕೆ
Last Updated 14 ಆಗಸ್ಟ್ 2022, 2:37 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ದೇಶ ಸಂಭ್ರಮಿಸುತ್ತಿದೆ. ಈ 75 ವರ್ಷಗಳಲ್ಲಿ ದೇಶ ಹಲವು ಬದಲಾವಣೆ ಕಂಡರೂ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂಬ ಕೊರಗು ಹಲವರದ್ದು.

ದೇಶದ ಶಕ್ತಿಯಾದ ಯುವಜನರೂ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸುತ್ತಿದ್ದಾ‌ರೆ. ಆದರೆ ಅವರ ಕಣ್ಣಂಚಿನಲ್ಲಿನ ಆಸೆ, ಕನಸುಗಳ ರೆಕ್ಕೆಪುಕ್ಕಗಳಿಗೆ ಬಲ ಸಿಕ್ಕಿಲ್ಲ. 75 ವರ್ಷಗಳಲ್ಲಿ ಮಹಾತ್ವಾಕಾಂಕ್ಷೆಗೆ ಅವಕಾಶದ ಹೆಬ್ಬಾಗಿಲು ತೆರೆದಿಲ್ಲ ಎಂಬುದು ಹಲವು ಯುವಮನಸುಗಳ ಬೇಸರ.

ಸ್ವಾತಂತ್ರ್ಯವನ್ನು ತೋರಿಕೆಗೆಸಂಭ್ರಮಿಸುವ ಯುವಜನರ ಕನಸುಗಳಿಗೆ ನೀರೆರೆಯುವ ಕೆಲಸವಾಗಿಲ್ಲ. ಭಾವೈಕ್ಯ, ಸೌಹಾರ್ದ ಮರೆಯಾಗುತ್ತಿದೆ. ನಿರುದ್ಯೋಗ, ಬಡತನ ಹೆಚ್ಚುತ್ತಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ ಕೈಗೆಟಕುತ್ತಿಲ್ಲ. ನಾಳಿನ ದಿನಗಳಾದರೂ ಹೊಸ ಭರವಸೆ ತರಲಿ ಎಂಬ ಆಶಾಭಾವ ಹಲವು ಯುವಕ–ಯುವತಿಯರದ್ದು. ಈ ಬಗ್ಗೆ ಯುವಮನಸುಗಳು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿವಿಧತೆಯಲ್ಲಿ ಏಕತೆ ಮಾತಿಗೆ ಸಿಮೀತ
75 ವರ್ಷಗಳಲ್ಲಿ ವಿವಿಧತೆಯಲ್ಲಿ ಏಕತೆ ಕೇವಲ ಮಾತಿಗಷ‌್ಟೇ ಸಿಮೀತವಾಗಿದೆ. ಇಂದಿಗೂ ಜಾತಿ ತಾರತಮ್ಯ ಇದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ಅಭಿವೃದ್ಧಿ ಕಾಣಲು ಸಾಧ್ಯ. ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಸಿಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಸಿಗುವಂತಾದರೆ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕ.
–ಸುಷ್ಮಾ, ಪತ್ರಿಕೋದ್ಯಮ ವಿದ್ಯಾರ್ಥಿನಿ

*
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಆದರೆ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ ಎನ್ನುವಂತಾಗಿದೆ. 75 ವರ್ಷಗಳಾದರೂ ಬಡತನ, ನಿರುದ್ಯೋಗ, ಜಾತಿ ಅಸಮಾನತೆ, ಸ್ತ್ರೀಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಭಯೋತ್ಪಾದನೆ ಇನ್ನಿತರ ಸಮಸ್ಯೆಗಳು ತಾಂಡವವಾಡುತ್ತಿವೆ. ಯುವ ಸಮುದಾಯಕ್ಕೆ ಕಾಡುತ್ತಿರುವ ಪ್ರಶ್ನೆ ಎಂದರೆ ನಾವು ನಿಜವಾಗಿಯೂ ಸ್ವತಂತ್ರರೇ ಅಥವಾ ಅವಲಂಬಿತರೇ ಎನ್ನುವುದು.

ಭ್ರಷ್ಟಾಚಾರ ತೊಲಗಿ ಪ್ರತಿಯೊಬ್ಬರೂ ನಿಜವಾದ ಹಕ್ಕನ್ನು ಪಡೆಯುವಂತಾಗಬೇಕು. ಸ್ತ್ರೀ ತನ್ನ ಮನೆ ಮತ್ತು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಸುರಕ್ಷಿತಳಾಗಬೇಕು. ಆರ್ಥಿಕ ಅಸಮಾನತೆ ನಿವಾರಣೆಯಾದರೆ ಮಾತ್ರ ದೇಶದ ಜನರು ನಿಜ ಸ್ವಾತಂತ್ರ ಪಡೆದಂತಾಗುತ್ತದೆ.
ಪೂಜಾ, ಎಂ.ಟೆಕ್ ವಿದ್ಯಾರ್ಥಿನಿ

*
ಸ್ವಾತಂತ್ರ್ಯ ನಾಮಮಾತ್ರವಾಗಬಾರದು. ದೇಶ ನಿರೀಕ್ಷಿತ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಕೋಟ್ಯಂತರ ಪದವೀಧರರು ನಿರುದ್ಯೋಗದಿಂದ ಕಂಗಾಲಾಗಿದ್ದಾರೆ.ಹಸಿವು, ಬೆಲೆ ಏರಿಕೆ, ಹಣದುಬ್ಬರ ಹೆಚ್ಚಾಗುತ್ತಿದೆ. ಆರ್ಥಿಕತೆ ಏರುಪೇರಾಗಿದೆ. ಬಡವರು ಬಡವರಾಗಿಯೇ ಉಳಿದರೆ ಶ್ರೀಮಂತರು ಶ್ರೀಮಂತರಾಗಿ ಉಳಿಯುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಂತೂ ಮಾತನಾಡುವುದು ಮತ್ತು ಜೀವಿಸುವುದು ಕಷ್ಟವಾಗಿರುವುದು ಬೇಸರದ ಸಂಗತಿ.ಧರ್ಮ ಆಧಾರಿತ ರಾಜಕಾರಣದಿಂದ ಅಭಿವೃದ್ಧಿ ಅಸಾಧ್ಯ. ಎಲ್ಲರಿಗೂ ಬದುಕುವ ಹಕ್ಕಿದೆ ಎಂಬ ಬಗ್ಗೆ ಚಿಂತನೆಯಾಗಲಿ.
–ಮಲ್ಲೇಶ್ ನಾಯ್ಕ ಎಂ.,ಉಪನ್ಯಾಸಕ

*
ಸ್ವಾತಂತ್ರ್ಯ ಪಡೆಯಲು ಜಾತಿ, ಧರ್ಮದ ಭೇದವಿಲ್ಲದೇ ಹಿರಿಯರು ಹೋರಾಡಿದರು. ಆದರೆ ಇಂದಿಗೂ ಜಾತಿ ಕಲಹ, ಕೋಮು ಗಲಭೆಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ. ಆಗ ಬ್ರಿಟಿಷರು ದೋಚುತ್ತಿದ್ದರು. ಈಗ ರಾಜಕಾರಣಿಗಳು ದೋಚುತ್ತಿದ್ದಾರೆ. ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೂ ಸೌಲಭ್ಯ ಸಿಗಬೇಕು.
–ವಿಶ್ವಾಸ್‌ ಡಿ., ಪತ್ರಿಕೋದ್ಯಮ ವಿದ್ಯಾರ್ಥಿ

*
100 ವರ್ಷಗಳು ಕಳೆದರೂ ದೇಶದ ಬದಲಾವಣೆ ಸಾಧ್ಯವಿಲ್ಲವೇನೂ ಎಂಬ ಆತಂಕ ಇದೆ. ಅಂದು ಹಿರಿಯರು ಕಂಡ ಕನಸು ಇಂದಿಗೂ ಈಡೇರುತ್ತಿಲ್ಲ. ಕೋಮು ಗಲಭೆ ಹೆಚ್ಚುತ್ತಿರುವುದು ಆತಂಕಕಾರಿ. ಕೈಗಾರಿಕೆಗಳ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿ ಸಾಧ್ಯ.
–ಉಪೇಂದ್ರ ಜೆ.ಎಂ.,ಎಂ.ಎ.ವಿದ್ಯಾರ್ಥಿ

*
ಮಹಿಳೆಯರ ಸ್ಥಿತಿಗತಿ ಸುಧಾರಿಸಬೇಕು. ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಆಗ ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ.
–ಸಾಕಮ್ಮ ಬಿ., ಎಂಎ ವಿದ್ಯಾರ್ಥಿನಿ

*
ದೇಶವನ್ನು ಸುಧಾರಿಸಲು ನಾವೂ ಆಲೋಚಿಸುತ್ತಿದ್ದೇವೆ. ದೇಶಕ್ಕೆಶಾಂತಿ ಮತ್ತು ಸಮೃದ್ಧಿ ಭರವಸೆ. ಪಕ್ಷಪಾತವಿಲ್ಲದ ಶೈಕ್ಷಣಿಕ ವ್ಯವಸ್ಥೆ ಇರಬೇಕು. ಜನರ ಆರೋಗ್ಯಮಟ್ಟ ಸುಧಾರಿಸಬೇಕು. ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಕುರುಡು ನಂಬಿಕೆ, ಧರ್ಮಾಂಧತೆ ತೊಲಗಬೇಕು. ಆಗ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕ.
–ಪ್ರತಾಪ ಬಾರ್ಕಿ, ಪತ್ರಿಕೋದ್ಯಮ ವಿದ್ಯಾರ್ಥಿ

*
ಸ್ವಾತಂತ್ರ್ಯ ಹೋರಾಟದ ಬಗ್ಗೆ ಇಂದಿನವರಿಗೆ ತಿಳಿದಿಲ್ಲ. ಅವರು ಪ್ರಾಣ ಕೊಟ್ಟರು ನಾವು ಮೊಬೈಲ್‌ ಚಾರ್ಜ್‌ ಖಾಲಿ ಮಾಡುತ್ತಿದ್ದೇವೆ ಅಷ್ಟೇ. ಯುವಕರು ಬದಲಾವಣೆಗೆ ನಾಂದಿ ಹಾಡಬೇಕು. ದೇಶ ಜಾತಿಯಿಂದ ಮುಕ್ತಿ ಹೊಂದಬೇಕು. ರಾಜಕೀಯ ವ್ಯವಸ್ಥೆ ಸುಧಾರಿಸಬೇಕು. ಬಡವರ ಬದುಕು ಸುಧಾರಿಸಿದಾಗ ಸ್ವಾತಂತ್ರ್ಯಕ್ಕೆ ಅರ್ಥ.
–ಆನಂದ ಡಿ., ಹಾಲಘಟ್ಟ

*
ಸ್ವಾತಂತ್ರ್ಯೋತ್ಸವವನ್ನು ನಾವಿಂದು ನಾಮಾಕಾವಸ್ಥೆಗೆ ಆಚರಿಸುತ್ತಿದ್ದೇವೆ. ಈ ಆಚರಣೆ ಇಡೀ ವಿಶ್ವಕ್ಕೆ ನಮ್ಮ ದೇಶದ ಧೀರೋದಾತ್ತ ಸ್ವಾತಂತ್ರ್ಯ ಚರಿತ್ರೆಯ ತಾಕತ್ತು ಏನೆಂಬುದನ್ನು ನೆನಪು ಮಾಡುವಂತಿರಬೇಕು. ಭಾರತೀಯರ ಔದಾರ್ಯವನ್ನು ಜಗತ್ತಿನ ಮುಂದೆ ತೆರೆದಿಡಬೇಕು. ಬರೀ ಸೆಲ್ಫಿ, ಪ್ರೊಫೈಲ್ ಬದಲಾಯಿಸುವುದು, ಬಾವುಟ ಹಿಡಿದುಕೊಳ್ಳುವುದು ಆಚರಣೆಯಲ್ಲ. ಧೀರರ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು.
–ಮೈತ್ರಾವತಿ ವಿ. ಐರಣಿ,ಚಿಕ್ಕಬೂದಿಹಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT