ಶನಿವಾರ, ಜುಲೈ 2, 2022
27 °C
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

ಏ.20ರಿಂದ 24ರವರೆಗೆ ಹರ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ:  ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯದವರಿಗೆ ನ್ಯಾಯಯುತವಾಗಿ 2ಎ ಮೀಸಲಾತಿ ದೊರಕಿಸಲು ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಅವರಣದಲ್ಲಿ ಭಾನುವಾರ ನಡೆದ ರಾಜ್ಯ ಪಂಚಮಸಾಲಿ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ. ನಾಡಿನಲ್ಲಿ ದೊಡ್ಡ ಸಮಾಜವಾಗಿ ಗುರುತಿಸಿಕೊಂಡಿದ್ದೇವೆ. ನಾವು ನಮ್ಮ ಗುರಿಯನ್ನು ಮುಟ್ಟಲು ಅಡ್ಡದಾರಿಯಲ್ಲಿ ಹೋಗಬಾರದು. ಹೆದ್ದಾರಿಯಲ್ಲಿ ಸಾಗಿದರೆ ಯಶಸ್ಸು ಮತ್ತು ಶ್ರೇಯಸ್ಸು ಸಿಗುತ್ತದೆ. ಸಮಾಜದ ಸಂಘಟನೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಪಾಲನೆಯಾಗಬೇಕು. ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳ ನೇಮಕವಾಗಿದೆ. ಅವರೆಲ್ಲಾ ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜ ಸಂಘಟನೆಗೆ ಶಕ್ತಿ ತುಂಬಬೇಕು’ ಎಂದರು.

ಏ.20ರಿಂದ 24ರವರೆಗೆ ಹರ ಜಾತ್ರೆ: ಮುಂಬರುವ ಏ.20ರಿಂದ 24ರವರೆಗೆ ಹರಜಾತ್ರೆ ಮಹೋತ್ಸವ ಆಚರಿಸಲಾಗುವುದು. ‘ಉದ್ಯಮಿಯಾಗು, ಉದ್ಯೋಗ ನೀಡು’ ಎಂಬ ಕಲ್ಪನೆಯೊಂದಿಗೆ ಈ ಬಾರಿ ಉದ್ಯೋಗ ಮೇಳ
ನಡೆಸಲಾಗುವುದು ಎಂದರು.

ನೂತನ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್ ಮಾತನಾಡಿ, ‘ರಾಜ್ಯದಲ್ಲಿ ಪಂಚಮಸಾಲಿ ಸಮಾಜದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಈವರೆಗೆ 11 ಸಾವಿರ ಸದಸ್ಯತ್ವವಾಗಿದೆ. ಮುಂದಿನ ಆರು ತಿಂಗಳಲ್ಲಿ 15 ಸಾವಿರ ಸದಸ್ಯತ್ವ ಮಾಡಿಸಬೇಕಿದೆ. ಪಂಚಮಸಾಲಿ ಸಂಘ ಮತ್ತು ಪೀಠ ಜೊತೆಗೂಡಿ ಹರ ವಿದ್ಯಾ ಸಂಸ್ಥೆಯ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ‘2008ಕ್ಕಿಂತ ಮುಂಚೆ ಹಲವರು ನಮ್ಮ ಸಮಾಜದ
ವರನ್ನು ಹಿಂಬಾಲಕರನ್ನಾಗಿ ಮಾಡಿ, ಬಳಸಿಕೊಂಡಿದ್ದರು. ಆದರೀಗ ಜಿಲ್ಲೆಯಲ್ಲಿ ನಮ್ಮ ಸಮಾಜವನ್ನು ನೋಡಿ ಹೆದರುತ್ತಿದ್ದಾರೆ. ಇದು ನಮ್ಮ ಸಂಘಟನೆಯ ಶಕ್ತಿ’ ಎಂದರು.

ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ವಸಂತ ಹುಲ್ಲತ್ತಿ ಮಾತನಾಡಿ, ‘ಪಂಚಮಸಾಲಿ ಸಮಾಜ ಕೆಲವರ ಕಪಿಮುಷ್ಟಿಯಲ್ಲಿದೆ. ಸಮಾಜದ ಸರ್ವರ ಅಭಿವೃದ್ಧಿಗೆ, ಎಲ್ಲಾ ಭಿನ್ನಾಭಿಪ್ರಾಯನ್ನು ಬಿಟ್ಟು ಒಗ್ಗಾಟ್ಟಾಗಿ ಸಮಾಜದ ಸಂಘಟನೆಗೆ ಮುಂದಾಗಬೇಕು’ ಎಂದರು.

ಪಂಚಮಸಾಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್, ಧರ್ಮದರ್ಶಿ ಪಿ.ಡಿ. ಶಿರೂರು, ನಿಡೋಣಿ, ಬಾವಿ ಬೆಟ್ಟಪ್ಪ, ಮುಖಂಡರಾದ ಬಸವರಾಜ್ ದಿಂಡೂರ್, ಎನ್.ಜಿ.ನಾಗನಗೌಡ್ರು, ಜ್ಯೋತಿ ಪ್ರಕಾಶ್, ಹೊನ್ನಾಳಿ ಬಾಬಣ್ಣ, ಚಂದ್ರಶೇಖರ್ ಪೂಜಾರ್, ಗುತ್ತೂರು ಕರಿಬಸಪ್ಪ, ವಿವಿಧ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು