ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸಿಕ್ಕರೂ ಶಿಕ್ಷಕರಿಗೆ ಕಾಯುವುದು ತಪ್ಪಲಿಲ್ಲ

ಹರಪನಹಳ್ಳಿಯಿಂದ ದಾವಣಗೆರೆಗೆ ವಾಪಸ್ಸಾತಿಗೆ ಒಪ್ಪಿಗೆ * ಜ್ಯೇಷ್ಠತೆ ಆಧಾರದಲ್ಲಿ ಕೌನ್ಸೆಲಿಂಗ್‌
Last Updated 20 ಜೂನ್ 2019, 4:39 IST
ಅಕ್ಷರ ಗಾತ್ರ

ದಾವಣಗೆರೆ: ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ಹರಪನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಿಗೆ ನಿಯೋಜನೆಗೊಂಡಿದ್ದ ಹೆಚ್ಚುವರಿ ಶಿಕ್ಷಕರಿಗೆ ದಾವಣಗೆರೆ ಜಿಲ್ಲೆಗೆ ವಾಪಸ್ಸಾಗಲು ಸಾರ್ವಜನಿಕ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜ್ಯೇಷ್ಠತೆ ಆಧಾರದಲ್ಲಿ ಸ್ಥಳನಿಯುಕ್ತಿ ಮಾಡುವಂತೆ ಸೂಚಿಸಿರುವುದರಿಂದ ಹಲವು ಶಿಕ್ಷಕರು ತಮ್ಮ ಸರದಿಗಾಗಿ ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿಗೆ ಸೇರಿಸಿದ ಬಳಿಕ ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದ ಹಲವು ಶಿಕ್ಷಕರು ಮಾತೃ ಜಿಲ್ಲೆಯಲ್ಲೇ ಉಳಿಯಲು ಬಯಸಿದ್ದರು. 2016–17ನೇ ಸಾಲಿನಲ್ಲಿ ನಿಯೋಜನೆಗೊಂಡಿದ್ದ ತಮ್ಮನ್ನು ಬೆಂಗಳೂರು ವಿಭಾಗದಲ್ಲೇ ಉಳಿಸಿ, ದಾವಣಗೆರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು 345 ಶಿಕ್ಷಕರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಇಲಾಖೆ ಡಾ. ಪಿ.ಸಿ. ಜಾಫರ್‌ ಅವರು ಜೂನ್‌ 17ರಂದು ಕೆಲವು ಷರತ್ತುಗಳನ್ನು ವಿಧಿಸಿ, ದಾವಣಗೆರೆ ಜಿಲ್ಲೆಯ ಶೈಕ್ಷಣಿಕ ತಾಲ್ಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.

‘ಹರಪನಹಳ್ಳಿಗೆ ನಿಯೋಜನೆಗೊಂಡಿದ್ದ ಶಿಕ್ಷಕರನ್ನು ಜ್ಯೇಷ್ಠತೆ ಆಧಾರದಲ್ಲಿ ಖಾಲಿ ಹುದ್ದೆಗಳಿಗೆ ಮರು ಸ್ಥಳನಿಯುಕ್ತಿಗೊಳಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಕೌನ್ಸೆಲಿಂಗ್‌ಗೆ ಪೂರಕವಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಕೌನ್ಸೆಲಿಂಗ್‌ ದಿನಾಂಕವನ್ನು ಪ್ರಕಟಿಸಲಾಗುವುದು. ಸದ್ಯ 172 ಖಾಲಿ ಹುದ್ದೆಗಳು ಮಾತ್ರ ಇವೆ. ಹೀಗಾಗಿ ಅರ್ಜಿ ಸಲ್ಲಿಸಿದವರ ಪೈಕಿ ಸೇವಾ ಹಿರಿತನದ ಆಧಾರದಲ್ಲಿ ಆದ್ಯತೆ ಮೇಲೆ ಸ್ಥಳ ನಿಯುಕ್ತಿಗೊಳಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ಟೋಬರ್‌ ತಿಂಗಳಲ್ಲಿ ಹರಪನಹಳ್ಳಿ ತಾಲ್ಲೂಕಿಗೆ 18 ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಇವರ ಪೈಕಿ ಈಗಾಗಲೇ ಆರು ಶಿಕ್ಷಕರು ಹರಪನಹಳ್ಳಿಯಲ್ಲೇ ಉಳಿಯಲು ಸಹಮತಿ ಸೂಚಿಸಿದ್ದಾರೆ. ಉಳಿದ 12 ಜನ ದಾವಣಗೆರೆ ಜಿಲ್ಲೆಗೆ ವಾಪಸ್ಸಾಗಲು ಬಯಸಿದ್ದು, ತಮ್ಮನ್ನೂ ಆದ್ಯತೆ ಮೇಲೆ ವರ್ಗಾವಣೆಗೆ ಪರಿಗಣಿಸುವಂತೆ ಕೋರಿದ್ದಾರೆ. ಈ ಶಿಕ್ಷಕರನ್ನು ಪರಿಗಣಿಸಬಹುದೇ ಎಂಬ ಬಗ್ಗೆ ಇಲಾಖೆಯಿಂದ ಸ್ಪಷ್ಟೀಕರಣ ಕೇಳಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

172 ಹುದ್ದೆಗಳಿಗೆ 345 ಶಿಕ್ಷಕರು!

ಹರಪನಹಳ್ಳಿ ಹೊರತುಪಡಿಸಿ ಜಿಲ್ಲೆಗೆ 4,690 ಹುದ್ದೆಗಳು ಮಂಜೂರಾಗಿದ್ದು, ಸದ್ಯ 4,398 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಇರುವ 292 ಹುದ್ದೆಗಳ ಪೈಕಿ 120 ಹುದ್ದೆಗಳನ್ನು ನೇಮಕಾತಿ ಸಲುವಾಗಿ ಕಾಯ್ದಿರಿಸಲಾಗಿದೆ. ಹೀಗಾಗಿ 172 ಹುದ್ದೆಗಳು ಮಾತ್ರ ಖಾಲಿ ಇವೆ.

ಹೆಚ್ಚುವರಿ ಹಾಗೂ ವರ್ಗಾವಣೆ ಮೂಲಕ ಹರಪನಹಳ್ಳಿಗೆ ಸ್ಥಳನಿಯುಕ್ತಿಗೊಂಡಿದ್ದ ಶಿಕ್ಷಕರ ಪೈಕಿ ಒಟ್ಟು 345 ಪ್ರಾಥಮಿಕ ಶಾಲಾ ಶಿಕ್ಷಕರು ದಾವಣಗೆರೆ ಜಿಲ್ಲೆಯಲ್ಲೇ ಉಳಿದುಕೊಳ್ಳಲು ಬಯಸಿ, ಅಭಿಪ್ರಾಯ ಪತ್ರವನ್ನು ನೀಡಿದ್ದರು. ಇದೀಗ 172 ಹುದ್ದೆಗಳು ಮಾತ್ರ ಖಾಲಿ ಇರುವುದರಿಂದ ಒಂದೇ ಬಾರಿಗೆ ನಿಯೋಜಿತ ಎಲ್ಲಾ ಶಿಕ್ಷಕರನ್ನು ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಹಂತ–ಹಂತವಾಗಿ ಜ್ಯೇಷ್ಠತೆ ಆಧಾರದಲ್ಲಿ ಸಾಮಾನ್ಯ ವರ್ಗಾವಣೆ ಅಥವಾ ಪ್ರತ್ಯೇಕ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಈ ಪ್ರಕ್ರಿಯೆ ನಡೆಸಲು ಇಲಾಖೆಯ ಉಪನಿರ್ದೇಶಕರನ್ನು (ಆಡಳಿತ) ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಮರುಸ್ಥಳನಿಯುಕ್ತಿಗೆ ವಿಧಿಸಿದ ಷರತ್ತುಗಳು

– ದಾವಣಗೆರೆ ಶೈಕ್ಷಣಿಕ ಜಿಲ್ಲೆಗೆ ನೇಮಕಾತಿ ಹೊಂದಿದ್ದರೆ ಮಾತ್ರ ವಾಪಸ್ಸಾಗಲು ಅವಕಾಶವಿದೆ.

– ಹರಪನಹಳ್ಳಿ ಶೈಕ್ಷಣಿಕ ತಾಲ್ಲೂಕಿಗೆ ನೇಮಕಾತಿ ಹೊಂದಿರುವ ಶಿಕ್ಷಕರಿಗೆ ಅವಕಾಶವಿಲ್ಲ.

– 2016–17ನೇ ಸಾಲಿನಲ್ಲಿ ಅಥವಾ ಇತ್ತೀಚಿನ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಸ್ಥಳನಿಯುಕ್ತಿಗೊಂಡು ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಾಗಿರಬೇಕು.

– ಸೇವಾ ಜ್ಯೇಷ್ಠತೆ ಆಧಾರದ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಮಾತ್ರ ಮರು ಸ್ಥಳನಿಯುಕ್ತಿಗೆ ಅವಕಾಶವಿದೆ. ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಕೌನ್ಸೆಲಿಂಗ್‌ ನಡೆಸಬೇಕು.

– ಮರುಸ್ಥಳನಿಯುಕ್ತಿ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳದೇ ಇದ್ದರೆ ಶಿಕ್ಷಕರಿಗೆ ನೀಡಿದ್ದ ಅವಕಾಶ ರದ್ದಾಗುತ್ತದೆ; ಹರಪನಹಳ್ಳಿಯಲ್ಲೇ ಮುಂದಿವರಿಯಬೇಕಾಗುತ್ತದೆ. ಈ ಶಿಕ್ಷಕರ ಹೆಸರನ್ನು ಮುಂದಿನ ಪಟ್ಟಿಗೆ ಪರಿಗಣಿಸುವಂತಿಲ್ಲ.

– ಇದಕ್ಕೆ ಜ್ಯೇಷ್ಠತೆ ನಿಯಮಗಳು ಅನ್ವಯಿಸುತ್ತವೆ. ಮರುಸ್ಥಳನಿಯುಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ.

ಜಿಲ್ಲೆಯಲ್ಲಿನ ಶಿಕ್ಷಕರ ವಿವರ

ವಲಯ–ಮಂಜೂರಾದ ಹುದ್ದೆ–ಸೇವಾನಿರತರು–ಖಾಲಿ ಹುದ್ದೆ–ನೇಮಕಾತಿಗೆ ಕಾಯ್ದಿರಿಸಿದ ಹುದ್ದೆ–ಲಭ್ಯ ಖಾಲಿ ಹುದ್ದೆ

ಚನ್ನಗಿರಿ–1,055–992–63–8–55

ಹೊನ್ನಾಳಿ–839–784–55–16–39

ಹರಿಹರ–685–665–20–20–0

ಜಗಳೂರು–755–674–81–33–48

ದಾವಣಗೆರೆ (ದ)–647–617–30–24–6

ದಾವಣಗೆರೆ (ಉ)–709–666–43–19–24

ಹರಪನಹಳ್ಳಿ–1,300–1,169–131–122–9

ಒಟ್ಟು–5,990–5,567–423–242–181

ಹರಪನಹಳ್ಳಿ ಹೊರತುಪಡಿಸಿ–4,690–4,398–292–120–172

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT