ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ ತಂದಿಟ್ಟ ಸಂಕಷ್ಟ

Last Updated 6 ಡಿಸೆಂಬರ್ 2021, 4:47 IST
ಅಕ್ಷರ ಗಾತ್ರ

ದಾವಣಗೆರೆ: ಅಕಾಲಿಕ ಮಳೆಗೆ ಭತ್ತ ಚಾಪೆ ಹಾಸಿದೆ. ಇರುವ ಅಲ್ಪಸ್ವಲ್ಪ ಬೆಳೆಯನ್ನು ಕೊಯ್ಲು ಮಾಡಲು ಮಳೆಯ ಕಾಟ. ನೆಲ ಇನ್ನೂ ಹಸಿಯಾಗಿಯೇ ಇದ್ದು, ಕೊಯ್ಲಿಗಾಗಿ ಗದ್ದೆಯೊಳಗೆ ಯಂತ್ರವನ್ನು ತೆಗೆದುಕೊಂಡು ಹೋದರೆ ಮಣ್ಣು ಅಂಟುತ್ತದೆ. ಇರುವ ಬೆಳೆಯನ್ನು ಕೊಯ್ಲು ಮಾಡಲು ಆಗದೇ ರೈತರು ಆತಂಕದಲ್ಲಿದ್ದಾರೆ.

ರಾಗಿ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿದೆ. ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಕೊಳೆತು ನೆಲಕ್ಕೆ ಉರುಳುತ್ತಿದೆ. ಭತ್ತ, ಮೆಕ್ಕೆಜೋಳ ನೀರಿನಲ್ಲಿ ನಿಂತು ಮೊಳಕೆಯೊಡೆಯುತ್ತಿದೆ. ಮುಂಗಾರು ಹಂಗಾಮಿನಿಂದಲೂ ಜಿಲ್ಲೆಯಲ್ಲಿ ಮಳೆ ಚೆನ್ನಾಗಿ ಆಗಿದೆ. ಇದರಿಂದ ಹರ್ಷಗೊಂಡ ರೈತರು ಬೆಳೆಗಳು ಕೈಹಿಡಿಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೊಯ್ಲು ಮಾಡುವ ಸಮಯದಲ್ಲೇ ಮಳೆಯಾಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಡಿಸೆಂಬರ್ ವೇಳೆಗೆ ವಾಡಿಕೆಯಂತೆ 110 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ, 223 ಮಿಲಿ ಮೀಟರ್‌ ಮಳೆ ಬಿದ್ದಿದೆ. ಅಂಕಿ–ಅಂಶಗಳ ಪ್ರಕಾರ ಶೇ 103ರಷ್ಟು ಹೆಚ್ಚುವರಿ ಮಳೆಯಾಗಿದೆ. ನವೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ 196ರಷ್ಟು ಹೆಚ್ಚು ಮಳೆ ಸುರಿದು ಬೆಳೆದು ನಿಂತ ಫಸಲನ್ನು ನಾಶ ಮಾಡಿದೆ.

ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ 2.45 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ 1.71 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 1.20 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾಗೂ 26 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ನವೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ 2,847 ಹೆಕ್ಟೇರ್‌ ಭತ್ತ ಹಾಗೂ 46 ಹೆಕ್ಟೇರ್ ಮೆಕ್ಕೆಜೋಳ ನಾಶವಾಗಿದೆ. ಜೊತೆಗೆ 169 ಹೆಕ್ಟೇರ್‌ನಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆಗಳು ಮಳೆಯಿಂದಾಗಿ ನೆಲಕಚ್ಚಿವೆ.

‘ಭತ್ತದ ಗದ್ದೆ ಇನ್ನೂ ಹಸಿಯಾಗಿಯೇ ಇದ್ದು, ಕೊಯ್ಲು ಮಾಡಲು ಆಗುತ್ತಿಲ್ಲ. ಪರಿಹಾರ ಇನ್ನೂ ಬಂದಿಲ್ಲ. ಸಮೀಕ್ಷೆ ಮಾಡಲು ಇಲ್ಲಿಯವರೆಗೂ ಯಾವ ಇಲಾಖೆಯವರು ಬಂದಿಲ್ಲ. 4 ಎಕರೆಗೆ ₹2 ಲಕ್ಷದವರೆಗೂ ಸಿಗುತ್ತಿತ್ತು. ಈಗ ₹1 ಲಕ್ಷ ಬರುವುದೂ ಅನುಮಾನ’ ಎನ್ನುತ್ತಾರೆ ಬಾಡ ಗ್ರಾಮದ ರೈತ ಷಣ್ಮುಖ.

ಅವಳಿ ತಾಲ್ಲೂಕಿನಲ್ಲಿ 3,204 ಹೆಕ್ಟೇರ್ ಬೆಳೆ ನಾಶ

ಹೊನ್ನಾಳಿ: ‘ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ 3,204 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 1,104 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 535 ಹೆಕ್ಟೇರ್ ಭತ್ತ ಹಾಗೂ 15 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆಗಳಿಗೆ ಹಾನಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಹೇಳಿದರು.

‘ನ್ಯಾಮತಿ ತಾಲ್ಲೂಕಿನಲ್ಲಿ ಒಟ್ಟು 1,540 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಅದರಲ್ಲಿ 1,388 ಮುಸುಕಿನ ಜೋಳ, 142 ಹೆಕ್ಟೇರ್ ಭತ್ತ, ಇತರೆ ಬೆಳೆಗಳು 15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ’ ಎಂದರು.

‘2.20 ಎಕರೆ ಭತ್ತದ ಬೆಳೆ ನಾಶದಿಂದ ಕನಿಷ್ಠ ₹60 ಸಾವಿರ ಖರ್ಚು ತಗಲುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಖರ್ಚು ಮಾಡಿದ ಹಣವೂ ದಕ್ಕುವ ಸ್ಥಿತಿಯಲ್ಲಿಲ್ಲ’ ಎಂದರು ರೈತ ಲಿಂಗಮೂರ್ತಿ.

‘ಭತ್ತದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ, ₹3 ಲಕ್ಷ ನಷ್ಟ ಸಂಭವಿಸಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಇನ್ನೂಬಂದಿಲ್ಲ’ ಎಂದರು ಕುರುವ ಗ್ರಾಮದ ಪದ್ಮಮ್ಮ ಪರಮೇಶ್ವರಪ್ಪ.

ಬೆಳೆ ಹಾನಿ ಪರಿಹಾರ ಹೆಚ್ಚಿಸಿ

ಚನ್ನಗಿರಿ: ತಾಲ್ಲೂಕಿನಲ್ಲಿ ನವೆಂಬರ್ ತಿಂಗಳಲ್ಲಿ ಬಿದ್ದ ಭಾರಿ ಮಳೆಗೆ ₹7.77 ಕೋಟಿ ಹಾನಿಯಾಗಿದೆ ಎಂದು ಅಂದಾಜು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ತಾಲ್ಲೂಕಿನ ಬಸವಾಪಟ್ಟಣ, ಚಿರಡೋಣಿ, ಮೆದಿಕೆರೆ, ತ್ಯಾವಣಿಗೆ, ನಲ್ಕುದುರೆ, ತಣಿಗೆರೆ, ಮಂಗೇನಹಳ್ಳಿ, ಕ್ಯಾಂಪ್, ಕಾಶೀಪುರ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

‘2 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಒಂದು ವಾರದೊಳಗೆ ಭತ್ತವನ್ನು ಕಟಾವು ಮಾಡಬೇಕಾಗಿತ್ತು. ಬೆಳೆ ಕೈಗೆ ಬಂತು ಎಂಬಾಗ ಅಕಾಲಿಕ ಮಳೆ ಎಲ್ಲ ಹಾಳು ಮಾಡಿತು. ₹ 5 ಲಕ್ಷ ನಷ್ಟವಾಗಿದೆ’ ಎಂದು ರೈತ ಚಂದ್ರಪ್ಪ ಅಳಲು ತೋಡಿಕೊಂಡರು.

‘ಸರ್ಕಾರ 1 ಹೆಕ್ಟೇರ್‌ಗೆ ₹6,800 ಪರಿಹಾರ ನಿಗದಿ ಮಾಡಿದೆ. ಇದನ್ನು ಹೆಚ್ಚಿಸಬೇಕು’ ಎಂದು ಕೋರಿದರು.

ಹೈರಾಣಾದ ಬಯಲಸೀಮೆ ರೈತ

ಜಗಳೂರು: ತಾಲ್ಲೂಕಿನಲ್ಲಿ ನವೆಂಬರ್ ತಿಂಗಳಲ್ಲಿ ಸುರಿದ ನಿರಂತರ ಮಳೆಯಿಂದಾಗಿ ವಿವಿಧ ಬೆಳೆಗಳು ಹಾನಿಯಾಗಿದ್ದು, ಬಯಲುಸೀಮೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಹಾಗೂ ಶೇಂಗಾ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಈಗ ಸಾಲ ಮಾಡಿ ಎರಡು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಮಳೆಗೆ ಮೆಣಸಿನ ಗಿಡಗಳಲ್ಲಿ ಹೂ ಹಾಗೂ ಕಾಯಿಗಳು ಉದುರಿವೆ. ಬೆಳೆ ನಷ್ಟದಿಂದ ಸಾಲ ಮೈಮೇಲೆ ಬಂದಿದೆ’ ಎಂದು ಬುಳ್ಳನಳ್ಳಿ ಗ್ರಾಮದ ರೈತ ನಾಗಪ್ಪ ಅಳಲು ತೋಡಿಕೊಂಡರು.

‘2,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ವರದಿ ಸಲ್ಲಿಸಿದ್ದು, ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.

‘ಕಸಬಾ ಹಾಗೂ ಸೊಕ್ಕೆ ಹೋಬಳಿಯಲ್ಲಿ ಅಕಾಲಿಕ ಮಳೆಯಿಂದ ಕಡಲೆ ಎಲೆ–ಹೂ ಮತ್ತು ಕಾಯಿ ಉದುರಿ, ಕೀಟಬಾಧೆ ಹೆಚ್ಚಾಗಿ ಬೆಳೆ ನಷ್ಟವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸುಲು ಮಾಹಿತಿ ನೀಡಿದರು.

ಬೆಳೆ ನೀರುಪಾಲು

ಹರಪನಹಳ್ಳಿ: ವರುಣನ ಅವಕೃಪೆಯಿಂದ ತಾಲ್ಲೂಕಿನಲ್ಲಿ ಬೆಳೆಗಳು ನೀರುಪಾಲಾಗಿದೆ.

‘ಪ್ರತಿ ಎಕರೆಗೆ ₹30 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದೆವು. ಖರ್ಚು ₹ 1 ಲಕ್ಷಕ್ಕೂ ಅಧಿಕವಾಗಿದೆ. ವಿಪರೀತ ಮಳೆಯಿಂದಾಗಿ ಹುಲುಸಾಗಿ ಬೆಳೆದಿದ್ದ ಮೆಣಸಿನ ಕಾಯಿ ಗಿಡ ನಾಶವಾಗಿದೆ’ ಎಂದು ಮೈದೂರು ಗ್ರಾಮದ ರೈತ ಕ್ಯಾರಕಟ್ಟೆ ರವಿ ಅಳಲು ತೋಡಿಕೊಂಡರು.

‘ಈ ವರ್ಷ ತಾವರಗುಂದಿಯ ರೈತರು 2 ಸಾವಿರಕ್ಕೂ ಅಧಿಕ ಚೀಲದಷ್ಟು ಭತ್ತವನ್ನು ಹಾಕಿದ್ದೆವು. ಏಕಾಏಕಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಭತ್ತ ಕೊಚ್ಚಿಕೊಂಡು ಹೋಯಿತು’ ಎಂದು ತಾವರಗುಂದಿ ರೈತ ಮಲ್ಕಪ್ಪ ಹೇಳಿದರು.

‘ನಷ್ಟದ ಶೇ 50ರಷ್ಟು ಪರಿಹಾರ ಕೊಡಿ’

ಹರಿಹರ: ಅಕಾಲಿಕ ಮಳೆ, ಬಿರುಸಾದ ಗಾಳಿಯಿಂದ ಮೂರು ಎಕರೆ ಭತ್ತ ನೆಲಕ್ಕೊರಗಿದೆ. ನಷ್ಟದ ಬಗ್ಗೆ ಕಂದಾಯ, ಕೃಷಿ ಇಲಾಖೆ ಪರಿಶೀಲನೆ ನಡೆಸಿದೆ. ಆದರೆ ಈವರೆಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಸರ್ಕಾರ ಕೊಡುವ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ನಷ್ಟ ಪ್ರಮಾಣದ ಶೇ 50ರಷ್ಟನ್ನಾದರೂ ಪರಿಹಾರ ಕೊಟ್ಟರೆ ರೈತರಿಗೆ ಬಲ ಬರುತ್ತದೆ ಎಂದು ನಂದಿತಾವರೆ ಗ್ರಾಮದ ರೈತ ಎಂ.ಬಿ. ಮುರುಗಯ್ಯ ಹೇಳಿದರು.

‘ಅಡಿಕೆ ತೋಟದಲ್ಲಿ 5 ಎಕರೆ ಕರಿಮೆಣಸು ಬಿತ್ತನೆ ಮಾಡಿದ್ದೆ. ಅತಿವೃಷ್ಟಿಯಿಂದ ಅರ್ಧ ಎಕರೆಯಷ್ಟು ಬಳ್ಳಿ ಕಪ್ಪಾಗಿದೆ. ₹ 2 ಲಕ್ಷ ನಷ್ಟವಾಗಿದೆ. ಶೇ 30ರಷ್ಟು ಹಾನಿಯಾದರೆ ಮಾತ್ರ ಪರಿಹಾರಕ್ಕೆ ಅರ್ಹತೆ ಎಂದಿದ್ದರಿಂದ ಅರ್ಜಿ ಹಾಕಿಲ್ಲ. ಎಷ್ಟೇ ಪ್ರಮಾಣದಲ್ಲಿ ನಷ್ಟವಾದರೂ ಸರ್ಕಾರ ಪರಿಹಾರ ನೀಡಬೇಕು’ ಎಂದು ಯಲವಟ್ಟಿಯ ಮಂಜನಾಯ್ಕ್ ಆಗ್ರಹಿಸಿದರು.

12 ಎಕರೆಯಲ್ಲಿ ಭತ್ತ ಬೆಳೆ ಬೆಳೆದಿದ್ದು, ಅರ್ಧಕ್ಕರ್ಧ ಹಾನಿಯಾಗಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಕಂದಾಯ ಇಲಾಖೆಯವರು ಸಮೀಕ್ಷೆ ಮಾಡಿ ಹೋಗಿದ್ದಾರೆ. ಕಳೆದ ಬಾರಿಯೂ ಪರಿಹಾರ ಬಂದಿಲ್ಲ. ಕೊಯ್ಲು ಮಾಡಲು ಯಂತ್ರ ಸಿಗುತ್ತಿಲ್ಲ. -ಕುಬೇಂದ್ರಪ್ಪ, ಬಾಡ ಗ್ರಾಮದ ರೈತ

ಬೆಳೆಹಾನಿಯಾದ 24 ಗಂಟೆಯೊಳಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ. 6 ತಿಂಗಳ ಹಿಂದೆ ಆಲಿಕಲ್ಲು ಮಳೆ ಬಿದ್ದು ನಷ್ಟವಾದ ಬೆಳೆಗೂ ಕೆಲವೇ ಕೆಲವು ರೈತರಿಗೆ ಪರಿಹಾರ ನೀಡಿದ್ದಾರೆ. ಉಳಿದವರಿಗೆ ಇನ್ನೂ ಪರಿಹಾರ ನೀಡಿಲ್ಲ.

–ಪದ್ಮಮ್ಮ ಪರಮೇಶ್ವರಪ್ಪ, ರೈತ ಮಹಿಳೆ, ಕುರುವ ಗ್ರಾಮ

ಆಸೆ, ಕನಸುಗಳನ್ನು ಕಟ್ಟಿಕೊಂಡು ನದಿ ತೀರದಲ್ಲಿ ಭತ್ತ ಚೆಲ್ಲಿದ್ದ ರೈತರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಆರು ತಿಂಗಳ ಪರಿಶ್ರಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

-ಮಲ್ಕಪ್ಪ, ತಾವರಗುಂದಿ ರೈತ

ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಕೃಷಿ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ರೈತರಿಗೂ ಹಣ ಸಿಗುತ್ತದೆ.

–ಶ್ರೀನಿವಾಸ್ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ

ತೋಟಗಾರಿಕಾ ಬೆಳೆಗಳು ಹಾಳಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಕೊಟ್ಟರೆ ಪರಿಶೀಲಿಸಲಾಗುವುದು. ಒಣಭೂಮಿ ಹಾಗೂ ನೀರಾವರಿ ಭೂಮಿಗೆ ಇಂತಿಷ್ಟು ಪರಿಹಾರ ನಿಗದಿಪಡಿಸಲಾಗುತ್ತದೆ.

ರಾಘವೇಂದ್ರ ಪ್ರಸಾದ್, ತೋಟಗಾರಿಕಾ ಇಲಾಖೆ, ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT