ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ವಿದ್ಯುತ್ ಪೂರೈಕೆ ಆಗ್ರಹ: ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

Published 12 ಅಕ್ಟೋಬರ್ 2023, 8:32 IST
Last Updated 12 ಅಕ್ಟೋಬರ್ 2023, 8:32 IST
ಅಕ್ಷರ ಗಾತ್ರ

ಹರಿಹರ: ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ನೂರಾರು ರೈತರು ಬುಧವಾರ ತಾಲ್ಲೂಕಿನ ಕುರುಬರಹಳ್ಳಿ ಸಮೀಪ ಹರಪನಹಳ್ಳಿ ಹೆದ್ದಾರಿ ಬಂದ್ ಮಾಡಿ 7 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಎರಡೂ ಬದಿ ಹಲವು ಗಂಟೆಗಳ ಕಾಲ ಲಾರಿ, ಬಸ್‌, ಕಾರುಗಳು ನಿಂತಿದ್ದವು. ಆಂಬುಲೆನ್ಸ್ ಹಾಗೂ ಆಸ್ಪತ್ರೆಗೆ ಹೋಗುವವರಿಗೆ ಮುಂದೆ ಸಾಗಲು ಅನುವು ಮಾಡಿಕೊಡಲಾಗುತ್ತಿತ್ತು.

ಸಂಜೆಯವರೆಗೂ ಹೆದ್ದಾರಿ ಬಂದ್‌ ಮಾಡಿದ ರೈತರು, ಮಧ್ಯಾಹ್ನ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡಿದರು.

ರಾತ್ರಿ ವೇಳೆ 4 ಗಂಟೆ ಹಗಲು 3 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಆದರೆ ಇತ್ತೀಚಿಗೆ ಹಗಲು ಮತ್ತು ರಾತ್ರಿ ನಿಗದಿಯಂತೆ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಮಳೆ ಇಲ್ಲದೇ ಈಗಾಗಲೇ ಕಂಗಾಲಾಗಿರುವಾಗ ವಿದ್ಯುತ್‌ ಕೈಕೊಡುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿಗದಿಯಂತೆ ವಿದ್ಯುತ್ ಸರಬರಾಜು ಮಾಡದೆ ಇರುವುದರಿಂದ ಬಿತ್ತಿದ ಬೆಳೆ ಕೈಗೆಟುಕದ ದುಸ್ಥಿತಿ ಎದುರಾಗಿದೆ. ರೈತರು ನಿದ್ದೆ ಬಿಟ್ಟು ಹತ್ತಾರು ಬಾರಿ ಮೋಟರ್ ಆನ್ ಮಾಡಲು ಜಮೀನುಗಳಿಗೆ ಸುತ್ತಾಡಬೇಕಿದೆ. ರಾತ್ರಿ ವೇಳೆ ವಿಷ ಜಂತುಗಳ ಹಾವಳಿ ಇದೆ ಎಂದು ರೈತರು ದೂರಿದರು. 

‘ರಾಜ್ಯದ ಜನರಿಗೆ ಹಲವು ಗ್ಯಾರಂಟಿಗಳನ್ನು ನೀಡಿರುವ ರಾಜ್ಯ ಸರ್ಕಾರ ಮೊದಲು ರೈತರಿಗೆ 7 ಗಂಟೆ ವಿದ್ಯುತ್ ನೀಡಲಿ’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಬೆಸ್ಕಾಂ ಎಇಇ ನಾಗರಾಜ್‌ ನಾಯ್ಕ್ ಮಾಡಿದ ಮನವಿಗೆ ಒಪ್ಪದ ಪ್ರತಿಭಟನಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಬೆಸ್ಕಾಂ ಎಸ್‌ಇ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. 

ನಂತರ ಸಂಜೆ 4ಕ್ಕೆ ಬಂದ ಬೆಸ್ಕಾಂ ಇಇ ವಿನಯ್ ಕುಮಾರ್‌, ‘ಮಳೆ ಕೊರತೆಯಿಂದ ಜಲ ವಿದ್ಯುತ್ ಸ್ಥಗಿತಗೊಂಡಿದೆ. ಕಲ್ಲಿದ್ದಿಲಿನ ವಿದ್ಯುತ್ ಮಾತ್ರ ಲಭ್ಯವಿದೆ. ನೆರೆ ರಾಜ್ಯಗಳಲ್ಲೂ ಕೊರತೆ ಇರುವುದರಿಂದ ವಿದ್ಯುತ್ ಸಿಗುತ್ತಿಲ್ಲ. ಹಗಲಿಗೆ ನಾಲ್ಕು ಗಂಟೆ ಹಾಗೂ ಲಭ್ಯತೆ ಆಧರಿಸಿ ರಾತ್ರಿ ಸಮಯದಲ್ಲೂ ವಿದ್ಯುತ್ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು‘ ಎಂದು ಭರವಸೆ ನೀಡಿದರು.

ನಾಳೆ ಬೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಸ್ಥಳಕ್ಕೆ ಬಂದು ಭರವಸೆ ನೀಡಬೇಕು. ತಪ್ಪಿದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ರೈತರು ಎಚ್ಚರಿಸಿ, ಬಳಿಕ ಪ್ರತಿಭಟನೆ ಕೈಬಿಟ್ಟರು. 

ಸಾರಥಿಯ ಮರೆಗೌಡ್ರ ಪ್ರಕಾಶಪ್ಪ, ರಾಜಪ್ಪ, ಚೇತನ, ಮುರುಳೀಧರ, ಕೆಂಚನಹಳ್ಳಿ ಪರಮೇಶ್, ಕೊಂಡಜ್ಜಿ ಕುಮಾರ್, ವಿಜಯ್ ಕುಮಾರ್, ಕುರುಬರಹಳ್ಳಿ ರಾಜೇಶ್, ಗಂಗನರಸಿ ಕುಮಾರ್, ಗೌಡ್ರು ಉಮೇಶ್, ಗೌಡ್ರು ಬಸವರಾಜ್, ಪ್ರಭುದೇವ್, ಮಲ್ಲಪ್ಪ, ರಾಘವೇದ್ರ, ನಾಗೇಂದ್ರಪ್ಪ, ಕರಿಬಸಪ್ಪ, ಮಹದೇವಪ್ಪ, ಪ್ರದೀಪ್, ಪ್ರಜ್ವಲ್ ಸೇರಿದಂತೆ ಚಿಕ್ಕಬಿದರಿ, ಸಾರಥಿ, ಕರಲಹಳ್ಳಿ, ಕೊಂಡಜ್ಜಿ, ಕೆಂಚನಹಳ್ಳಿ, ಕುರುಬರಹಳ್ಳಿ, ಹೊಟ್ಟಿಗೆನಹಳ್ಳಿ, ದುಗ್ಗಾವತ್ತಿ ಹಾಗೂ ಹಲವು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ರೈತರು ಹೆದ್ದಾರಿಯಲ್ಲೇ ಅಡುಗೆ ಮಾಡಿದರು
ರೈತರು ಹೆದ್ದಾರಿಯಲ್ಲೇ ಅಡುಗೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT