ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ| ಆಟೊ ಚಾಲಕರಿಂದ ಪ್ರಶ್ನೆಗಳ ಸುರಿಮಳೆ: ತಬ್ಬಿಬ್ಬಾದ ಶಾಸಕ

ಯುಜಿಡಿ, ಜಲಸಿರಿ ಕಾಮಗಾರಿ ಕಳಪೆ: ಆರೋಪ
Last Updated 9 ಜೂನ್ 2022, 2:03 IST
ಅಕ್ಷರ ಗಾತ್ರ

ಹರಿಹರ: ‘ಯುಜಿಡಿ, ಜಲಸಿರಿ ಕಳಪೆ ಕಾಮಗಾರಿಯಿಂದ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿಸುತ್ತೇನೆ ಎಂದು ಹೇಳುತ್ತಲೇ ಹಿಂದಿನ ನಗರಸಭೆ ಪೌರಾಯುಕ್ತರು ಹಾಗೂ ಗುತ್ತಿಗೆದಾರರು ಊರು ಬಿಟ್ಟು ಹೋದರು. ಜನಪ್ರತಿನಿಧಿಯಾಗಿ ನೀವು ಏನೂ ಮಾಡಲಾಗಲಿಲ್ಲವಲ್ಲ’ ಎಂದು ಆಟೊ ಚಾಲಕರು ಶಾಸಕ ಎಸ್. ರಾಮಪ್ಪ ಅವರಿಗೆ ಬುಧವಾರ ಪ್ರಶ್ನೆಗಳ ಸುರಿಮಳೆ ಗೈದರು.

ನಗರದ ಹಳೆ ಪಿ.ಬಿ.ರಸ್ತೆ ಪಶು ಆಸ್ಪತ್ರೆ ಎದುರು ಆಟೊ ನಿಲ್ದಾಣದ ಕಾಮಗಾರಿ ಗುದ್ದಲಿ ಪೂಜೆಗೆ ಬಂದಿದ್ದ ಶಾಸಕರು ಆಟೊ ಚಾಲಕರ ಪ್ರಶ್ನೆಗಳಿಂದ ಮುಜುಗರ ಅನುಭವಿಸಿದರು.

ಯುಜಿಡಿ ಹಾಗೂ ಜಲಸಿರಿ ಕಾಮಗಾರಿಯಿಂದ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲು ಯೋಜನೆಯಿಂದ ಹಣ ಮಂಜೂರಾಗಿದೆ.
ದುರಸ್ತಿ ಕಾರ್ಯ ಕಳಪೆಯಾದ್ದರಿಂದ ನಗರದಲ್ಲಿ ಎಲ್ಲಾ ರಸ್ತೆಗಳು ಗುಂಡಿಮಯವಾಗಿವೆ. ಆಟೊಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತವೆ. ದುಡಿದ ಹಣ ರಿಪೇರಿಗೆ ಖರ್ಚಾಗುತ್ತಿದೆ. ಆಟೊದಲ್ಲಿ ಕುಳಿತ ರೋಗಿಗಳು, ಹಿರಿಯ ನಾಗರಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ‌ಈ ಹಿಂದೆ ಆಟೊ ಚಾಲಕರು, ಮಾಲೀಕರ ಸಂಘದಿಂದ ಪ್ರತಿಭಟನೆ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಯಾರು ಮಾಡಿದ್ದಾರೆ. ನಗರಸಭಾ ಸದಸ್ಯರು ಏಕೆ ಮೌನವಾಗಿದ್ದಾರೆ. ನೀವು ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಶಾಸಕರನ್ನು ಪ್ರಶ್ನಿಸಿದರು.

ತಬ್ಬಿಬ್ಬಾದ ಶಾಸಕರು, ‘ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಸಂಪೂರ್ಣವಾಗಿ ತೆಗೆದು ಹೊಸ ರಸ್ತೆಗಳ ನಿರ್ಮಾಣಕ್ಕೆ ₹ 20 ಕೋಟಿ ಅನುದಾನ ಮೀಸಲಿಡಲಾಗಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಚಾಲಕರನ್ನು ಸಮಾಧಾನಪಡಿಸಿದರು.

‘ಇಲ್ಲದಿದ್ದರೆ ಶೀಘ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ಚಾಲಕರು ಎಚ್ಚರಿಸಿದರು.

ನಗರಸಭೆ ಸದಸ್ಯರಾದ ಶಂಕರ್ ಖಟಾವ್‌ಕರ್, ಮುಜಮ್ಮಿಲ್, ಇಬ್ರಾಹೀಂ ಖುರೇಶಿ, ಕಾಂಗ್ರೆಸ್ ಮುಖಂಡರಾದ ದಾದಾಪೀರ್ ಭಾನುವಳ್ಳಿ, ರೇವಣಸಿದ್ದಪ್ಪ, ಆಟೊ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಗೌಡ, ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT