ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸಕ್ಕೆ ಭರದ ಸಿದ್ಧತೆ

ದಕ್ಷಿಣ ಕಾಶಿ ಖ್ಯಾತಿ: 1224ರಲ್ಲಿ ಸ್ಥಾಪಿತ ದೇವಸ್ಥಾನ
Last Updated 4 ಫೆಬ್ರುವರಿ 2023, 4:50 IST
ಅಕ್ಷರ ಗಾತ್ರ

ಹರಿಹರ: ದಕ್ಷಿಣ ಕಾಶಿ ಖ್ಯಾತಿಯ, 12ನೇ ಶತಮಾನದ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ ಫೆ. 5ರಂದು ನಡೆಯಲಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.

ಹಿನ್ನೆಲೆ: 1224ರಲ್ಲಿ ಹೊಯ್ಸಳ ದೊರೆ 2ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಳಾಲ್ವನು ಈ ದೇವಾಲಯ ನಿರ್ಮಿಸಿದನೆಂದು ಶಾಸನದಲ್ಲಿ ಉಲ್ಲೇಖವಿದೆ.

ಹರಿ ಮತ್ತು ಹರ ದೇವರಿಬ್ಬರೂ ಒಂದೆ ದೇಹಿಯಾಗಿ ಇರುವುದು ಇಲ್ಲಿಯ ಮೂರ್ತಿಯ ವಿಶೇಷತೆಯಾಗಿದೆ. ಈ ದೇವಸ್ಥಾನದ ಕಾರಣದಿಂದಲೇ ಈ ನಗರಕ್ಕೆ ಹರಿಹರ ಹೆಸರು ಬಂದಿದೆ. ಪುರಾಣದ ಪ್ರಕಾರ ದೇವ, ದೇವತೆಗಳಿಗೆ ಕಂಟಕನಾಗಿದ್ದ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿ(ವಿಷ್ಣು) ಮತ್ತು ಹರ(ಶಿವ)ರು ಜೊತೆಗೂಡಿ ಹರಿಹರ ಸ್ವಾಮಿಯ ಅವತಾರ ತಾಳಿದರು ಎನ್ನಲಾಗಿದೆ.

ದೇವಾಲಯದಲ್ಲಿನ ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿ ಹರಿಹರೇಶ್ವರವಾಗಿದೆ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು 7 ಅಡಿಯ ಏಕಶಿಲಾ ವಿಗ್ರಹವಾಗಿರುವುದು ವಿಶೇಷ.

ಈ ಸುಂದರ ಹರಿಹರೇಶ್ವರ ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖ ಮಂಟಪಗಳಿಂದ ನಿರ್ಮಿತವಾಗಿದೆ. ಮುಖ ಮಂಟಪವು 60 ಕಲಾತ್ಮಕ ಕಂಬಗಳಿಂದ ರಚನೆಯಾಗಿದ್ದು, ಇವು ಹೊಯ್ಸಳರ ಕಾಲದ ಶೈಲಿಯ ಕಲಾಕೃತಿಯನ್ನು ಬಿಂಬಿಸುತ್ತವೆ.

ದೇವಾಲಯದ ಮುಂಭಾಗದ ಎರಡೂ ಪಾರ್ಶ್ವಗಳಲ್ಲಿ ಅತ್ಯದ್ಭುತ ಎನಿಸುವ ಅತ್ಯಾಕರ್ಷಕವಾದ ದೀಪ ಸ್ತಂಭಗಳನ್ನು ನಿರ್ಮಿಸಲಾಗಿದೆ.

ಫೆ. 5ರಂದು ಮಾಘ ಮಾಸದ ಶುಕ್ಲ ಭಾರತ ಹುಣ್ಣಿಮೆಯಂದು ದಾಸರು ದೇವಸ್ಥಾನಕ್ಕೆ ಬಂದ ನಂತರ ಪಲ್ಲಕ್ಕಿಯಲ್ಲಿ ಹರಿಹರೇಶ್ವರ ದೇವರ ಉತ್ಸವ ಮೂರ್ತಿ ಕರೆತಂದು ತೇರುಗಡ್ಡೆ ವೃತ್ತದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರು ‘ಗೋವಿಂದ, ಗೋವಿಂದ, ಹರ ಹರ ಮಹದೇವ’ ಎಂದು ಹರ್ಷೊದ್ಗಾರ ಮಾಡುತ್ತಾರೆ. ಬೆಳಿಗ್ಗೆ 10.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರಿಹರೇಶ್ವರನ ಬ್ರಹ್ಮರಥೋತ್ಸವ
ಜರುಗಲಿದೆ.

ಗಜಾನನ ಸಂಘ, ಸಾಂಸ್ಕೃತಿಕ ಕೇಂದ್ರ ಕೋಟೆ ಇವರಿಂದ ದೇವಸ್ಥಾನದ ಸಮೀಪ ಹಲವು ವರ್ಷಗಳಿಂದ ರಥೋತ್ಸವಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ನಗರದ ವಿವಿದ ಸಂಘ-ಸಂಸ್ಥೆಗಳು ಭಕ್ತರಿಗೆ ಉಚಿತವಾಗಿ ಮಜ್ಜಿಗೆ, ಪಾನಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಭಕ್ತಿಯ ಸೇವೆ ಮಾಡುತ್ತಾರೆ.

ಮೂರು ದಿನ ಜಾತ್ರೆ: ರಥೋತ್ಸವದ ನಿಮಿತ್ತ ಭಾನುವಾರದಿಂದ ಮೂರು ದಿನಗಳ ಕಾಲ ದೇವಸ್ಥಾನ ರಸ್ತೆಯಲ್ಲಿ ಜಾತ್ರೆ ನಡೆಯಲಿದೆ. ಹಳ್ಳಿ ಜಾತ್ರೆ ನೋಡಿರುವವರು, ಹರಿಹರ ನಗರದ ಜಾತ್ರೆಯ ಸೊಬಗನ್ನೂ ಸವಿಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT