ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಬೇಸಿಗೆಯೊಳಗೆ ಶಾಶ್ವತ ಪರಿಹಾರ ಕಲ್ಪಿಸಿ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸೂಚನೆ
Last Updated 27 ಸೆಪ್ಟೆಂಬರ್ 2022, 4:14 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರವಾಹದಿಂದ ಸಮಸ್ಯೆ ಎದುರಿಸುವ ನದಿ ಪಾತ್ರದ ನಿವಾಸಿಗಳಿಗೆ ಬೇಸಿಗೆಯೊಳಗೆ ಪರ್ಯಾಯ ಕಲ್ಪಿಸಿಕೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅಧಿಕಾರಿಗಳಿಗೆ ಸೂಚಿಸಿದರು.

ಶಾಂತಿಸಾಗರ ಹಿನ್ನೀರಿನಿಂದ ರುದ್ರಾಪುರ ಗ್ರಾಮ ನೀರಿನಿಂದ ಆವೃತವಾಗಿದ್ದ ಜನ ತೊಂದರೆ ಅನುಭವಿಸಿದರು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು ಮೇಲಿನಂತೆ ಸೂಚಿಸಿದರು.

‘ಹರಿಹರ, ಹೊನ್ನಾಳಿ ತಾಲ್ಲೂಕುಗಳಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಮಸ್ಯೆಯಾಗುತ್ತಿದೆ. ಶಾಶ್ವತ ಸೂರು ಕಲ್ಪಿಸಿ ಸಂತ್ರಸ್ತರ ಮನವೊಲಿಸಿ ಅಲ್ಲಿಗೆ ಸ್ಥಳಾಂತರಿಸಬೇಕು. ಲೋಕೋಪಯೋಗಿ, ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆಯವರು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಕೆಆರ್‌ಐಡಿಎಲ್ ವಿರುದ್ಧ ಕ್ರಮಕ್ಕೆ ಸೂಚನೆ: ಚನ್ನಗಿರಿಯಲ್ಲಿ ಒಂದೂವರೆ ವರ್ಷದಿಂದ ಆಯುಷ್ ಇಲಾಖೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ವಿರುದ್ಧ ಇಲಾಖೆಯ ಡಾ.ಶಂಕರಗೌಡ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಚಿವರು ಕ್ರಮಕ್ಕೆ ಸೂಚಿಸಿದರು.

‘ಶೇ 18ರಷ್ಟು ಜಿಎಸ್‌ಟಿ ಹೆಚ್ಚಾಗಿದ್ದರಿಂದ ಹೊಸ ಅಂದಾಜುಪಟ್ಟಿ ತಯಾರಿಸಬೇಕು. 4 ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ’ ಎಂದು ಕೆಆರ್‌ಡಿಎಲ್ ಅಧಿಕಾರಿ ಸಭೆಗೆ ತಿಳಿಸಿದರು.

ಶುಚಿತ್ವ ಕಾಪಾಡಲು ಸೂಚನೆ: ಚಿಗಟೇರಿ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಬೇಕು. ಕೆಲವು ಮಹಿಳೆಯರು ಬೆಳಿಗ್ಗೆಯೇ ಆಸ್ಪತ್ರೆಗೆ ಬಂದು ಸಂಜೆಯವರೆಗೂ ಕುಳಿತಿರುತ್ತಾರೆ. ಬಡ ಮಹಿಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಬೇಕು. ದೂರು ಬಂದರೆ ನೀವೇ ಜವಾಬ್ದಾರರು’ ಎಂದು ಸಚಿವರು ಆಸ್ಪತ್ರೆಯ ಅಧೀಕ್ಷಕ ಡಾ. ಷಣ್ಮುಖಪ್ಪ ಅವರಿಗೆ ಸೂಚಿಸಿದರು.

ಡಯಾಲಿಸಿಸ್ ಸಿಬ್ಬಂದಿ ಕೊರತೆ ಇದ್ದು, ಎಕ್ಸ್‌ರೇ ಯಂತ್ರ ಕೆಟ್ಟಿದೆ ಎಂದು ಷಣ್ಮುಖಪ್ಪ ಹೇಳಿದರು.

ಸರ್ಕಾರದ ಸಂಪನ್ಮೂಲ ಹೆಚ್ಚಿಸಿ: ಮೀನುಮರಿ ಸಾಕಣೆಗೆ ಕೆರೆಗಳ ಟೆಂಡರ್ ಕರೆಯದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ‘ಉದಾಸೀನ ಮಾಡಬೇಡಿ, ಇದನ್ನು ಗಂಭೀರವಾಗಿ ಪರಿಗಣಿಸಿ’ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

‘ಕೆರೆಗಳು ಭರ್ತಿಯಾಗಿದ್ದು, ಟೆಂಡರ್ ಕರೆಯಲು ಇದು ಸೂಕ್ತ ಸಮಯ. ಇದರಿಂದ ಸರ್ಕಾರಕ್ಕೆ ಆದಾಯವೂ ಬರಲಿದೆ’ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್‌. ನವೀನ್
ತಿಳಿಸಿದರು.

ಸಂಸದರ ಪ್ರಶ್ನೆ: ‘ಅಣಜಿ ಕೆರೆ ಕೋಡಿ ಬಿದ್ದು, 200 ಎಕರೆಯಷ್ಟು ಬೆಳೆ ಹಾಳಾಗಿದೆ. ಟೀವಿ ಚಾನಲ್‌ಗಳು ಸುದ್ದಿ ಬಿತ್ತರಿಸುತ್ತವೆ. ಸಮಸ್ಯೆಗೆ ಪರಿಹಾರ ದೊರೆತಾಗ ನಮ್ಮ ಇಂಪ್ಯಾಕ್ಟ್ ಎಂದು ತೋರಿಸುತ್ತವೆ. ಹಾಗಾದರೆ ನಾವು ಏಕೆ ಇರಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರಶ್ನಿಸಿದರು.

ಗೈರಾದ ಅಧಿಕಾರಿಗೆ ನೋಟಿಸ್: ಪೂರ್ವಾನುಮತಿ ಪಡೆಯದೆ ಕೆಡಿಪಿ ಸಭೆಗೆ ಗೈರು ಹಾಜರಾದ ಬೆಸ್ಕಾಂ ದಾವಣಗೆರೆ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್ ನೀಡಿ ಪ್ರತಿಯನ್ನು ಇಲಾಖೆಯ ಎಂ.ಡಿ ಹಾಗೂ ಜಿಲ್ಲಾ ಸಚಿವರ ಕಾರ್ಯಾಲಯಕ್ಕೂ ಕಳುಹಿಸುವಂತೆ ಸಚಿವ ಬೈರತಿ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ಇದ್ದರು.

ಔಷಧ ಚೀಟಿ ಬರೆದುಕೊಡುವುದಾದರೆ ನಾವ್ಯಾಕೆ ಇರಬೇಕು?

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಿರುವ ಆರೋಪಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಜನರಿಗೆ ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧ ಸಿಗಬೇಕು. ನೀವು ಚೀಟಿ ಬರೆದು ಹೊರಗಡೆ ಕಳುಹಿಸಿದರೆ ನಾವು ಏಕಿರಬೇಕು. ಸರ್ಕಾರ ಏಕೆ ಹಣ ಖರ್ಚು ಮಾಡಬೇಕು. ಸರ್ಕಾರ ಆರೋಗ್ಯಕ್ಕೆ ಒತ್ತು ನೀಡಿ, ಹಣ ಖರ್ಚು ಮಾಡುತ್ತಿದೆ. ಅದನ್ನು ಸರಿಯಾಗಿ ತಲುಪಿಸದಿದ್ದರೆ ಜನರು ನಮ್ಮನ್ನು ದೂರುತ್ತಾರೆ. ಮುಂದಿನ ತಿಂಗಳೊಳಗೆ ವ್ಯವಸ್ಥೆ ಸರಿಪಡಿಸದೇ ಇದ್ದರೆ ಗಂಭೀರ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಅವರು ಎಚ್ಚರಿಸಿದರು.

‘ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದೀರಿ ಎಂದು ಬಹಳಷ್ಟು ದೂರುಗಳು ಬಂದಿವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಡಿಎಚ್‌ಒ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಚರ್ಮ ಗಂಟು ರೋಗಕ್ಕೆ 30,000 ಲಸಿಕೆ

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಬಗ್ಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು. ಪ್ರತಿ ತಾಲ್ಲೂಕಿಗೂ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿ ವರದಿ ಸಲ್ಲಿಸಿ, ಜಾನುವಾರುಗಳಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಬೈರತಿ ಬಸವರಾಜ ಸೂಚಿಸಿದರು.

‘ಜಿಲ್ಲೆಯಲ್ಲಿ 4ರಿಂದ 5 ಗ್ರಾಮಗಳಲ್ಲಿ ಚರ್ಮಗಂಟು ರೋಗ ಲಕ್ಷಣ ಕಾಣಿಸಿಕೊಂಡಿದೆ. ಈಗಾಗಲೇ 30,000 ಡೋಸ್ ಲಸಿಕೆ ಬಂದಿದೆ. ಅಕ್ಟೋಬರ್ 15ಕ್ಕೆ ಮತ್ತೆ 30,000 ಡೋಸ್ ಲಸಿಕೆ ಬರಲಿದೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸುಂಕದ ತಿಳಿಸಿದರು.

ಅಧಿಕಾರಿಗಳು ಅಂಗನವಾಡಿಯಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡಿ, ಆಹಾರದ ಗುಣಮಟ್ಟದ ಅರಿವಾಗುತ್ತದೆ.</p>
ಕೆ.ಎಸ್‌. ನವೀನ್, ವಿಧಾನಪರಿಷತ್ ಸದಸ್ಯ.

ಸರ್ಕಾರದಿಂದ ಬರುವಾಗ ತೊಗರಿ ಬೇಳೆಯ ಗುಣಮಟ್ಟ ಸರಿಯಾಗಿರುತ್ತದೆ, ಆದರೆ ಆಹಾರ ಮಾತ್ರ ಕಳಪೆಯಾಗಿರುತ್ತದೆ. ಅಂಗಡಿಯನ್ನು ಬುಕ್ ಮಾಡಿಕೊಂಡಿರುತ್ತಾರೆ ಎಂಬ ಸಂಶಯ ಬರುತ್ತದೆ.

ಜಿ.ಎಂ.ಸಿದ್ದೇಶ್ವರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT