ಭಾನುವಾರ, ಜುಲೈ 25, 2021
25 °C
ಜಿಲ್ಲೆಯಲ್ಲಿ ಪೊಲೀಸರಿಗೂ ಸೋಂಕು ಬಂದ ಎರಡನೇ ಪ್ರಕರಣ ಇದು

ವಿಚಾರಣಾಧೀನ ಕೈದಿಗಳನ್ನೂ ನೋಡಿಕೊಂಡಿದ್ದ ಎಚ್‌ಸಿ

ಬಾಲಕೃಷ್ಣ ಪಿ.ಎಚ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ಇರುವುದು ಮಂಗಳವಾರ ದೃಢಪಟ್ಟಿರುವ ಹೆಡ್‌ಕಾನ್‌ಸ್ಟೆಬಲ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವಿಚಾರಣಾಧೀನ ಕೈದಿಗಳನ್ನು ನೋಡಿಕೊಳ್ಳುವ ಕೆಲಸವನ್ನೂ ಮಾಡಿದ್ದರು.

ಕೈದಿಗಳನ್ನು ಕೊರೊನಾ ಪರೀಕ್ಷೆ ಮಾಡಿಸಬೇಕು ಎಂದು ಜೈಲಿನ ಮೇಲಧಿಕಾರಿಗಳು ಆದೇಶ ಹೊರಡಿಸಿದ್ದರು. ಅದರಂತೆ ಇಲ್ಲಿರುವ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೆಲವು ದಿನಗಳ ಹಿಂದೆ 8 ವಿಚಾರಣಾಧೀನ ಕೈದಿಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಅಲ್ಲಿ ಕರ್ತವ್ಯಕ್ಕೆ ಈ ಹೆಡ್‌ಕಾನ್‌ಸ್ಟೆಬಲ್‌ ಅವರನ್ನು ಹಾಕಲಾಗಿತ್ತು. ಈಗ ಅದರಲ್ಲಿ ಆರು ಕೈದಿಗಳಿಗೆ ನೆಗೆಟಿವ್‌ ಎಂದು ಫಲಿತಾಂಶ ಬಂದಿದ್ದು, ಇಬ್ಬರ ಫಲಿತಾಂಶ ಬರಲು ಬಾಕಿ ಇದೆ.

ನಿಟುವಳ್ಳಿ ಪೊಲೀಸ್‌ ಕ್ವಾಟ್ರರ್ಸ್‌ನಲ್ಲಿ ವಾಸವಾಗಿರುವ ಈ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕೆಲವು ದಿನಗಳ ಹಿಂದೆ ಮಲೇಬೆನ್ನೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೂ ಹೋಗಿ ಬಂದಿದ್ದರು. ಹಾಗಾಗಿ ಪೊಲೀಸ್‌ ಕ್ವಾಟ್ರರ್ಸ್‌, ಮಲೇಬೆನ್ನೂರು ಸಹಿತ ಅವರ ಸಂಪರ್ಕದಲ್ಲಿ ಇರುವ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ.

‘ಹೆಡ್‌ಕಾನ್‌ಸ್ಟೆಬಲ್‌ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು. ಎರಡು ದಿನಗಳ ಹಿಂದೆ ಗಂಟಲು ದ್ರವ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಅವರ ಜೊತೆಗಿದ್ದ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ. ಸೋಂಕಿತ ಫೊಲೀಸ್ ಸಿಬ್ಬಂದಿ ಕುಟುಂಬ ಸದಸ್ಯ ಮಾದರಿ ಸಂಗ್ರಹ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಥಮ, ದ್ವಿತೀಯ ಸಂಪರ್ಕದ ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಅವರು ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿದ್ದರು. ಹಾಗಾಗಿ ಆಸ್ಪತ್ರೆಯ ಸಂಪರ್ಕ ಎಂದು ಗುರುತಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಮಾಹಿತಿ ನೀಡಿದರು.

ಈ ಹಿಂದೆ ಕಂಟೈಮೆಂಟ್‌ ವಲಯದಲ್ಲಿ ಕೆಲಸ ಮಾಡಿದ್ದ ಸಂಚಾರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಅವರಿಗೆ ಸೋಂಕು ಬಂದಿತ್ತು. ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪೊಲೀಸರಿಗೇ ಸೋಂಕು ಬಂದ ಎರಡನೇ ಪ್ರಕರಣ ಇದಾಗಿದೆ.

‘ ಪ್ರಥಮ, ದ್ವಿತೀಯ ಸಂಪರ್ಕಕ್ಕಿಂತ ಪರೋಕ್ಷ ಸಂಪರ್ಕ ಪತ್ತೆ ಕಷ್ಟ’

ನೇರ ಸಂಪರ್ಕಕ್ಕೆ ಬಂದವರ ಬಗ್ಗೆ ಸೋಂಕಿತರು ತಿಳಿಸುವ ಮಾಹಿತಿಯನ್ನು ಆಧರಿಸಿ ಪ್ರಥಮ ಸಂಪರ್ಕ ಪತ್ತೆ ಹಚ್ಚಬಹುದು. ಸ್ವಲ್ಪ ಶ್ರಮಪಟ್ಟು ದ್ವಿತೀಯ ಸಂಪರ್ಕವನ್ನೂ ಪತ್ತೆ ಹಚ್ಚಬಹುದು. ಆದರೆ ಪರೋಕ್ಷ ಸಂಪರ್ಕವನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೋಂಕು ಪತ್ತೆಯಾಗುವ ಮೊದಲು ವ್ಯಕ್ತಿಯೊಬ್ಬರು ಬಸ್‌ನಲ್ಲಿ ಓಡಾಡಿರುತ್ತಾರೆ. ಪಕ್ಕದ ಸೀಟಿನಲ್ಲಿ ಯಾರಿದ್ದರು ಎಂಬುದು ನೆನಪಿರುವುದಿಲ್ಲ. ಯಾವುದೋ ಅಂಗಡಿಗೆ ಹೋಗಿರುತ್ತಾರೆ. ಅಲ್ಲಿ ಅಂಗಡಿಯವನ ಜತೆ ಮಾತನಾಡುತ್ತಿರುವಾಗ ಮತ್ತೊಬ್ಬ ಗ್ರಾಹಕ ಪಕ್ಕದಲ್ಲಿ ಇರುತ್ತಾರೆ. ಅವರೂ ಲೋಕಾಭಿರಾಮವನ್ನು ಮಾತನಾಡಿರುತ್ತಾರೆ. ಆದರೆ ಆ ವ್ಯಕ್ತಿ ಯಾರು ಎಂಬುದು ಗೊತ್ತಿರುವುದಿಲ್ಲ. ಈ ರೀತಿಯ ಪರೋಕ್ಷ ಸಂಪರ್ಕಗಳು ಪತ್ತೆ ಹಚ್ಚಲು ಸಾಧ್ಯವಾದರೆ ಕೊರೊನಾವನ್ನು ಒಂದೂ ಇಲ್ಲದಂತೆ ಮಟ್ಟ ಹಾಕಬಹುದು ಎನ್ನುತ್ತಾರೆ ಅವರು.

ಅದಲ್ಲದೇ ಸೋಂಕಿತರಿಗೆ ಎಲ್ಲವೂ ನೆನಪಿರುವುದಿಲ್ಲ. ಒಂದು ದಿನದಲ್ಲಿ ಹಲವು ಕಡೆ ಹೋಗಿರುತ್ತಾರೆ. ಹತ್ತಾರು ಮಂದಿಯಲ್ಲಿ ಮಾತನಾಡಿರುತ್ತಾರೆ. ಅದರಲ್ಲಿ ಕೆಲವು ನೆನಪಾಗದೇ ಬಿಟ್ಟು ಹೋಗಿರುತ್ತದೆ. ಬಿಟ್ಟು ಹೋದವರಿಗೂ ಕೊರೊನಾ ಬರುವ ಸಾಧ್ಯತೆಯಂತು ಇದ್ದೇ ಇರುತ್ತದೆ. ಆದರೆ ಅವರನ್ನು ಕ್ವಾರಂಟೈನ್‌ ಮಾಡಲು ಹುಡುಕುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ ಎಂದು ಸಮಸ್ಯೆ ವಿವರಿಸಿದರು.

ಇಮಾಂನಗರ, ಜಾಲಿನಗರ ಸಹಿತ ಆರಂಭದಲ್ಲಿ ಕಂಡು ಬಂದ ಸೋಂಕಿತರ ಮನೆಗಳಲ್ಲಿ, ಸಂಬಂಧಿಕರಲ್ಲಿ ಈಗ ಯಾರಲ್ಲೂ ಸೋಂಕು ಪತ್ತೆಯಾಗುತ್ತಿಲ್ಲ. ಆದರೆ ಪರೋಕ್ಷ ಸಂಪರ್ಕದ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಕಂಡು ಬರುತ್ತಿದೆ. ಹೊರ ಜಿಲ್ಲೆಗೆ ಹೋಗಿ ಬಂದ ಬೇತೂರು ರಸ್ತೆಯ ವ್ಯಕ್ತಿಯ ನೇರ ಸಂಪರ್ಕದಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ತಿಂಗಳಾದ ಬಳಿಕ ಪರೋಕ್ಷ ಸಂಪರ್ಕದಲ್ಲಿ ಕಾಣಿಸಿಕೊಂಡಿದೆ. ಅದನ್ನೇ ದ್ವಿತೀಯ ಸಂಪರ್ಕ ಎಂದು ಗುರುತಿಸಿದ್ದೇವೆ ಎಂದರು.

ಜಿಲ್ಲಾಧಿಕಾರಿ, ಎಸ್‌ಪಿ, ಸಿಇಒ, ಎಡಿಸಿ ಅವರ ಸಲಹೆಯ ಮೇರೆಗೆ ಕೆಲಸ ಮಾಡಿದ್ದರಿಂದ ದೊಡ್ಡ ಕೊಂಡಿಗಳೆಲ್ಲ ತುಂಡಾಗಿವೆ. ಸಣ್ಣ ಸಣ್ಣ ಕೊಂಡಿಗಳನ್ನು ಮುರಿಯಬೇಕಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.