ಬುಧವಾರ, ಅಕ್ಟೋಬರ್ 21, 2020
21 °C

ಸರ್ಕಾರದಿಂದ ಹೆಲ್ಮೆಟ್‌ ಭ್ರಷ್ಟಾಚಾರ; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಕೊರೊನಾ ಸಂಕಷ್ಟದಲ್ಲಿ ನಗರದಲ್ಲಿ ಏಕಾಏಕಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್‌ ಕಡ್ಡಾಯ ಮಾಡಿರುವುದು ಸರಿಯಲ್ಲ. ಕಾನೂನಿನ ನೆಪದಲ್ಲಿ ಸರ್ಕಾರ ಮತ್ತೊಂದು ಹೆಲ್ಮೆಟ್‌ ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.

‘ಸಂಚಾರ ಪೊಲೀಸರು ಅರ್ಧ ಹೆಲ್ಮೆಟ್‌ ಧರಿಸುವಂತಿಲ್ಲ ಎಂದು ಅದನ್ನು ಕಸಿದುಕೊಂಡು ದಂಡ ವಸೂಲಿ ಮಾಡುತ್ತಿರುವುದು ಖಂಡನೀಯ. ಈ ಬಗ್ಗೆ ಬೈಕ್‌ ಸವಾರರಿಗೆ ಕನಿಷ್ಠ ಮಾಹಿತಿ ನೀಡದೆ, ಜಾಗೃತಿ ಮೂಡಿಸದೆ ಏಕಾಏಕಿ ದಂಡ ವಸೂಲಿ ಮಾಡುತ್ತಿರುವುದು ಸರಿಯಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಾನೂನಿನ ನೆಪದಲ್ಲಿ ಸರ್ಕಾರ ಸಾಮಾನ್ಯ ಜನರ ಮೇಲೆ ದಂಡದ ಬರೆ ಹಾಕುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್‌ ಖರೀದಿಗೆ ಹಣ ತೆರಲು ಹಲವರಿಗೆ ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಹೆಲ್ಮೆಟ್ ಕಂಪನಿಗಳಿಂದ ಹಣ ಪಡೆದು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಇಲ್ಲದ ಕಾನೂನು ದಾವಣಗೆರೆಗೆ ಮಾತ್ರ ಏಕೆ’ ಎಂದು ಅವರು ಪ್ರಶ್ನಿಸಿದರು.

ಪಾಲಿಕೆ ವಿರೋಧ ‍ಪಕ್ಷದ ನಾಯಕ ಎ. ನಾಗರಾಜ್, ‘ನಗರಕ್ಕೆ ಹಳ್ಳಿಗಳಿಂದ ವ್ಯಾಪಾರಕ್ಕೆ, ಖರೀದಿಗೆ ಬರುವ ರೈತರೇ ಹೆಚ್ಚು ಅಂತಹವರ ಹೆಲ್ಮೆಟ್‌ ಕಸಿದುಕೊಂಡ ಎರಡೆರಡು ಬಾರಿ ದಂಡ ಹಾಕಲಾಗುತ್ತಿದೆ. ಇದು ತುಘಲಕ್‌ ಸರ್ಕಾರ’ ಎಂದು ದೂರಿದರು.

ಹೆಲ್ಮೆಟ್‌ ಕಡ್ಡಾಯ ಮಾಡುವ ಮೊದಲು ಜನರಲ್ಲಿ ಜಾಗೃತಿ ಮೂಡಿಸಲಿ, ನಗರದ ಒಳಗೆ ಹೆಲ್ಮೆಟ್‌ ಕಡ್ಡಾಯದಿಂದ ವಿನಾಯಿತಿ ನೀಡಬೇಕು. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಬಗ್ಗೆ ಮರುಪರಿಶೀಲಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಚಮನಸಾಬ್‌, ಗಡಿಗುಡಾಳ್‌ ಮಂಜುನಾಥ್‌, ಕೆ.ಎಲ್. ಹರೀಶ್ ಬಸಾಪುರ, ಶ್ರೀಕಾಂತ್ ಬಗೆರ, ಶಿವಾಜಿರಾವ್ ಯುವರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.