ಬುಧವಾರ, ಸೆಪ್ಟೆಂಬರ್ 18, 2019
25 °C
ಪ್ರವಚನದ ಮುಕ್ತಾಯ ಸಮಾರಂಭದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ

ಹಬ್ಬ ಸರಳವಾಗಿಸಿ ಸಂತ್ರಸ್ತರಿಗೆ ನೆರವಾಗಿ

Published:
Updated:
Prajavani

ದಾವಣಗೆರೆ: ಹಬ್ಬಗಳನ್ನು ಸರಳವಾಗಿ ಆಚರಿಸಬೇಕು. ಅದ್ದೂರಿ ಆಚರಣೆಗೆ ಬಳಸುವ ವೆಚ್ಚವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ಕಾಯಕ ದಾಸೋಹ ಮಂಟಪ, ಸೋಮೇಶ್ವರ ದೇವಸ್ಥಾನ ಟ್ರಸ್ಟ್‌ನಿಂದ ಸೋಮೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ನಡೆದ ದಿನಕ್ಕೊಂದು ದಾರ್ಶನಿಕರ ದರ್ಶನ ಪ್ರವಚನದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ಕಡೆ ಭಾರತ ಗಾಯಗೊಂಡು, ಮೆದುಳಿಗೆ ಸೇರಿ ನಂಜಾಗಿದೆ. ಜನ ಭ್ರಮೆಗೆ ಒಳಗಾಗಿದ್ದಾರೆ. ಇನ್ನೊಂದು ಕಡೆ ಕರ್ನಾಟಕದಲ್ಲಿ ಜನರ ಜಲಪ್ರಳಯಕ್ಕೆ ಸಿಲುಕಿ ನೋವು ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳನ್ನು ಅದ್ದೂರಿಯಾಗಿ ಮಾಡದೇ ಸಂತ್ರಸ್ತರಿಗೆ ನೆರವಾಗುವುದೇ ದೇವರ ಕೆಲಸ ಎಂದು ಹೇಳಿದರು.

ದೇಶದಲ್ಲಿ ಯಾವುದೇ ಮೂಲೆಯಲ್ಲಿ ತೊಂದರೆಯಾದರೂ ಕನ್ನಡಿಗರು ನೆರವು ನೀಡುತ್ತಿದ್ದರು. ಈ ಬಾರಿ ಕನ್ನಡಿಗರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು, ದನ, ಕರು, ಕುರಿಗಳು ಕೊಚ್ಚಿ ಹೋಗಿವೆ. ಬಹಳ ವರ್ಷಗಳ ಪ್ರಯತ್ನದಿಂದಾಗಿ ಉತ್ತರ ಕರ್ನಾಟಕ ಸ್ವಲ್ಪ ಪ್ರಗತಿ ಕಂಡಿತ್ತು. ಈ ಪ್ರವಾಹದಿಂದಾಗಿ ಮತ್ತೆ 10 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಈಗ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಕಣ್ಣೀರು ಒರೆಸಬೇಕು ಎಂದರು.

‘ಕೂಡಲಸಂಗಮ ಮಠದಲ್ಲಿ ಪ್ರತಿ ವರ್ಷ ಬಸವ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಈ ವರ್ಷ ಸರಳವಾಗಿ ಆಚರಿಸಿ ಅದರಲ್ಲಿ ಉಳಿದ ವೆಚ್ಚವನ್ನು ಪ್ರವಾಹದಿಂದ ಮೃತಪಟ್ಟ 67 ರೈತರ ಕುಟುಂಬಗಳಿಗೆ ತಲಾ ₹ 5,000 ನೀಡಿದ್ದೇವೆ’ ಎಂದು ತಿಳಿಸಿದರು.

ಸರ್ಕಾರವು ಭೂಮಿ ಕಳೆದುಕೊಂಡ ರೈತರಿಗೆ ₹ 1 ಲಕ್ಷ ಹಾಗೂ ಮನೆ ಕಳೆದುಕೊಂಡವರಿಗೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಾಣೇಹಳ್ಳಿ ಸ್ವಾಮೀಜಿ ರಾಜ್ಯದಾದ್ಯಂತ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಮಾಡಿದ್ದಾರೆ. ಅದನ್ನು ಜಿಲ್ಲಾ ಮಟ್ಟದಲ್ಲಿ ಎಲ್ಲ ಸೇರಿ ಮುಂದುವರಿಸಬೇಕು. ಪ್ರತಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರವಚನಕಾರ ಎನ್‌.ಜೆ. ಶಿವಕುಮಾರ್‌, ಪೊಲೀಸ್‌ ಇಲಾಖೆಯ ಎ.ಎಸ್‌. ಚನ್ನಬಸಪ್ಪ ಆವರಗೆರೆ, ಬಸವ ಬಳಗ ಅಧ್ಯಕ್ಷ ವೀರಭದ್ರಪ್ಪ ದೇವಿಗೆರೆ, ಪತ್ರಕರ್ತ ಸುರೇಶ್‌ ಕುಣಿಬೆಳೆಕೆರೆ, ಬಿಜೆಪಿ ಮುಖಂಡ ಓಂಕಾರಪ್ಪ ಉಪಸ್ಥಿತರಿದ್ದರು.

Post Comments (+)