‘ಹೈಟೆಕ್’ ಆಗಲಿದೆ ಹಳೇ ಬಸ್‌ನಿಲ್ದಾಣ

7
ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 28 ಕೋಟಿ ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ

‘ಹೈಟೆಕ್’ ಆಗಲಿದೆ ಹಳೇ ಬಸ್‌ನಿಲ್ದಾಣ

Published:
Updated:
ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೈಟೆಕ್‌ಗೊಳ್ಳಲಿರುವ ದಾವಣಗೆರೆಯ ಹಳೇ ಬಸ್‌ ನಿಲ್ದಾಣ-. ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ

ದಾವಣಗೆರೆ: ಕೆಳಗಡೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಅದರ ಮೇಲೆ ಬಸ್‌ಗಳ ನಿಲುಗಡೆ, ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ...

ಖಾಸಗಿ ಬಸ್‌ ನಿಲ್ದಾಣ ಎಂದು ಕರೆಯಲಾಗುವ ಹಳೇ ಬಸ್‌ ನಿಲ್ದಾಣ ಈ ರೀತಿ ಹೊಸ ನೋಟ ಪಡೆಯಲಿದೆ. ಹೀಗೆ ಪರಿವರ್ತನೆ ಮಾಡಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಲನಕ್ಷೆ ತಯಾರಾಗಿದೆ. ₹ 28 ಕೋಟಿ ವೆಚ್ಚದ ಈ ಯೋಜನೆಯ ನೀಲನಕ್ಷೆಯನ್ನು ಕೆಯುಐಡಿಎಫ್‌ಸಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ತಾಂತ್ರಿಕ ಮಂಜೂರಾತಿ ಸಿಕ್ಕಿದ ನಂತರ ಟೆಂಡರ್‌ ಸಹಿತ ಮುಂದಿನ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.

15 ದಿನಗಳ ಒಳಗೆ ತಾಂತ್ರಿಕ ಮಂಜೂರಾತಿ ಸಿಗಲಿದೆ. ಆದಾದ ನಂತರ ಟೆಂಡರ್‌ ಪ್ರಕ್ರಿಯೆ, ಪತ್ರ ನಿರ್ವಹಣೆ ಇನ್ನಿತರ ಕೆಲಸಗಳಿಗೆ 6 ತಿಂಗಳು ಬೇಕಾಗುತ್ತದೆ. ಡಿಸೆಂಬರ್‌ ಕೊನೆಗೆ ಅಥವಾ ಜನವರಿ ಮೊದಲ ವಾರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ದಾವಣಗೆರೆ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಂ. ಗುರುಪಾದಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್ ಲುಕ್‌

ಹಳೇ ಬಸ್‌ ನಿಲ್ದಾಣಕ್ಕೆ ಸಂಬಂಧಿಸಿದಂತೆ 1.3 ಎಕರೆ ಜಾಗ ಇದೆ. ಅದರಲ್ಲಿ ‘ಜಿ’ ಪ್ಲಸ್‌ ಮಾದರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. 100ರಷ್ಟು ದ್ವಿಚಕ್ರವಾಹನ ಹಾಗೂ 60 ಕಾರುಗಳ ಪಾರ್ಕಿಂಗ್‌ಗೆ ಕೆಳಗಡೆ ವ್ಯವಸ್ಥೆ ಮಾಡಲಾಗುತ್ತದೆ. ಅದರ ಮೇಲೆ 12 ಬಸ್‌ಗಳು ಸಾಲಾಗಿ ಒಂದೇ ಕಡೆ ನಿಲ್ಲುವಷ್ಟು ಉದ್ದದ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. ಯಾವ ಊರಿನ ಬಸ್‌ ಎಲ್ಲಿ ನಿಲ್ಲುತ್ತದೆ ಎಂಬುದನ್ನು ತೋರಿಸಲು ಡಿಜಿಟಲ್‌ ಸೂಚನಾ ಫಲಕಗಳಿರುತ್ತವೆ. ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಬಸ್‌ ನಿಲ್ದಾಣದ ಆಗುಹೋಗುಗಳನ್ನು ಗಮನಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ.

ಈ ಬಸ್‌ ನಿಲ್ದಾಣ ಎತ್ತರದಲ್ಲಿ ಇರುವುದರಿಂದ ಪ್ರಯಾಣಿಕರಿಗೆ ಬರಲು ಲಿಫ್ಟ್‌ ಅಥವಾ ಮೆಟ್ಟಿಲು ಅಥವಾ ಸ್ವಯಂ ಚಾಲಿತ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ. ಎಲ್ಲ ಕಡೆ ಹೋಗುವ ಬಸ್‌ಗಳು ಒಂದೇ ಕಡೆ ಮುಖ ಮಾಡಿ ನಿಂತಿರುತ್ತವೆ. ಇದರಿಂದಾಗಿ ಪ್ರಯಾಣಿಕರು ಮೆಟ್ಟಿಲು ಹತ್ತಿ ಬರುವ ಬದಿಗೇ ಬಸ್‌ಗಳ ಬಾಗಿಲು ಇರುತ್ತದೆ. ಅವರು ಮತ್ತೆ ಬಸ್‌ಗಳ ನಡುವೆ ಆ ಕಡೆ ಈ ಕಡೆ ದಾಟಲು ಅವಕಾಶ ಇರುವುದಿಲ್ಲ. ಬಸ್‌ ಬೇ ಪೂರ್ಣವಾಗಿ ಜನಸಂಚಾರ ಮುಕ್ತವಾಗಿರುತ್ತದೆ. ಎಲ್ಲ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಕಡೆಯಿಂದ ಬಂದು ಪಿ.ಬಿ.ರೋಡ್‌ನಿಂದ ಒಳ ಪ್ರವೇಶಿಸುತ್ತವೆ. ಹರಿಹರಕ್ಕೆ ಹೋಗುವ ಕಡೆಯಿಂದ ಪಿ.ಬಿ.ರೋಡ್‌ಗೆ ಇಳಿದು ಹೋಗಬೇಕಾದ ಕಡೆಗೆ ಚಲಿಸಲಿವೆ.

ಬಸ್‌ ನಿಲ್ದಾಣ ಸ್ಥಳಾಂತರ

ಕಾಮಗಾರಿ ಆರಂಭಗೊಂಡ ಬಳಿಕ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಸಿಟಿ ಬಸ್‌ ನಿಲ್ದಾಣವನ್ನು ಹೈಸ್ಕೂಲ್‌ ಮೈದಾನಕ್ಕೆ ಸ್ಥಳಾಂತರಗೊಳಿಸಲಾಗುತ್ತದೆ. 2019ರ ಜನವರಿಯಿಂದ 2021ರ ಜನವರಿವರೆಗೆ ಈ ತಾತ್ಕಾಲಿಕ ವ್ಯವಸ್ಥೆ ಇರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !