ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಡ್‌ನಿಂದ ಹೊಡೆದು ಮಹಿಳೆ ಕೊಲೆ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕುರುಬರಹಳ್ಳಿಯಲ್ಲಿ ಕಲಾ (35) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಅವರ ಸ್ನೇಹಿತ ರಾಜು (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಕಲಾ, ಪತಿಯಿಂದ ದೂರವಾಗಿದ್ದರು. ತಿಂಗಳ ಹಿಂದಷ್ಟೇ ಅವರಿಗೆ ರಾಜುನ ಪರಿಚಯವಾಗಿತ್ತು. ಬಳಿಕ, ಅವರಿಬ್ಬರು ಕುರುಬರಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದರು.

ಶುಕ್ರವಾರ ರಾತ್ರಿ ಅವರಿಬ್ಬರು ಒಟ್ಟಿಗೆ ಮದ್ಯ ಕುಡಿದಿದ್ದರು. ಅದೇ ವೇಳೆ, ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿತ್ತು. ಆಗ ರಾಜು, ರಾಡ್‌ ಹಾಗೂ ಡಂಬಲ್ಸ್‌ನಿಂದ ಮಹಿಳೆಯ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ನಂತರ ಆರೋಪಿ, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿದ್ದ. ಅದನ್ನು ಹೊತ್ತುಕೊಂಡು ಮೂರನೇ ಮಹಡಿಯಲ್ಲಿದ್ದ ಮನೆಯಿಂದ ಹೊರಗೆ ಬಂದಿದ್ದ ಆತ, ಎರಡನೇ ಮಹಡಿವರೆಗೂ ಸಾಗಿದ್ದ. ಮದ್ಯದ ಅಮಲಿನಲ್ಲಿದ್ದ ಆತ, ಮುಂದೆ ನಡೆಯಲಾಗದೆ ಅಲ್ಲಿಯೇ ಶವ ಇಟ್ಟು ಹೊರಟು ಹೋಗಿದ್ದ. ಕೆಳ ಮಹಡಿಯಲ್ಲಿ ವಾಸವಿದ್ದ ನಿವಾಸಿಗಳು, ಬೆಳಿಗ್ಗೆ ಎರಡನೇ ಮಹಡಿಗೆ ಹೋಗಿದ್ದಾಗಲೇ ಶವ ಕಂಡು ಠಾಣೆಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ವಿವರಿಸಿದರು.

ಪತ್ನಿಯಿಂದ ದೂರವಾಗಿದ್ದ ಆರೋಪಿ; ಬಂಧಿತ ರಾಜುಗೆ ಪತ್ನಿ ಹಾಗೂ ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಅವರಿಂದ ದೂರವಾಗಿದ್ದ ಆತ, ಪ್ರತ್ಯೇಕವಾಗಿ ವಾಸವಿದ್ದ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆಯಲ್ಲೇ ಆತನಿಗೆ ಕಲಾ ಅವರ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದರು.

ಪರಸ್ಪರ ಸ್ನೇಹಿತರಾಗಿದ್ದ ಅವರ ನಡುವೆ ಸಲುಗೆ ಬೆಳೆದಿತ್ತು. ನಂತರವೇ ಅವರಿಬ್ಬರು ಒಟ್ಟಿಗೆ ವಾಸವಿದ್ದರು. ಇಬ್ಬರೂ ಮದ್ಯವ್ಯಸನಿಗಳಾಗಿದ್ದರಿಂದ, ಪದೇ ಪದೇ ಜಗಳ ಮಾಡುತ್ತಿದ್ದರು. ಮಹಿಳೆಯ ಸಂಬಂಧಿಕರ ಬಗ್ಗೆ ಸದ್ಯಕ್ಕೆ ಗೊತ್ತಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT