ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಿಂದೂ ಮಹಾ ಗಣಪತಿ ವಿಸರ್ಜನೆ 21ರಂದು, ಎಲ್ಲೆಡೆ ಬಿಗಿ ಭದ್ರತೆ

ನಗರದ ವಿವಿಧೆಡೆ ಪೊಲೀಸರಿಂದ ಪಥ ಸಂಚಲನ
Last Updated 20 ಸೆಪ್ಟೆಂಬರ್ 2019, 15:26 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮೂರ್ತಿಯನ್ನು ಸೆ. 21ರಂದು ವಿಸರ್ಜನೆ ಮಾಡಲಾಗುವುದು ಟ್ರಸ್ಟ್‌ನ ಅಧ್ಯಕ್ಷ ಜೊಳ್ಳಿ ಗುರು ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ. 21ರಂದು ಬೆಳಿಗ್ಗೆ 9.30ಕ್ಕೆ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಅಂಬೇಡ್ಕರ್‌, ಬುದ್ಧ, ಬಸವಣ್ಣ, ಕನಕದಾಸ, ವಾಲ್ಮೀಕಿ ಮೂರ್ತಿಗಳು ಮೆರವಣಿಗೆಯಲ್ಲಿ ಇರಲಿವೆ. ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ಶ್ರೀಶೈಲ ಮಠದ ಆನೆ ಭಾಗವಹಿಸಲಿದ್ದು, ಈ ಬಾರಿ 4ರಿಂದ5 ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದರು.

ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ:

ನಾಲ್ಕು ಡಿಜೆಗೆ ಅನುಮತಿ ಸಿಕ್ಕಿದೆ. ಅದರಲ್ಲಿ ಮೂರು ಪುರುಷರಿಗೆ, ಇನ್ನೊಂದು ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಮರೆವಣಿಗೆ ವೇಳೆ ಮಾರ್ಗ ಮಧ್ಯೆ 4 ಕಡೆ ನೀರು, ಮಜ್ಜಿಗೆ ವಿತರಣೆ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಶಿವಗಂಗಾ ಬಸವರಾಜ್, ಟ್ರಸ್ಟ್‌ ಸದಸ್ಯರಾದ ಚಿಕ್ಕಿ ಮಂಜುನಾಥ್, ಷಣ್ಮುಖ, ದೀಪಕ್ ಅಣಬೇರು, ಶಶಾಂಕ್, ಮುರಳಿ, ಶ್ರೀನಿವಾಸ್, ಅಕ್ಷಯ್, ರುದ್ರೇಶ್, ಗಿರೀಶ್, ಕೃಷ್ಣನಾಯಕ್, ಶ್ರೀಧರ್, ಶಿವಾನಂದ್ ಅವರೂ ಇದ್ದರು.

ಫ್ಲೆಕ್ಸ್‌ಗಳ ಭರಾಟೆ

ಹಿಂದೂ ಮಹಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಪಿ.ಬಿ. ರಸ್ತೆ ಸೇರಿ ವಿವಿಧೆಡೆ ಎಲ್ಲಾ ಜನಾಂಗದ ಮಹನೀಯರ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.

ಗೌತಮಬುದ್ಧ, ಬಸವಣ್ಣ, ಅಂಬೇಡ್ಕರ್, ಶಿವಾಜಿ, ವರ್ಧಮಾನ ಮಹಾವೀರ, ಸಿದ್ಧಗಂಗಾ ಸ್ವಾಮೀಜಿ, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸೇರಿ 150ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಎಂದು ಗುರು ಜೊಳ್ಳಿ ತಿಳಿಸಿದರು.

ಮದ್ಯ ಮಾರಾಟ ನಿಷೇಧ

‌ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಸೆ. 21ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮೆರವಣಿಗೆ ಮಾರ್ಗ

ಹೈಸ್ಕೂಲ್‌ ಮೈದಾನದಿಂದ ಹೊರಡುವ ಮೆರವಣಿಗೆಯು ಎವಿಕೆ ಕಾಲೇಜು ರಸ್ತೆ, ಬಿಎಸ್‌ಸಿ ಬಟ್ಟೆ ಮಳಿಗೆ ಮುಂಭಾಗದಿಂದ ಚೇತನಾ ಹೋಟೆಲ್ ರಸ್ತೆ ಮುಖಾಂತರ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಬಂದು ಅಲ್ಲಿಂದ ಜಯದೇವ ವೃತ್ತದ ಮುಖಾಂತರ ಲಾಯರ್ ರೋಡ್ ಮೂಲಕ ಪಿ.ಬಿ. ರಸ್ತೆಗೆ ಬಂದು ಸೇರುವುದು.

ಎಂ.ಜಿ.ವೃತ್ತ, ‍ಹಳೇ ಬಸ್‌ ನಿಲ್ದಾಣ, ದೇವರಾಜ ಅರಸು ವೃತ್ತ, ರೈಲ್ವೆ ನಿಲ್ದಾಣ, ಪಿ.ಜೆ. ಹೋಟೆಲ್‌ ಕ್ರಾಸ್‌, ರಾಣಿ ಚೆನ್ನಮ್ಮ ವೃತ್ತ (ಅರುಣಾ ಸರ್ಕಲ್‌) ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮೆರವಣಿಗೆ ಅಂತ್ಯಗೊಳ್ಳಲಿದೆ. ಬಾತಿಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ.

ಸಂಚಾರದ ಮಾರ್ಗ ಬದಲಾವಣೆ

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಚಿತ್ರದುರ್ಗ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಸೇರಿ ಎಲ್ಲಾ ವಾಹನಗಳು ಬಾಡಾ ಕ್ರಾಸ್ ಮುಖಾಂತರ ಪಿ.ಬಿ. ರಸ್ತೆಯ ಅಗ್ನಿಶಾಮಕ ಠಾಣೆಯ ಪಕ್ಕದ ರಸ್ತೆಯಲ್ಲಿ ಖಾಲಿ ಸ್ಥಳದಲ್ಲೂ, ಕೆಎಸ್‌ಆರ್‌ಟಿಸಿ ಬಸ್‌ಗಳು ಬಸ್‌ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಅದೇ ಮಾರ್ಗವಾಗಿ ತೆರಳಬೇಕು.

ಚನ್ನಗಿರಿ ಕಡೆಯಿಂದ ಬರುವ ಬಸ್‌ಗಳು ಹದಡಿ ರಸ್ತೆ ಮುಖಾಂತರ ಜಿಲ್ಲಾ ಕ್ರೀಡಾಂಗಣದ ಪಕ್ಕದ ಯುಬಿಡಿಟಿ ಕಾಲೇಜು ಮುಂಭಾಗದ ರಸ್ತೆಯ ಪಕ್ಕದ ಖಾಲಿ ಸ್ಥಳದಲ್ಲಿ ನಿಲುಗಡೆ ಮಾಡಿ ನಂತರ ಪ್ರಯಾಣಿಕರನ್ನು ಹತ್ತಿಸಿಕೊಂಡು ಅದೇ ಮಾರ್ಗವಾಗಿ ತೆರಳಬೇಕು.

ಜಗಳೂರು ಕಡೆಯಿಂದ ಬರುವವರು ಆರ್.ಎಂ. ರಸ್ತೆ ಮುಖಾಂತರ ಗಣೇಶ ಹೋಟೆಲ್ ಬಳಿ ತಿರುವು ಪಡೆದು ಈರುಳ್ಳಿ ಮಾರುಕಟ್ಟೆ ರಸ್ತೆಯ ಮುಖಾಂತರ ಪಿ.ಬಿ. ರಸ್ತೆಯಲ್ಲಿ ತಿರುವು ಪಡೆಯುವುದು. ಇಲ್ಲವೇ ಎಪಿಎಂಸಿ ಮಾರುಕಟ್ಟೆಯ ಮೇಲು ಸೇತುವೆ ಮುಖಾಂತರ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ನಂತರ ಪ್ರಯಾಣಿಕರನ್ನು ಹತ್ತಿಸಿಕೊಂಡು ಈರುಳ್ಳಿ ಮಾರುಕಟ್ಟೆ ರಸ್ತೆ ಮಾರ್ಗವಾಗಿ ವಾಪಸ್ ಹೋಗಬೇಕು.

ಮೆರವಣಿಗೆ ಕೆಇಬಿ ರಸ್ತೆಯಲ್ಲಿ ಸಾಗುವಾಗ ಶಾಮನೂರು ಕಡೆಯಿಂದ ಬರುವ ವಾಹನಗಳು ಬಾಪೂಜಿ ಬ್ಯಾಂಕ್ ಸಮುದಾಯ ಭವನ ಶಾಮನೂರು ರಸ್ತೆಯಿಂದ ಕುಂದವಾಡ ಕೆರೆಗೆ ಹೋಗುವ ಸರ್ಕಲ್ ಡಿ.ಸಿ. ಸರ್ಕಲ್ ಸಂಗೊಳ್ಳಿ ರಾಯಣ್ಣ ಸರ್ಕಲ್ ಹಳೇ ಪಿ.ಬಿ.ರಸ್ತೆಯ ಮೂಲಕ ಸಂಚರಿಸಬೇಕು. ಮೆರವಣಿಗೆ ಹಳೇ ಪಿ.ಬಿ. ರಸ್ತೆಯಲ್ಲಿ ಸಾಗುವಾಗ ಕೆಎಸ್‌ಆರ್‌ಟಿಸಿಯಿಂದ ಬಾಡಾ ಕ್ರಾಸ್‌ ಮೂಲಕ ಬೆಂಗಳೂರು ಕಡೆಗೆ ಮತ್ತು ಸಂಗೊಳ್ಳಿರಾಯಣ್ಣ ಸರ್ಕ್‌ಲ್‌ನಿಂದ ಡಿ.ಸಿ. ಸರ್ಕಲ್, ಕುಂದವಾಡ ಕೆರೆಗೆ ಹೋಗುವ ಸರ್ಕಲ್ ಶಾಮನೂರು ಅಂಡರ್ ಬ್ರಿಡ್ಜ್ ಮೂಲಕ ಬಾಡಾ ಕ್ರಾಸ್‌ ಕಡೆಗೆ ಸಂಚರಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಪೊಲೀಸರು –ಸಂಖ್ಯೆ

ಡಿಎಸ್‌ಪಿ 4

ಸಿಪಿಐ 12

ಪಿಎಸ್‌ಐ 30

ಹೆಡ್‌/ಕಾನ್ಸ್‌ಟೆಬಲ್ 623

ಹೋಮ್‌ಗಾರ್ಡ್ 318

ಎಎಸ್‌ಐ 90

ಕೆಎಸ್‌ಆರ್‌ಪಿ 3

ಡಿಎಆರ್ 4

ಸಿಸಿಟಿವಿ ಕ್ಯಾಮೆರಾ 68

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT