ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಇಂಡಿಯಾ: 70 ವರ್ಷಗಳ ಯಾನ

ಭಾರತ–ಬ್ರಿಟನ್‌ ನಡುವಿನ ಮೈತ್ರಿಗೆ ನಾಂದಿ ಹಾಡಿದ್ದ ಹಾರಾಟದ ನೆನಪಿನಲ್ಲಿ ಕಾರ್ಯಕ್ರಮ
Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ಗೆ ಏರ್ ಇಂಡಿಯಾ ತನ್ನ ಮೊದಲ ವಿಮಾನ ಹಾರಾಟ ನಡೆಸಿ 70 ವರ್ಷಗಳು ಸಂದಿವೆ. 1948ರ ಜೂನ್ 8ರಂದು ಮುಂಬೈನಿಂದ ಹೊರಟ ವಿಮಾನ, ಕೈರೋ ಹಾಗೂ ಜಿನೀವಾ ಮೂಲಕ ಪ್ರಯಾಣಿಸಿ ಜೂನ್ 10ರಂದು ಲಂಡನ್ ತಲುಪಿತ್ತು. ನವಾಬರು, ಮಹಾರಾಜರು ಸೇರಿದಂತೆ 42 ಪ್ರಯಾಣಿಕರು ವಿಮಾನದಲ್ಲಿದ್ದರು.

70 ವರ್ಷಗಳ ಹಿಂದೆ ಭಾರತ–ಬ್ರಿಟನ್‌ ನಡುವಿನ ಮೈತ್ರಿಗೆ ನಾಂದಿ ಹಾಡಿದ್ದ ಈ ಐತಿಹಾಸಿಕ ಘಟನೆಯನ್ನು ಸ್ಮರಣೀಯವಾಗಿಸಲು ವಿಮಾನಯಾನ ಸಂಸ್ಥೆಯು ಯೋಜನೆ ಹಾಕಿಕೊಂಡಿದೆ.

ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಮೊದಲ ವಿಮಾಯಾನದ ಅನುಭವಗಳನ್ನು ಹಂಚಿಕೊಳ್ಳುವಂತೆ ಏರ್ ಇಂಡಿಯಾ ಕೇಳಿಕೊಂಡಿದೆ.

‘ಆರಂಭದ ದಿನಗಳಲ್ಲಿ ಪ್ರಯಾಣ ಮಾಡಿದವರು ತಮ್ಮ ಅನುಭವಗಳನ್ನು ಹಾಗೂ ಚಿತ್ರಗಳನ್ನು ಹಂಚಿಕೊಂಡರೆ, ಅಂದಿನ ಅಪರೂಪದ ನೆನಪುಗಳನ್ನು ನಿಯತಕಾಲಿಕೆಯಲ್ಲಿ ದಾಖಲಿಸಲಾಗುವುದು’ ಎಂದು ಸಂಸ್ಥೆಯ ಪ್ರಾದೇಶಿಕ ಮ್ಯಾನೇಜರ್ ದೇಬಶಿಶ್ ಗೋಲ್ಡರ್ ತಿಳಿಸಿದ್ದಾರೆ.

ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗಿವೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ಏರ್ ಇಂಡಿಯಾ ತನ್ನ ಮೊದಲಿನ ವೈಭವವನ್ನು ಮರಳಿಸಲು ಯತ್ನಿಸುತ್ತಿದೆ ಎಂದಿದ್ದಾರೆ. ‌

ಸುರಕ್ಷಿತ ಪ್ರಯಾಣ: ಏರ್ ಇಂಡಿಯಾ ಈ ಹಿಂದೆ ಹಾರ್ಡ್‌ವೇರ್ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಆದರೆ ಈಗ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಿಂದಾಗಿ ಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆಯೂ ಉತ್ತಮವಾಗಿದೆ. ಏರ್ ಇಂಡಿಯಾದ ಇತ್ತೀಚಿನ ಮಾರ್ಗ ಟೆಲ್ ಅವೀವ್. ಮುಂದಿನ ಗುರಿ ಆಫ್ರಿಕಾ ಖಂಡ.

ಮೂಲ ನೆಲೆ ಜೊತೆ ನಂಟು:‘

ಬ್ರಿಟನ್‌ ವೈಮಾನಿಕ ಮಾರುಕಟ್ಟೆಯು ಹೆಚ್ಚು ಕಾರ್ಯನಿರತ ಕ್ಷೇತ್ರವಾಗಿದ್ದು, ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್ ಮತ್ತು ಅಮೃತಸರ ಮಧ್ಯೆ ಮೂರು ನೇರ ವಿಮಾನಗಳು ಆರಂಭಗೊಂಡಿವೆ. ಈ ಮಾರ್ಗಕ್ಕೆ ಬಹುಬೇಡಿಕೆ ಇತ್ತು. ಸ್ವರ್ಣಮಂದಿರದ ಕಾರಣಕ್ಕೆ ಧಾರ್ಮಿಕ ಪ್ರವಾಸೋದ್ಯಮ ಪ್ರಸಿದ್ಧಿಗೆ ಬಂದಿದೆ’ ಎಂದು ದೇಬಶಿಶ್ ಗೋಲ್ಡರ್ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ವಾಸವಾಗಿರುವ ಭಾರತೀಯರ ಮೂರು ಅಥವಾ ನಾಲ್ಕನೇ ತಲೆಮಾರಿನ ಯುವಜನರು ತಮ್ಮ ಮೂಲನಾಡಿನ ಜೊತೆ ಸಂಪರ್ಕದಿಂದಿರಲು ನಿಯಮಿತವಾಗಿ ಪ್ರಯಾಣಿಸುತ್ತಾರೆ. ನೇರ ವಿಮಾನಗಳು ಈ ಮಾರ್ಗದ ಜನಪ್ರಿಯತೆಯನ್ನು ಖಚಿತಪಡಿಸಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT