ಶನಿವಾರ, ಜೂನ್ 19, 2021
22 °C

ಹೋರಿ ಕದ್ದು ಸಿಕ್ಕಿಬಿದ್ದ ಆರೋಪಿಗೆ ಥಳಿತ; ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಹೋರಿ ಕದ್ದು ಸಿಕ್ಕಿಬಿದ್ದ ಆರೋಪಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಕತ್ತೆಯ ಮೇಲೆ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ತಾಲ್ಲೂಕಿನ ಸರಸ್ವತಿಹಟ್ಟಿಯಲ್ಲಿ ನಡೆದಿದೆ.

ಬಡಗೊಲ್ಲರಹಟ್ಟಿಯ ಈಶ್ವರ್‌ (35) ಜಾನುವಾರು ಕಳವಿಗೆ ಯತ್ನಿಸಿ ಸಿಕ್ಕಿಬಿದ್ದ ಆರೋಪಿ. ಕಂಬಕ್ಕೆ ಕಟ್ಟಿ ಥಳಿಸಿದ ಹಾಗೂ ಕತ್ತೆ ಮೇಲೆ ಮೆರವಣಿಗೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜವನಗೊಂಡನಹಳ್ಳಿ ಹೋಬಳಿಯ ಸರಸ್ವತಿಹಟ್ಟಿಯ ಬಾಲಣ್ಣ ಎಂಬುವರರ ಹೋರಿಗಳು ಆ.19ರಂದು ರಾತ್ರಿ ಕಳವಾಗಿದ್ದವು. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದ ಕಲ್ಯಾಣಿ ಗುಡ್ಡದಲ್ಲಿ ಹೋರಿಗಳನ್ನು ಕಟ್ಟಿ ಹಾಕಿದ್ದು ಕುರಿಗಾಹಿಗಳ ಕಣ್ಣಿಗೆ ಬಿದ್ದಿತ್ತು. ಹೋರಿಗಳನ್ನು ಮರಳಿ ಊರಿಗೆ ತಂದಿದ ಗ್ರಾಮಸ್ಥರು, ಬಡಗೊಲ್ಲರಹಟ್ಟಿಯ ಈಶ್ವರ್‌ ಎಂಬಾತನನ್ನು ಶುಕ್ರವಾರ ಹಟ್ಟಿಗೆ ಎಳೆದು ತಂದಿದ್ದರು.

ಆರೋಪಿಗೆ ಬಣ್ಣದ ಮೀಸೆ ಹಾಗೂ ನಾಮ ಬಳಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿ ವಿಚಾರಣೆ ನಡೆಸಿದ್ದಾರೆ. ವಿದ್ಯುತ್ ಕೆಲಸಕ್ಕೆ ಬಳಸುವ ಕಟ್ಟಿಂಗ್‌ ಪ್ಲೆಯರ್‌ನಿಂದ ಕಿವಿಹಿಂಡಿ ಚಿತ್ರಹಿಂಸೆ ನೀಡಲು ಯತ್ನಿಸಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡ ಬಳಿಕ ವಿವಸ್ತ್ರಗೊಳಿಸಿ ಕತ್ತೆ ಮೇಲೆ ಕೂರಿಸಿದ್ದಾರೆ. ತಮಟೆ, ವಾದ್ಯಗಳೊಂದಿಗೆ ಸುಮಾರು ಒಂದು ಕಿ.ಮೀ ಮೆರವಣಿಗೆ ಮಾಡಿದ್ದಾರೆ.

ಆರೋಪಿಗೆ ಚಿತ್ರಹಿಂಸೆ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಲ್ಲೆಗೊಳಗಾದ ಆರೋಪಿಯನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು