ರಂಗಿನಾಟದಲ್ಲಿ ತೇಲಿದ ಮೈಮನ!

ಶುಕ್ರವಾರ, ಏಪ್ರಿಲ್ 26, 2019
32 °C
ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ l ರಾಮ್‌ ಆ್ಯಂಡ್‌ ಕೋ ವೃತ್ತದಲ್ಲಿ ಕುಣಿದು ಕುಪ್ಪಳಿಸಿದ ಹುಡುಗ–ಹುಡುಗಿಯರು

ರಂಗಿನಾಟದಲ್ಲಿ ತೇಲಿದ ಮೈಮನ!

Published:
Updated:
Prajavani

ದಾವಣಗೆರೆ: ಗಾಳಿಯಲ್ಲಿ ತೇಲುತ್ತಿದ್ದ ಬಣ್ಣಗಳ ತನನ. ಪಿಚಕಾರಿಯಿಂದ ತೂರಿ ಬಂದು ಕಚಗುಳಿ ಇಡುತ್ತಿದ್ದ ಓಕುಳಿ. ಹಾಡುಗಳ ಅಬ್ಬರಕ್ಕೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ ಯುವಕ–ಯುವತಿಯರು. ಬಣ್ಣದೋಕುಳಿಯ ‘ನಶೆ’ಯಲ್ಲಿ ತೇಲಿದ ‍ಪಡ್ಡೆ ಹುಡುಗರು ಕಿತ್ತು ಎಸೆದ ಬಟ್ಟೆಗಳ ತೋರಣ...!

ರಾಮ್‌ ಆ್ಯಂಡ್‌ ಕೋ ವೃತ್ತದ ಗೆಳೆಯರ ಬಳಗ ಗುರುವಾರ ಹಮ್ಮಿಕೊಂಡಿದ್ದ 20ನೇ ವರ್ಷದ ಹೋಳಿ ಹಬ್ಬದಲ್ಲಿ ಕಂಡುಬಂದ ದೃಶ್ಯಗಳಿವು. ಸಾವಿರಾರು ಯುವಕ–ಯುವತಿಯರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಂಭ್ರಮದಿಂದ ಬಣ್ಣ ಆಡುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ‘ರಂಗಿನಾಟ’ವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಜನ ಸಾಗರೋಪಾದಿಯಲ್ಲಿ ರಾಮ್‌ ಆ್ಯಂಡ್‌ ಕೋ ವೃತ್ತದ ಕಡೆಗೆ ಮಧ್ಯಾಹ್ನದವರೆಗೂ ಬರುತ್ತಲೇ ಇದ್ದರು.

ಬುಧವಾರ ರಾತ್ರಿ ‘ಕಾಮ’ ದಹನ ಮಾಡುವುದರೊಂದಿಗೆ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ಯುವಕ–ಯುವತಿಯರು ಬಣ್ಣ ಎರಚುತ್ತ ಬೈಕ್‌ನಲ್ಲಿ ರಾಮ್‌ ಆ್ಯಂಡ್‌ ಕೋ ವೃತ್ತಕ್ಕೆ ಬಂದಿದ್ದರು. ಎ.ವಿ.ಕೆ. ಕಾಲೇಜು ರಸ್ತೆಯಿಂದ ರಾಮ್‌ ಆ್ಯಂಡ್‌ ಕೋ ವೃತ್ತದವರೆಗೂ ಹುಡುಗರದ್ದೇ ಕಾರುಬಾರು. ವೃತ್ತದಿಂದ ಚರ್ಚ್‌ ರಸ್ತೆಯ ಕಡೆಗೆ ಹುಡುಗಿಯರದ್ದೇ ದರ್ಬಾರು!

ಪೈಪ್‌ನಲ್ಲಿ ಹುಡುಗರ ಮೇಲೆ ನೀರು ಹಾರಿಸುತ್ತಿದ್ದರೆ, ಹುಡುಗಿಯರ ಮೇಲೆ ಪೈಪ್‌ನಿಂದ ತುಂತುರು ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಸೌಂಡ್‌ ಸ್ಪೀಕರ್‌ನಿಂದ ತೇಲಿ ಬರುತ್ತಿದ್ದ ಹಾಡುಗಳಿಗೆ ಯುವಕ–ಯುವತಿಯರು ಹೆಜ್ಜೆ ಹಾಕಿದರು. ‘ಟಗರು ಬಂತು ಟಗರು...’, ‘ಜೈ ಭಜರಂಗಿ’, ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...’ ಹೀಗೆ ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳಿಗೆ ಹುಚ್ಚೆದ್ದು ಕುಣಿದರು.

ಕೇಕೆ ಹಾಕುತ್ತ, ಪೀಪಿ ಊದುತ್ತ  ಸ್ನೇಹಿತರ ತಲೆ ಮೇಲೆ ಕೋಳಿ ಮೊಟ್ಟೆ, ಮಜ್ಜಿಗೆಯ ಪ್ಯಾಕೇಟ್‌ ಒಡೆದು ಖುಷಿಪಟ್ಟರು. ರಂಗೇರುತ್ತಿದ್ದಂತೆ ಪಡ್ಡೆ ಹುಡುಗರು ಅಂಗಿಯನ್ನು ಹರಿದು ಮೇಲಕ್ಕೆ ಎಸೆಯುತ್ತಿದ್ದರು. ವಿದ್ಯುತ್‌ ತಂತಿಗೆ ಸಿಲುಕಿಕೊಂಡ ನೂರಾರು ಅಂಗಿಗಳು ತೋರಣದಂತೆ ಕಂಡುಬಂದವು. ಪಡ್ಡೆ ಹುಡುಗರು ಅಂಗಿ ಹರಿದುಕೊಂಡು ಅರೆ ಬೆತ್ತಲಾಗಿ ಕೇಕೆ ಹಾಕುತ್ತ ಬೈಕ್‌ನಲ್ಲಿ ಸಾಗುವ ಮೂಲಕ ನೋಡುಗರಿಗೆ ಮುಜುಗರ ಮೂಡಿಸಿದರು.

ನಗರದ ಡಿಸಿಎಂ ಬಡಾವಣೆಯ ರಾಜನಹಳ್ಳಿ ಪಾರ್ಕ್‌ನಲ್ಲಿ ಸ್ಥಳೀಯರು ಜೊತೆಗೂಡಿ ಹೋಳಿ ಹಬ್ಬವನ್ನು ಆಚರಿಸಿದರು. ಹಾಡು ಹಾಕಿಕೊಂಡು ಕುಣಿಯುತ್ತ ಸಂಭ್ರಮಿಸಿದರು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸಂಭ್ರಮದಿಂದ ಬಣ್ಣದಾಟದಲ್ಲಿ ತೊಡಗಿದ್ದರು. ನಗರದ ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸೇರಿ ವಿವಿಧ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಬಣ್ಣವನ್ನು ಎರಚಿ ಸಂಭ್ರಮಿಸಿದರು. ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು ಸಹ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ಮಕ್ಕಳು ಪಿಚಕಾರಿಯಲ್ಲಿ ಬಣ್ಣದೋಕುಳಿ ಹಾರಿಸಿ ಖುಷಿ ಪಟ್ಟರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಮಧ್ಯಾಹ್ನ ಕೆಲ ಕಾಲ ಬಣ್ಣದಾಟವಾಡಿ ಸಂಭ್ರಮಿಸಿದರು. ಬಿಸಿಲಿನ ಝಳ ಇದ್ದರೂ ಅದನ್ನು ಲೆಕ್ಕಿಸದೆ ಜನ ಬಣ್ಣವನ್ನಾಡಿದರು. ನಗರದ ರಸ್ತೆಯುದ್ದಕ್ಕೂ ಮಧ್ಯಾಹ್ನದವರೆಗೆ ಬಣ್ಣದಾಟದ ದೃಶ್ಯಗಳು ಕಂಡುಬಂದವು.

ಮೊಳಗಿದ ಮೋದಿ.. ಮೋದಿ... ಘೋಷಣೆ

ರಾಮ್‌ ಆ್ಯಂಡ್‌ ಕೋ ವೃತ್ತದಲ್ಲಿ ನಡೆದ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದ ಯುವಕ–ಯುವತಿಯರು ‘ಮೋದಿ.. ಮೋದಿ... ಮೋದಿ....’ ಘೋಷಣೆ ಕೂಗಿದರು.

ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದ ಯುವಕರು, ಇನ್ನೊಂದು ಹಾಡು ಹಾಕುವ ನಡುವಿನ ಸಮಯದಲ್ಲಿ ‘ಮೋದಿ.. ಮೋದಿ...’ ಘೋಷಣೆ ಕೂಗುತ್ತಿದ್ದರು. ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವ ವೇಳೆ ಯುವಕ–ಯುವತಿಯರು ಘೋಷಣೆ ಕೂಗುವ ಮೂಲಕ ಪ್ರಧಾನಿ ಬಗ್ಗೆ ಅಭಿಮಾನ ವ್ಯಕ್ತಪಡಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿತು.

‘ಮಂದಿರ್‌ ಬನಾಯೆಂಗೆ ಹಮ್‌...’ ಹಾಡಿಗೂ ಯುವಕರು ಅತ್ಯುತ್ಸಾಹದಿಂದ ನೃತ್ಯ ಮಾಡಿ ಗಮನ ಸೆಳೆದರು.

ನಿಖಿಲ್‌.. ಎಲ್ಲಿದ್ಯಪ್ಪಾ..?

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ಉದ್ದೇಶಿಸಿ ‘ನಿಖಿಲ್‌.. ಎಲ್ಲಿದ್ಯಪ್ಪಾ...’ ಎಂದು ಕೇಳಿದ ವಿಡಿಯೊ ವೈರಲ್‌ ಆಗಿರುವುದರ ಬೆನ್ನಲ್ಲೇ ಹೋಳಿ ಹಬ್ಬದಲ್ಲೂ ಇದು ಪ್ರತಿಧ್ವನಿಸಿತು. ಹುಡುಗರ ಗುಂಪು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗುತ್ತಿದ್ದಾಗ ‘ನಿಖಿಲ್‌.. ಎಲ್ಲಿದ್ಯಪ್ಪಾ...’ ಎಂದು ಗೇಲಿ ಮಾಡುತ್ತಿದ್ದುದು ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !