ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಳೆಯ ಅಬ್ಬರ, ಇಂದು ಶಾಲೆಗೆ ರಜೆ

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ₹ 1.83 ಕೋಟಿ ನಷ್ಟ
Last Updated 20 ಮೇ 2022, 4:25 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಶುರುವಾದ ಮಳೆಯ ಆರ್ಭಟವು ಗುರುವಾರವೂ ಮುಂದುವರಿಯಿತು. ಮಳೆಯು ತೀವ್ರಗೊಂಡಿರುವುದರಿಂದ ಶುಕ್ರವಾರ 1ರಿಂದ 10ನೇ ತರಗತಿವರೆಗೆ ಶಾಲೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ.

ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 4.8 ಸೆಂ.ಮೀ ಮಳೆಯಾಗಿದೆ. ಬುಧವಾರ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯು ಗುರುವಾರವೂ ಬಿಡುವಿಲ್ಲದೇ ಸುರಿಯಿತು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹ 1.83 ಕೋಟಿ ನಷ್ಟ ಸಂಭವಿಸಿದೆ. 44 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1,850 ಎಕರೆ ಭತ್ತದ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಬುಧವಾರ ಮಧ್ಯ ರಾತ್ರಿಯ ಬಳಿಕ ಬಿರುಸಿನಿಂದ ಮಳೆ ಸುರಿಯ ತೊಡಗಿತ್ತು. ಹಲವೆಡೆ ಚರಂಡಿಗಳೆಲ್ಲ ತುಂಬಿ ಉಕ್ಕಿ ಹರಿಯಿತು. ಬೆಳಿಗ್ಗೆವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು. ಗುರುವಾರ ಮುಂಜಾನೆಯಿಂದ ಆಗಾಗ ತುಸು ಬಿಡುವು ನೀಡುತ್ತಿದ್ದ ಮಳೆ ಮತ್ತೆ ತನ್ನ ಆಟವನ್ನು ಮುಂದುವರಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಸಂಚಾರಕ್ಕೆ ಅಡ್ಡಿ: ತಾಲ್ಲೂಕಿನ ಹೆಬ್ಬಾಳದಲ್ಲಿ ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ಕೈಗೊಂಡಿರುವುದರಿಂದ ಸರ್ವೀಸ್‌ ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಚರಂಡಿ ಸಮರ್ಪಕವಾಗಿ ಇಲ್ಲದ ಕಾರಣ ಮಳೆ ನೀರು ನಿಂತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನೀತು ನಿಂತಿದ್ದರಿಂದ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು. ಗ್ರಾಮದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಯಿತು.

ದಾವಣಗೆರೆಯ ಬನಶಂಕರಿ ಬಡಾವಣೆಯ ಬಳಿಯ ಕೆಳ ಸೇತುವೆಯಲ್ಲೂ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿದ್ದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮಳೆ ವಿವರ: ಚನ್ನಗಿರಿ ತಾಲ್ಲೂಕಿನಲ್ಲಿ 40 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 63 ಮಿ.ಮೀ, ಹರಿಹರ ತಾಲ್ಲೂಕಿನಲ್ಲಿ 44 ಮಿ.ಮೀ, ಹೊನ್ನಾಳಿ 42 ಮಿ.ಮೀ, ಜಗಳೂರಿನಲ್ಲಿ 45 ಮಿ.ಮೀ, ನ್ಯಾಮತಿ ತಾಲ್ಲೂಕಿನಲ್ಲಿ 59 ಮಿ.ಮೀ ಮಳೆಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 10 ಕಚ್ಚಾ ಮನೆಗಳು, 446 ಎಕರೆ ಭತ್ತದ ಬೆಳೆ ಹಾಗೂ 1.20 ಗುಂಟೆ ಅಡಿಕೆ, 2 ಎಕರೆ ಕೋಸು, 10 ಗುಂಟೆ ತೆಂಗಿನ ಬೆಳೆ ಸೇರಿ ಒಟ್ಟು ₹ 9.90 ಲಕ್ಷ ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕಿನಲ್ಲಿ 1 ಪಕ್ಕಾ ಮನೆ, 2 ಕಚ್ಚಾ ಮನೆಗೆ ಭಾಗಶಃ ಹಾನಿಯಾಗಿದೆ. 1118 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು ₹ 74.96 ಲಕ್ಷ ನಷ್ಟ ಸಂಭವಿಸಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 1 ಕಚ್ಚಾ ಮನೆ ಹಾಳಾಗಿದೆ. 257 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು₹ 78 ಲಕ್ಷ ನಷ್ಟ ಸಂಭವಿಸಿದೆ.

ನ್ಯಾಮತಿ ತಾಲ್ಲೂಕಿನಲ್ಲಿ 6 ಪಕ್ಕಾ ಹಾಗೂ 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದೆ. 2.27 ಎಕರೆ ಮೆಕ್ಕೆ ಜೋಳದ ಬೆಳೆ
ಹಾನಿಯಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 5 ಪಕ್ಕಾ ಹಾಗೂ 3 ಕಚ್ಚಾ ಮನೆಗಳಿಗೆ ತೀವ್ರ ಹಾನಿಯಾಗಿದೆ. 35 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು ₹ 8.55 ಲಕ್ಷ ನಷ್ಟ ಸಂಭ್ರಮಿಸಿದೆ.

ಜಗಳೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT