ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪಾಲನೆಗಷ್ಟೇ ಹೋಮ್‌ಗಾರ್ಡ್‌ ಸೀಮಿತವಲ್ಲ

ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್‌
Last Updated 4 ಜನವರಿ 2019, 14:35 IST
ಅಕ್ಷರ ಗಾತ್ರ

ದಾವಣಗೆರೆ: ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸರಿಗೆ ಬೆನ್ನೆಲುಬಾಗಿ ನಿಂತು ಕಾನೂನು ಪಾಲನೆ, ಶಾಂತಿ ಮತ್ತು ಸುವ್ಯವಸ್ಥೆಗಷ್ಟೇ ಸೀಮಿತವಲ್ಲ. ಇಂಥ ಕ್ರೀಡಾಕೂಟಗಳಲ್ಲೂ ಭಾಗವಹಿಸಿ, ತಮ್ಮ ಪ್ರತಿಭೆ ಮೆರೆಯಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್‌ ತಿಳಿಸಿದರು.

ಇಲ್ಲಿನ ಡಿಎಆರ್‌ ಮೈದಾನದಲ್ಲಿ ಶುಕ್ರವಾರ ಗೃಹರಕ್ಷಕ ದಳದ ಪೂರ್ವ ವಲಯ ಮಟ್ಟದ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಚಟುವಟಿಕೆಯಿಂದ ಶಿಸ್ತು ಬೆಳೆಯುತ್ತದೆ. ಕರ್ತವ್ಯ ಪಾಲನೆಯಲ್ಲಿ ಹುಮ್ಮಸ್ಸು ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಘನತೆ ತಂದು ಕೊಡುತ್ತದೆ ಎಂದರು.

ಹೋಂಗಾರ್ಡ್‌ ಚಿತ್ರದುರ್ಗ ಜಿಲ್ಲಾ ಸಮಾದೇಷ್ಟರಾದ ಸಿ.ಕೆ. ಸಂಧ್ಯಾ, ‘ಕ್ರೀಡೆಗಳಲ್ಲಿ ಭಾಗವಹಿಸುವವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಅವರ ಪ್ರತಿಭೆ ಹೊರಹೊಮ್ಮುತ್ತದೆ. ಹೀಗಾಗಿ, ಆಸಕ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು’ ಎಂದು ತಿಳಿಸಿದರು.

ಹೋಂಗಾರ್ಡ್‌ಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ. ಆದರೆ, ಹೋಂಗಾರ್ಡ್‌ ಕೂಡ ಶಕ್ತಿಶಾಲಿ ಘಟಕವಾಗಿ ಹೊರಹೊಮ್ಮಬೇಕು. ಇದರಿಂದ ಹೋಂಗಾರ್ಡ್‌ಗಳ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡಂತಾಗುತ್ತದೆ ಎಂದರು.

ತೆಲಂಗಾಣ ಮಾದರಿ ವೇತನ ಕೊಡಿ
ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುವ ಹೋಂಗಾರ್ಡ್‌ಗಳಿಗೆ ದಿನಕ್ಕೆ ₹ 385 ಭತ್ಯೆ ನೀಡಲಾಗುತ್ತದೆ. ಆದರೆ, ಇಲ್ಲಿಯಷ್ಟೇ ಅವಧಿಯಲ್ಲಿ ನಮ್ಮಷ್ಟೇ ಕೆಲಸ ಮಾಡುವ ಹೋಂಗಾರ್ಡ್‌ಗಳಿಗೆ ತೆಲಂಗಾಣದಲ್ಲಿ ₹ 675 ಭತ್ಯೆ ಕೊಡಲಾಗುತ್ತಿದೆ. ಈ ತಾರತಮ್ಯ ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೋಂಗಾರ್ಡ್‌ ಜಿಲ್ಲಾ ಕಮಾಂಡೆಂಟ್‌ ಡಾ. ಬಿ.ಎಚ್‌. ವೀರಪ್ಪ ಒತ್ತಾಯಿಸಿದರು.

ಹೋಂಗಾರ್ಡ್‌ಗಳ ಸೇವೆಯನ್ನು ಇನ್ನಷ್ಟು ಸಕ್ರಿಯವಾಗಿ ಬಳಸಿಕೊಳ್ಳಲು ವಿವಿಧ ಇಲಾಖೆಗಳು ಮುಂದೆ ಬರಬೇಕು. ಇದರಿಂದ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಯುವಜನರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.

ಕ್ರೀಡಾಕೂಟದಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳ 140 ಮಂದಿ ಹೋಂಗಾರ್ಡ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಹೋಂಗಾರ್ಡ್‌ ಸ್ಟಾಫ್‌ ಆಫೀಸರ್‌ ಸರಸ್ವತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT