ಕತ್ತಿಗೆ (ಹೊನ್ನಾಳಿ): ‘ನನ್ನ ಕೊನೆಯ ಉಸಿರು ಇರುವವರೆಗೂ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಂಗಳವಾರ ಕತ್ತಿಗೆ ಗ್ರಾಮದಿಂದ ಕಲ್ಲುಗುಡ್ಡದವರೆಗೂ ಪಾದಯಾತ್ರೆ ನಡೆಸಿದ ವೇಳೆ ಮಾತನಾಡಿದ ಅವರು, ‘ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಆಗುವ ಅನಾಹುತಗಳ ಕುರಿತು ಕತ್ತಿಗೆ ಗ್ರಾಮಸ್ಥರು ವಿವರಿಸಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಅಲ್ಲಿ ಕಲ್ಲುಗಣಿಗಾರಿಕೆ ಮಾಡಲು ನಾನು ಅವಕಾಶ ಕೊಡುವುದಿಲ್ಲ’ ಎಂದರು.
‘ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಈ ಭಾಗದ ನೂರಾರು ರೈತರ ಬದುಕು ಸರ್ವನಾಶವಾಗುತ್ತದೆ. 2018ರಲ್ಲಿ ಶಾಸಕನಾಗಿದ್ದಾಗ ನನ್ನ ಬಳಿ ಗಣಿಗಾರಿಕೆಯ ಪ್ರಸ್ತಾವ ಇಡಲಾಗಿತ್ತು. ಆದರೆ ನಾನು ಗ್ರಾಮಸ್ಥರ ಪರವಾಗಿ ನಿಂತುಕೊಂಡಿದ್ದೆ. ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದೆಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೆ. ಈಗಲೂ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ’ ದಂರು ಹೇಳಿದರು.
ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಈ ಭಾಗದ ಚೆಕ್‌ಡ್ಯಾಂ ಹಾಗೂ ಕೆರೆಗಳಿಗೆ ತೀವ್ರ ಹಾನಿಯಾಗುತ್ತದೆ. ಉದ್ದೇಶಿತ ಗುಡ್ಡದ ಸಮೀಪದಲ್ಲಿಯೇ 200 ಎಕರೆ ವಿಸ್ತೀರ್ಣದ ಹೊಸಕೆರೆ ಇದೆ. ಒಂದು ವೇಳೆ ಗಣಿಗಾರಿಕೆ ನಡೆಸಿದರೆ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿಯುತ್ತದೆ. ಇಲ್ಲಿನ ಅಡಕೆ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ತೀವ್ರ ಹಾನಿಯಾಗುತ್ತದೆ ಎಂದರು.
ಸರ್ವೆ ನಂ 226, 227, 228ರಲ್ಲಿ ಒಟ್ಟು 10 ಎಕರೆ ಭೂಮಿಯನ್ನು ಗಣಿಗಾರಿಕೆ ಉದ್ದೇಶದಿಂದ ಹೆಚ್ಚು ಹಣಕೊಟ್ಟು ಖರೀದಿ ಮಾಡಲಾಗಿದೆ. ಹೀಗಾಗಿ ಇಲ್ಲಿನ ರೈತರು ಆತಂಕದಲ್ಲಿದ್ದಾರೆ. ಈ ಬಗ್ಗೆ ಭೂ ಗಣಿವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೂ ಮನವಿ ಮಾಡುತ್ತೇನೆ ಎಂದರು.
ಇಲ್ಲಿ ಗಣಿಗಾರಿಕೆ ಮಾಡಬೇಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಕೆಲವರು ಮತ್ತೆ ಮತ್ತೆ ಗಣಿಗಾರಿಕೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಕತ್ತಿಗೆ ಗ್ರಾಮದ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜ್ ಹಾಗೂ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಅವರು ದೂರಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ಗ್ರಾಮದ ಮುಖಂಡರಾದ ರಾಮಚಂದ್ರಣ್ಣ, ಮೇಘರಾಜ್, ಓಂಕಾರಪ್ಪ, ಯೋಗೇಶಪ್ಪ, ಲೋಕಪ್ಪ, ನಾಗರಾಜಪ್ಪ, ಬಿದ್ರಿ ಚನ್ನೇಶಪ್ಪ, ಬಸವರಾಜು, ರಾಜು, ಚನ್ನೇಶ್, ಆಶಿಕಾ ಕಾಂತರಾಜ್, ಪ್ರಸನ್ನ ಸೇರಿದಂತೆ ನೂರಾರು ಕತ್ತಿಗೆ ಗ್ರಾಮಸ್ಥರು ಕಲ್ಲುಗುಡ್ಡದಲ್ಲಿ ಹಾಜರಿದ್ದರು.