ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕ್ರೀಡೆಯಿಂದ ಆರೋಗ್ಯ, ಯಶಸ್ಸು: ರೇಣುಕಾಚಾರ್ಯ

ಹೊನ್ನಾಳಿ ತಾಲ್ಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜನೆ
Last Updated 9 ಜನವರಿ 2022, 3:44 IST
ಅಕ್ಷರ ಗಾತ್ರ

ಹೊನ್ನಾಳಿ: ‘ಕ್ರೀಡೆಯಿಂದ ಆರೋಗ್ಯ ಮತ್ತು ಯಶಸ್ಸು ಎರಡೂ ಸಿಗುತ್ತದೆ. ಯಾವುದೇ ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ. ಆದರೆ, ಎರಡನ್ನೂ ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ತಾಲ್ಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಯುವಕರು ದೇಶದ ಸಂಪತ್ತು. ಕ್ರೀಡೆಯ ಜೊತೆಗೆ ಇತರೆ ಚಟುವಟಿಕೆ ಬಗ್ಗೆಯೂ ಗಮನಹರಿಸಬೇಕು. ವಿದ್ಯಾಭ್ಯಾಸಕ್ಕೂ ಹೆಚ್ಚು ಒತ್ತು ನೀಡುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯಬೇಕು’ ಎಂದು ಅವರು ಸಲಹೆ ನೀಡಿದರು.

‘ಅವಳಿ ತಾಲ್ಲೂಕಿನ ಜನರು ಕೊರೊನಾ ಬಗ್ಗೆ ಜಾಗೃತರಾಗಿರಬೇಕು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ, ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಈ ಮೂಲಕ ಕೊರೊನಾ ಸೋಂಕು ಗ್ರಾಮವನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕು’ ಎಂದು ರೇಣುಕಾಚಾರ್ಯ ಸಲಹೆ ನೀಡಿದರು.

ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ಗ್ರಾಮದ ಮುಖಡರಾದ ಪೀರ್ಯಾನಾಯ್ಕ, ಸೇವ್ಯಾನಾಯ್ಕ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.

ಕೊರೊನಾ ನಿಯಮ ಉಲ್ಲಂಘನೆ
ವಾರಾಂತ್ಯದ ಕರ್ಫ್ಯೂ ಮಧ್ಯೆಯೇ ನಡೆದ ಪಂದ್ಯಾವಳಿಯಲ್ಲಿ ಯಾರೂ ಮಾಸ್ಕ್‌ ಧರಿಸದಿರುವುದು, ಅಂತರ ಕಾಯ್ದುಕೊಳ್ಳದೇ ಕೋವಿಡ್‌ ನಿಯಮ ಉಲ್ಲಂಘಿಸಿರುವುದು ಕಂಡುಬಂದಿತು.

‘ಹಳ್ಳಿಯಲ್ಲಿರುವ ಕ್ರಿಕೆಟ್ ಟೂರ್ನಿಗೆ ಹೋಗಲೋ ಬೇಡವೋ ಎಂದು ಶುಕ್ರವಾರ ಜಿಲ್ಲಾಧಿಕಾರಿಯನ್ನು ಕೇಳಿದ್ದೆ. ಒಳಾಂಗಣದ ಕ್ರೀಡೆಗಳಲ್ಲಿ 100ರ ಒಳಗೆ, ಹೊರಾಂಗಣದಲ್ಲಿ ನಡೆಯುವ ಮದುವೆ ಮತ್ತಿತರ ಸಮಾರಂಭಗಳಲ್ಲಿ 200ರ ಒಳಗೆ ಸೇರಬಹುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದರು. ಹೀಗಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮಗಳು, ಕ್ರೀಡೆಗಳಿಗೆ ಅನುಮತಿಯನ್ನು ಯಾರೂ ಪಡೆಯುವುದಿಲ್ಲ. ಟೂರ್ನಿಯಲ್ಲಿ ಓಮೈಕ್ರಾನ್‌ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನೂ ಆಡಿದ್ದೇನೆ’ ಎಂದು ಶಾಸಕ ರೇಣುಕಾಚಾರ್ಯ ಅವರು ನಿಯಮ ಉಲ್ಲಂಘನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಘಂಟ್ಯಾಪುರದಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ನನ್ನ ಗಮನಕ್ಕೆ ತಂದಿಲ್ಲ. ವಾರಾಂತ್ಯದ ಕರ್ಫ್ಯೂ ಇರುವಾಗ ಟೂರ್ನಿ ಆಯೋಜಿಸಬಾರದಿತ್ತು. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ. ನಿಯಮ ಉಲ್ಲಂಘನೆಯಾಗಿದ್ದರೆ ಟೂರ್ನಿ ಆಯೋಜಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಬಸವನಗೌಡ ಕೋಟೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT