ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜನರಿಗೆ ದೊರಕದ ಆಸ್ಪತ್ರೆ ಬೆಡ್‌ಗಳು

ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಕೊರೊನಾ ಅವ್ಯವಸ್ಥೆ, ಅವ್ಯವಹಾರಗಳ ಚರ್ಚೆ
Last Updated 25 ಆಗಸ್ಟ್ 2020, 16:46 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿನಿಂದ ಉಂಟಾದ ಅವ್ಯವಸ್ಥೆ, ಮಾಡುತ್ತಿರುವ ಅವ್ಯವಹಾರಗಳು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಭಾರಿ ಚರ್ಚೆಗೆ ಒಳಗಾಯಿತು. ರಾಜಕೀಯ ಮೇಲಾಟಕ್ಕೂ ಕಾರಣವಾಯಿತು.

ಸೋಂಕು ಬಂದವರಿಗೆ ಚಿಕಿತ್ಸೆ ನೀಡಲು ಒಂದು ವ್ಯವಸ್ಥೆ ಇದೆ. ಕೊರೊನಾ ಇಲ್ಲದೇ ಬೇರೆ ರೋಗಗಳಿಂದ ಬಳಲುತ್ತಿರುವವರು ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡಿ ಸಾಯುತ್ತಿದ್ದಾರೆ. ಯಾವುದೇ ಆಸ್ಪತ್ರೆಗೆ ಹೋದರೂ ಅಲ್ಲಿ ಬೆಡ್‌ಗಾಗಿ ಜನ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅಗತ್ಯ ಇರುವಷ್ಟು ಆಕ್ಸಿಜನ್‌ ಬೆಡ್‌ಗಳು, ವೆಂಟಿಲೇಟರ್‌ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಚರ್ಚೆಗೆ ಮುನ್ನುಡಿ ಹಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಏಳು ವೆಂಟಿಲೇಟರ್‌ ಮೊದಲೇ ಇದ್ದವು. 10 ಹೊಸತು ಬಂದಿವೆ. ಅದನ್ನು ನಿರ್ವಹಿಸಲು ಸಿಬ್ಬಂದಿ ಇಲ್ಲ. ಇದಕ್ಕಿಂತಲೂ ಅಗತ್ಯವಾಗಿ ಹೈಫ್ಲೋ ನೇಸಲ್‌ ಆಕ್ಸಿಜನ್‌ ಬೇಕಿರುವುದು. ವೆಂಟಿಲೇಟರ್‌ಗೆ ಹೋದರೆ ಮತ್ತೆ ಗುಣಮುಖರಾಗಿ ಬರುವವರ ಸಂಖ್ಯೆ ಶೇ 5 ಅಷ್ಟೇ ಇದೆ. ಆದರೆ ಹೈಫ್ಲೋ ನೇಸಲ್‌ ಆಕ್ಸಿಜನ್‌ನಲ್ಲಿ ಬದುಕುವ ಅವಕಾಶ ಹೆಚ್ಚಿದೆ. ಜಿಲ್ಲಾಸ್ಪತ್ರೆಯಲ್ಲಿ 15, ಬಾಪೂಜಿಯಲ್ಲಿ 8 ಮತ್ತು ಎಸ್‌ಎಸ್ ಹೈಟೆಕ್‌ ಆಸ್ಪತ್ರೆಯಲ್ಲಿ 12 ಹೈಫ್ಲೋ ನೇಸಲ್‌ ಆಕ್ಸಿಜನ್‌ಗಳು ಇವೆ. ಇದು ಸಾಕಾಗುವುದಿಲ್ಲ. ಆಸ್ಪತ್ರೆಯಲ್ಲಿಯೇ ಆಕ್ಸಿಜನ್‌ ಪ್ಲಾಂಟ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ ವಿವರ ನೀಡಿದರು.

ಯುವಕನೊಬ್ಬನಿಗೆ ಸೋಮವಾರ ಅನಾರೋಗ್ಯ ಉಂಟಾಗಿತ್ತು. ಎಲ್ಲ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೂ ಬೆಡ್‌ ಸಿಗಲಿಲ್ಲ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ ಸಿಕ್ಕಿತು. ಅಲ್ಲಿಯೂ ಆಯುಷ್ಮಾನ್‌ ಭಾರತ್‌ ಎಂದು ಹೆಸರೆತ್ತಿದ ಕೂಡಲೇ ಬೆಡ್‌ ಇಲ್ಲ ಅಂದರು. ಆಯುಷ್ಮಾನ್‌ ಭಾರತ್‌ ಬೇಡ. ಅವರು ಹಣ ಪಾವತಿ ಮಾಡುತ್ತಾರೆ ಎಂದು ತಿಳಿಸಿದ ಮೇಲಷ್ಟೇ ಬೆಡ್‌ ನೀಡಿದ್ದಾರೆ ಎಂದು ಬಸವಂತಪ್ಪ ಬೇಡ್‌ ಸಂಕಷ್ಟ ವಿವರಿಸಿದರು.

‘ರೋಗಿಯನ್ನು ಆಂಬುಲೆನ್ಸ್‌ ನಲ್ಲಿಯೇ ಇಟ್ಟು ರಾತ್ರಿಯಿಂದ ಬೆಳಿಗ್ಗೆವರೆಗೆ ಆಸ್ಪತ್ರೆಗಳಿಗೆ ಸುತ್ತುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

‘ಎಲ್ಲ ಆಸ್ಪತ್ರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿದರೂ ಪ್ರಯೋಜನವಾಗಿಲ್ಲ. ನೋಡಲ್‌ ಅಧಿಕಾರಿಗಳ ಪಟ್ಟಿ ನೀಡಿ’ ಎಂದು ಸದಸ್ಯರಾದ ಓಬಳಪ್ಪ, ನಿಂಗಪ್ಪ ಒತ್ತಾಯಿಸಿದರು.

ಸಿಬ್ಬಂದಿ ಕೊರತೆ ಇದೆ. 450 ಬೆಡ್‌ಗೆ ಇದ್ದ ಸಿಬ್ಬಂದಿಯೇ ಈಗ 900 ಬೆಡ್‌ಗೆ ಅನುಮೋದನೆ ಸಿಕ್ಕಿದ ಮೇಲೆಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿ ಡಾ. ರೇಣುಕಾರಾಧ್ಯ ವಿವರಿಸಿದರು.

ಎಂಜಿನಿಯರಿಂಗ್‌ ಮಾಡಿದವರನ್ನು ಬಳಸಿಕೊಳ್ಳಿ ಎಂದು ತೇಜಸ್ವಿ ಪಟೇಲ್‌ ಸಲಹೆ ನೀಡಿದರು.ತಜ್ಞ ವೈದ್ಯರೇ ಆಗಬೇಕು ಎಂದು ಸಿಇಒ ಉತ್ತರಿಸಿದರು.

‘ಕೊರೊನಾ ಮಾತ್ರವಲ್ಲ ಇತರ ಕಾಯಿಲೆಗಳಿಗೂ ಚಿಕಿತ್ಸೆ ನೀಡಬೇಕು ಎಂದು ನಾವು ಒತ್ತಾಯಿಸುವುದು, ನಿರ್ಣಯಿಸುವುದು ಯಾಕೆ? ಅದು ಮಾಡಲೇಬೇಕಾದ ಅಗತ್ಯ ಕ್ರಮಗಳಲ್ಲವೇ ಎಂದು ತೇಜಸ್ವಿ ಪಟೇಲ್‌ ಪ್ರಶ್ನಿಸಿದರು.

ಬೆಡ್‌ ನೀಡದ, ಚಿಕಿತ್ಸೆ ನೀಡದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಮಂಜುಳಾ ಟಿ.ವಿ. ರಾಜು, ವಾಗೀಶಸ್ವಾಮಿ ಇನ್ನೂ ಹಲವು ಸದಸ್ಯರು ಒತ್ತಾಯಿಸಿದರು. ಈ ಮಧ್ಯೆ ಪ್ರಶ್ನೆಗೆ ಉತ್ತರ ಅಧಿಕಾರಿಗಳು ನೀಡುವುದಾ, ಸದಸ್ಯರ ಎಂಬ ಬಗ್ಗೆ ವಿವಾದ ಉಂಟಾಗಿ ವಿಶ್ವನಾಥ ಮತ್ತು ವಾಗೀಶಸ್ವಾಮಿ ಏಕವಚನದಲ್ಲಿ ಪರಸ್ಪರ ವಾಗ್ವಾದ ಮಾಡಿದರು.

ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿಗದಿ ಮಾಡಲಾಗಿದೆ. ಅದೇ ರೀತಿ ಸಾಮಾನ್ಯ ಜ್ವರ ಬಂದರೆ ಅದಕ್ಕೊಂದು ಆಸ್ಪತ್ರೆ, ಹೃದಯದ ಸಮಸ್ಯೆ ಬಂದರೆ ಅದಕ್ಕೊಂದು ಆಸ್ಪತ್ರೆ ನಿಗದಿ ಮಾಡಿ. ಹೀಗೆ ಯಾವ್ಯಾವ ರೋಗಗಳಿಗೆ ಎಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂದು ಪಟ್ಟಿ ಮಾಡಿ ತಿಳಿಸಿ ಎಂದು ಸುರೇಂದ್ರ ನಾಯ್ಕ್‌, ನಿಂಗಪ್ಪ ಸಲಹೆ ನೀಡಿದರು.

ನೆಗೆಟಿವ್‌–ಪಾಸಿಟಿವ್‌ ವಿವಾದ: ಕೊರೊನಾ ಪರೀಕ್ಷೆ ಮಾಡಿಸಿದವರಿಗೆ ನೆಗೆಟಿವ್ ಎಂದು ಮೆಸೇಜ್‌ ಬರುತ್ತದೆ. ಕೆಲವು ದಿನ ಬಿಟ್ಟು ಪಾಸಿಟಿವ್‌ ಎಂದು ಮತ್ತೆ ಮೆಸೇಜ್‌ ಬರುತ್ತದೆ ಎಂದು ಸುರೇಂದ್ರ ನಾಯ್ಕ್‌ ಸಮಸ್ಯೆ ವಿವರಿಸಿದರು. ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಮಾಡಿದಾಗ ನೆಗೆಟಿವ್‌ ಬಂದಿರುತ್ತದೆ. ಆರ್‌ಟಿಪಿಸಿಆರ್‌ ಫಲಿತಾಂಶ ಬಂದಿರುವುದಿಲ್ಲ. ಅದನ್ನು ಆ ಮೆಸೇಜ್‌ನಲ್ಲಿಯೇ ನೀಡಲಾಗಿರುತ್ತದೆ. ಆದರೆ ನೆಗೆಟಿವ್‌ ಎಂಬುದನ್ನಷ್ಟೇ ಓದಿಕೊಂಡು, ಅದರ ಮುಂದೆ ಇರುವ ವಿವರ ನೋಡದೇ ಇರುವುದರಿಂದ ಗೊಂದಲವಾಗುತ್ತಿದೆ ಎಂದು ಸಿಇಒ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಅವರೂ ಇದ್ದರು.

ರಾಜಕೀಯದ ಮೇಲಾಟ

ನಗರಗಳಲ್ಲಿ ಮಾತ್ರವಲ್ಲ, ತಾಲ್ಲೂಕು ಮಟ್ಟದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಹೊರತುಪಡಿಸಿ ಇತರ ರೋಗಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದು ಸದಸ್ಯ ವಿಶ್ವನಾಥ ಅವರು ಪ್ರಶ್ನಿಸಿದಾಗ ಚರ್ಚೆ ರಾಜಕೀಯ ಆಯಾಮ ಪಡೆದುಕೊಂಡಿತು.

‘ಸರ್ಕಾರ ಇಷ್ಟು ಕ್ರಮ ಕೈಗೊಂಡಿರುವುದರಿಂದಲೇ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. 70 ವರ್ಷದ ವ್ಯವಸ್ಥೆ ಇದು. ಅದನ್ನು ಸರಿ ಪಡಿಸಲು ಇನ್ನೂ 10 ವರ್ಷದ ಬೇಕು’ ಎಂದು ಸದಸ್ಯ ಎಂ.ಆರ್‌. ಮಹೇಶ್‌ ಪ್ರತಿಕ್ರಿಯೆ ನೀಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ನಡುವೆ ವಾಗ್ವಾದಗಳು ನಡೆದವು.

ಕೆ.ಎಸ್‌. ಬಸವಂತಪ್ಪ, ಹದಡಿ ನಿಂಗಣ್ಣ ಮುಂತಾದವರೂ ಧ್ವನಿಗೂಡಿಸಿದರು. ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗದಷ್ಟು ಗೊಂದಲ ಉಂಟಾಯಿತು. ಅಧ್ಯಕ್ಷೆ ದೀಪಾ ಜಗದೀಶ್‌ ಸಭೆಯನ್ನು ನಿಯಂತ್ರಿಸಲು ಬೆಲ್‌ ಬಾರಿಸುತ್ತಲೇ ಇದ್ದರು. ಅಧ್ಯಕ್ಷರ ಮಾತಿಗೆ ಬೆಲೆ ಕೊಡಿ ಎಂದು ಮಂಜುಳಾ ಟಿ.ವಿ.ರಾಜು ಮನವಿ ಮಾಡಿಕೊಂಡರು.

ಪಕ್ಷಗಳ ಬಗ್ಗೆ ಹೊರಗೆ ಮಾತನಾಡಿ. ಇಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಅಧ್ಯಕ್ಷರು ಸಲಹೆ ನೀಡಿದರು. ಸ್ವಪಕ್ಷದ ಅಧ್ಯಕ್ಷರೇ ಹೀಗಂದಿದ್ದು ಮಹೇಶ್‌ಗೆ ಸರಿ ಕಂಡು ಬರಲಿಲ್ಲ. ‘ಪಕ್ಷ ಇದ್ದಿದ್ದರಿಂದಲೇ ನೀವು ಗೆದ್ದಿದ್ದೀರಿ. ಈಗ ಆ ಸ್ಥಾನದಲ್ಲಿ ಕೂತಿದ್ದೀರಿ’ ಎಂದು ಮಹೇಶ್‌ ತಿರುಗೇಟು ನೀಡಿದರು.

‘ಕೊರೊನಾ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಪಕ್ಷ ರಾಜಕೀಯದ ಬಗ್ಗೆ ಚರ್ಚೆ ಮಾಡಿ ಸಮಯ ಹಾಳು ಮಾಡಬೇಡಿ. ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ ಮಾಡಿ’ ಎಂದು ಶಾಸಕ ಎಸ್‌. ರಾಮಪ್ಪ ಚರ್ಚೆ ಕೊನೆಗೊಳಿಸಿದರು.

ಉತ್ತರ ಸಿಗದ ಪ್ರಶ್ನೆ

ಒಬ್ಬ ಕೊರೊನಾ ಸೋಂಕಿತನಿಗೆ ಒಟ್ಟು ಎಷ್ಟು ವೆಚ್ಚವನ್ನು ಸರ್ಕಾರ ಮಾಡುತ್ತದೆ ಎಂದು ವಿಶ್ವನಾಥ್‌ ಪ್ರಶ್ನಿಸಿದರು. ₹ 2 ಲಕ್ಷ, ₹ 3 ಲಕ್ಷ, ₹ 4 ಲಕ್ಷ ಎಂದೆಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಿಜವಾಗಿ ಎಷ್ಟು ವೆಚ್ಚ ಎಂದು ಸುರೇಂದ್ರ ನಾಯ್ಕ್‌ ಕೂಡ ಕೇಳಿದರು.

ಒಬ್ಬೊಬ್ಬರಿಗೆ ಒಂದೊಂದು ರೀತಿ ಮಾಡಲಾಗುತ್ತಿದೆ. ಒಂದು ಕಡೆ ಬ್ಯಾರಿಕೇಡ್‌ ಹಾಕಿದ್ದಕ್ಕೆ ₹ 60 ಸಾವಿರ ಬಿಲ್‌ ಮಾಡಿರುವುದು ಕೂಡ ಇದೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ್‌ ಧ್ವನಿಗೂಡಿಸಿದರು.

ಬ್ಯಾರಿಕೇಡ್‌ಗೆ ಅಡಿಗೆ ಇಷ್ಟು ಎಂದು ಪಿಡಬ್ಲ್ಯುಡಿ ಎಂಜಿನಿಯರ್‌ ಮತ್ತು ನಗರದಲ್ಲಿ ಪಾಲಿಕೆ ಎಂಜಿನಿಯರ್‌ ನಿಗದಿ ಮಾಡಿ ಬಿಲ್‌ ಪಾಸ್‌ ಮಾಡುತ್ತಿದ್ದಾರೆ ಎಂದು ಬಸವಂತಪ್ಪ ಆರೋಪಿಸಿದರು.

ಒಬ್ಬರಿಗೆ ಇಷ್ಟೇ ಎಂದು ನಿಗದಿಯಾಗಿಲ್ಲ. ರೋಗ ಲಕ್ಷಣಗಳಿಲ್ಲದೇ ಸೋಂಕು ಇದ್ದರೆ ಚಿಕಿತ್ಸೆ ಬೇರೆ. ಲಕ್ಷಣಗಳಿದ್ದರೆ ಚಿಕಿತ್ಸೆ ಬೇರೆ. ಇತರ ರೋಗಗಳಿದ್ದರೆ ಆಗ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಇಒ ಪದ್ಮ ಬಸವಂತಪ್ಪ ವಿವರ ನೀಡಿದರು.

ಸೋಂಕಿದ್ದರೂ ಆರಾಮ ಇದ್ದ, ಕ್ವಾರಂಟೈನ್‌ನಲ್ಲಿ 14 ದಿನ ಇರುವ ಒಬ್ಬ ವ್ಯಕ್ತಿಗೆ ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯಲೇ ಇಲ್ಲ.

ಕಿರಣ್‌, ಸಚಿನ್‌ಗೆ ಸನ್ಮಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ, ಒಟ್ಟು 616 ಅಂಕ ಗಳಿಸಿದ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿ ಜಿ.ಟಿ. ಕಿರಣ್‌ ಮತ್ತು ಕನ್ನಡದಲ್ಲಿ 124 ಅಂಕ ಗಳಿಸಿರುವ ಜಾತ್ರೆಯಲ್ಲಿ ಕಳೆದು ಹೋಗಿ ಬಾಲಕರ ಬಾಲಮಂದಿರದಲ್ಲಿರುವ ಸಚಿನ್‌ ಎಂಬ ಸಾಧಕರನ್ನು ಸನ್ಮಾನಿಸಲಾಯಿತು. ಅವರ ವಿವರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ನೀಡಿದರು.

ಇತ್ತೀಚೆಗೆ ನಿಧನರಾದ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಗೋವಿಂದರಾಜ್‌ ಅವರಿಗೆ ಮೌನ ಪ್ರಾರ್ಥನೆ ಮೂಲಕ ನಮನ ಸಲ್ಲಿಸಲಾಯಿತು.

ಜೀವ ವೈವಿಧ್ಯ ಬಗ್ಗೆ ಕಾರ್ಡಿಯ ಸಂಸ್ಥೆಯ ಡಾ. ಜಿ.ಟಿ. ಸುದರ್ಶನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT