ಬಾಕಿ ವೇತನ ಬಿಡುಗಡೆಗೆ ಒತ್ತಾಯ: ವಸತಿನಿಲಯ ಕಾರ್ಮಿಕ ಸಂಘದಿಂದ ಪ್ರತಿಭಟನೆ

7

ಬಾಕಿ ವೇತನ ಬಿಡುಗಡೆಗೆ ಒತ್ತಾಯ: ವಸತಿನಿಲಯ ಕಾರ್ಮಿಕ ಸಂಘದಿಂದ ಪ್ರತಿಭಟನೆ

Published:
Updated:
Deccan Herald

ದಾವಣಗೆರೆ: ಬಾಕಿ ಇರುವ ವೇತನ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಆಶ್ರಯದಲ್ಲಿ ವಸತಿನಿಲಯಗಳ ‘ಡಿ’ ಗ್ರೂಪ್‌ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಕೈದಾಳೆ ಮಾತನಾಡಿ, ‘ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿನಿಲಯಗಳಲ್ಲಿ ಖಾಲಿ ಇರುವ ‘ಡಿ’ ಗ್ರೂಪ್‌ನ ಹುದ್ದೆಗಳಲ್ಲಿ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ ಹಾಗೂ ಕಾವಲುಗಾರರಾಗಿ ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸುಮಾರು 800 ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಮೂರ್ನಾಲ್ಕು ತಿಂಗಳಿಂದ ವೇತನವನ್ನೇ ಪಾವತಿಸಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ಅನುದಾನ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ. ನೌಕರರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ಕನಿಷ್ಠ ವೇತನ ಕಾಯ್ದೆಯಡಿ 2014ರಿಂದ ಮೂರು ವರ್ಷಗಳ ವ್ಯತ್ಯಾಸದ ತುಟ್ಟಿಭತ್ಯೆಯನ್ನು ಕೂಡಲೇ ಪಾವತಿಸಬೇಕು. ದಾವಣಗೆರೆಯ ಗ್ಲೋಬಲ್‌ ಏಜನ್ಸಿಯ ಹಾಗೂ ಶಿವಮೊಗ್ಗದ ಪ್ರೈವೇಟ್‌ ಬ್ಯುರೊ ಗುತ್ತಿಗೆದಾರರು ಇಪಿಎಫ್‌ ಭರಿಸುವಲ್ಲಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು. ಕಾರ್ಮಿಕರಿಗೆ ವಾರದ ಹಾಗೂ ತಿಂಗಳ ರಜೆ ಸೌಲಭ್ಯವನ್ನು ಕಲ್ಪಿಸಬೇಕು. ಕಾರ್ಮಿಕರಿಗೆ ತಿಂಗಳು ವೇತನ ಚೀಟಿ ನೀಡಬೇಕು. ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಜಯಪ್ಪ, ಮಂಜುಳಮ್ಮ, ಈಶ್ವರ, ರಂಗಮ್ಮ, ಅಜ್ಜಪ್ಪ, ರಮೇಶ್‌, ಮಹೇಶ್‌, ಶಾಂತಕುಮಾರ, ಈಶ್ವರಪ್ಪ ಅವರೂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !