ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಭೂತಗಳಲ್ಲಿ ಲೀನವಾದ ಹೊಟ್ಯಾಪುರ ಶ್ರೀ

Published 25 ಜುಲೈ 2023, 15:33 IST
Last Updated 25 ಜುಲೈ 2023, 15:33 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸೋಮವಾರ ಮುಂಜಾನೆ ಲಿಂಗೈಕ್ಯರಾದ ಉಜ್ಜಯಿನಿ ಶಾಖಾಮಠವಾದ ಹೊಟ್ಯಾಪುರ ಹಿರೇಮಠದ ಪೀಠಾಧ್ಯಕ್ಷ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಕ್ರಿಯಾ ಸಮಾಧಿ ಕಾರ್ಯವು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ವೀರಶೈವ ಸಂಪ್ರದಾಯದಂತೆ ಮಂಗಳವಾರ ಮಧ್ಯಾಹ್ನ ನಡೆಯಿತು.

ತರೀಕೆರೆ ತಾಲ್ಲೂಕಿನ ಹುಣಸಘಟ್ಟ ಹಾಲಸ್ವಾಮಿ ಮಠದ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ, ಬಿಳಗಿ ಮಠದ ಸ್ವಾಮೀಜಿ, ಹಿರೇಹಡಗಲಿ, ಗೋವಿನಕೋವಿ, ಚನ್ನಗಿರಿ, ನಾಗವಂದ, ಬೀರೂರು, ತರೀಕೆರೆ ಮಠದ ಸ್ವಾಮೀಜಿಗಳು ಹಾಗೂ ನೂರಾರು ಪುರೋಹಿತರ ಮಂತ್ರ ಘೋಷದೊಂದಿಗೆ ಗಣಪತಿ ಪುಣ್ಯಃ, ಪಂಚಕಲಶ, ಅಷ್ಟ ದಿಗ್ಪಾಲಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಸಂಕಲ್ಪದೊಂದಿಗೆ ನಡೆಸಲಾಯಿತು. ಗುರುಗಳ ಪೂರ್ವಾಶ್ರಮದ ಸಹೋದರರು ಹಾಗೂ ಕುಟುಂಬವರ್ಗದವರ ಸಂಕಲ್ಪದೊಂದಿಗೆ ಪೂಜೆ ನಡೆಸಿ, ಅವರ ಮೂಲ ಮಠದಲ್ಲಿ ಅಂತಿಮ ವಿಧಿ ವಿಧಾನ ನಡೆಸಿ, ಅವರ ಇಷ್ಟಲಿಂಗಕ್ಕೆ ಹಾಗೂ ಪಾರ್ಥೀವ ಶರೀರಕ್ಕೆ ಅಭಿಷೇಕ ನಡೆಸಿ, ಉಜ್ಜಯಿನಿ ಸ್ವಾಮೀಜಿ ಪಾದಪೂಜೆಯೊಂದಿಗೆ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಭಸ್ಮ ಹಾಗೂ ಬಿಲ್ವಪತ್ರೆಯಿಂದ ಮುಚ್ಚಲಾಯಿತು.

ಇದಕ್ಕೂ ಮೊದಲು ಗ್ರಾಮದ ಹೊರವಲಯದ ಮಠದಿಂದ ಪಾರ್ಥಿವ ಶರೀರವವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಅವರ ಭಾವಚಿತ್ರವನ್ನು ಇರಿಸಿ, ಗ್ರಾಮದ ಪ್ರತಿ ಬೀದಿಯಲ್ಲಿಯೂ ಮೆರವಣಿಗೆ ಮಾಡಲಾಯಿತು. ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೂ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಬಂದು ದರ್ಶನ ಪಡೆದರು.

ಮಠಕ್ಕೆ ಬರುತ್ತಿದ್ದ ಭಕ್ತರಿಗೆ ಗ್ರಾಮಸ್ಥರು ಹಾಗೂ ಭಕ್ತರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಶಾಸಕ ಡಿ.ಜಿ. ಶಾಂತನಗೌಡ, ಎಂ.ಪಿ. ಬಸವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್. ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಪಾಟೀಲ್ ರಾಂಪುರ, ಹೊಟ್ಯಾಪುರ ಗ್ರಾಮದ ಹಿರಿಯರಾದ ವಾಮದೇವಪ್ಪ, ಮಹದೇವಪ್ಪ, ಯುವಕರು ಗ್ರಾಮಸ್ಥರು ಸೇರಿ ಹಲವರು ಸ್ವಾಮೀಜಿ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT