ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗಾಗಿ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿದ್ದೆ: ಬಸವರಾಜ ಬೊಮ್ಮಾಯಿ

ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 18 ಮಾರ್ಚ್ 2023, 5:29 IST
ಅಕ್ಷರ ಗಾತ್ರ

ಹೊನ್ನಾಳಿ: ‘ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪ್ರಮಾಣವನ್ನು ಏರಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕೆ ಕೈ ಹಾಕಬೇಡಿ. ಅದು ಜೇನುಗೂಡು ಎಂದು ಕೆಲವರು ಸಲಹೆ ನೀಡಿದ್ದರು. ಜೇನುನೊಣಗಳು ಕಚ್ಚಿದರೂ ಪರವಾಗಿಲ್ಲ. ಜನರಿಗೆ ಜೇನು ನೀಡೇ ನೀಡುತ್ತೇನೆ ಎಂದು ಕೈ ಹಾಕಿ ಮೀಸಲಾತಿ ಹೆಚ್ಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊನ್ನಾಳಿಯಲ್ಲಿ ಶುಕ್ರವಾರ ₹ 1933 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

‘ಜನಪ್ರಿಯ ಶಾಸಕರು ಬಹಳ ಮಂದಿ ಇದ್ದಾರೆ. ಜನೋಪಯೋಗಿ ಶಾಸಕರು ನಮಗೆ ಬೇಕಾಗಿದೆ. ಹೊನ್ನಾಳಿಯಲ್ಲಿ ಜನೋಪಯೋಗಿ ಶಾಸಕರು ಇರುವುದರಿಂದ ಇಷ್ಟೊಂದು ಅನುದಾನ ಬಂದಿದೆ. ಹೊನ್ನಾಳಿಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದು. ₹ 1,900 ಕೋಟಿಗಿಂತಲೂ ಅಧಿಕ ಅನುದಾನ ಒಂದು ದಾಖಲೆ. ಇಂಥ ದಾಖಲೆ ರೇಣುಕಾಚಾರ್ಯರಿಂದ ಮಾತ್ರ ಸಾಧ್ಯ. ಅವರು ಈ ಕ್ಷೇತ್ರವನ್ನು ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಾರೆ’ ಎಂದು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಇಲ್ಲಿ ಸೇರಿರುವ ಭಾರಿ ಸಂಖ್ಯೆಯ ಜನರನ್ನು ನೋಡುವಾಗ ರೇಣುಕಾಚಾರ್ಯ ಮುಂದಿನ ಚುನಾವಣೆಯಲ್ಲಿ 25,000ಕ್ಕೂ ಅಧಿಕ ಅಂತರದಿಂದ ಗೆಲ್ಲುತ್ತಾರೆ. ಹೊನ್ನಾಳಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ತಂದಿದ್ದಾರೆ ರಾತ್ರಿ, ಹಗಲು ನೋಡದೇ ನಿಮ್ಮ ಕಷ್ಟ ವಿಚಾರಿಸಿದ್ದಾರೆ. ಅಂಥ ವ್ಯಕ್ತಿ ಸಿಗುವುದು ಬಹಳ ಅಪರೂಪ’ ಎಂದು ಕೊಂಡಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಇಲ್ಲಿವರೆಗೆ ಗ್ಯಾರಂಟಿ ಕಾರ್ಡ್ ಯಾಕೆ ಕೊಡದ ಕಾಂಗ್ರೆಸ್‌ನವರು ಈಗ ಗ್ಯಾರಂಟಿ ಇಲ್ಲದ ಬೋಗಸ್ ಕಾರ್ಡ್ ಕೊಡುತ್ತಿದ್ದಾರೆ. ದೇಶವನ್ನು, ರಾಜ್ಯವನ್ನು ಲೂಟಿ ಮಾಡಿದ ಕಾಂಗ್ರೆಸ್‌ನ ಕಾರ್ಡಿಗೆ ವಾರಂಟಿಯೇ ಇಲ್ಲ. ಆ ಕಾರ್ಡನ್ನು ಯಾರಾದರೂ ನಿಮಗೆ ನೀಡಿದರೆ ಹರಿದು ಬಿಸಾಡಿ. ಇಲ್ಲವೇ ಬೆಂಕಿ ಹಚ್ಚಿ’ ಎಂದು ಹೇಳಿದರು.

ಇಲ್ಲಿನ ಮಾಜಿ ಶಾಸಕರೊಬ್ಬರು ಇದೇ ಕೊನೇ ಚುನಾವಣೆ ಎಂದು ಮೊನ್ನೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದೇ ಕೊನೇ ಚುನಾವಣೆ ಎನ್ನುತ್ತಲೇ 2008ರಿಂದಲೂ ಇದೇ ಕೊನೇ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದಾರೆ. ಈಗ ನಾಲ್ಕನೇ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಎಂದು ಟೀಕಿಸಿದರು.

‘ಬೀದಿ ನಾಟಕ ಕಂಪನಿ ಎಂದು ಅವರ ರಾಜಕೀಯವನ್ನು ಅವರೇ ಹೇಳಿಕೊಂಡಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ನಾಟಕ ಮಾಡುವುದಷ್ಟೇ ಮುಖ್ಯ. ಕೋವಿಡ್‌ ಸಮಯದಲ್ಲಿ ₹ 80 ಲಕ್ಷ ಲೂಟಿ ಮಾಡಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ, ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ ಇಂಚರ, ಉಪಾಧ್ಯಕ್ಷೆ ರಂಜಿತಾ ಚೆನ್ನಪ್ಪ, ಜೆ.ಕೆ. ಸುರೇಶ್‌, ಸುರೇಂದ್ರ ನಾಯ್ಕ್, ಮಾಜಿ ಶಾಸಕ ಗಂಗಪ್ಪ, ಮಹೇಂದ್ರ ಗೌಡ ಮತ್ತಿತರರಿದ್ದರು.

ಪಕ್ಷದ ಧ್ವಜ ಹಾರಿಸಿ ಎಂದ ರೇಣುಕಾಚಾರ್ಯ

ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಅವರ ಭಾವಚಿತ್ರ ಇರುವ ಬಾವುಟಗಳು ಮತ್ತು ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಪಕ್ಷದ ಧ್ವಜಗಳು ಬೇಡ ಎಂದು ನಿರೂಪಕರು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಬಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ವೇದಿಕೆಯಲ್ಲಷ್ಟೇ ಸರ್ಕಾರಿ ಕಾರ್ಯಕ್ರಮ. ಕೆಳಗೆ ಸಭಾಂಗಣದಲ್ಲಿ ಇರುವುದು ಬಿಜೆಪಿ ಕಾರ್ಯಕರ್ತರು. ಇಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಂದಿಲ್ಲ. ಹಾಗಾಗಿ ವೇದಿಕೆಯಲ್ಲಿ ಪಕ್ಷದ ಬಾವುಟ ಬೇಡ. ಕೆಳಗೆ ಇರುವವರು ಹಿಡಿದುಕೊಳ್ಳಿ ಏನಾಗುವುದಿಲ್ಲ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ನೃತ್ಯ ಮಾಡಿದ ರೇಣುಕಾಚಾರ್ಯ

ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಹಿತ ಗಣ್ಯರು ಬರುವವರೆಗೆ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ರಸಮಂಜರಿ ಕಲಾವಿದರ ಜತೆಗೆ ಹೆಜ್ಜೆ ಹಾಕಿದರು. ಇದರಿಂದ ಪ್ರೇರಣೆಗೊಂಡ ಕಾರ್ಯಕರ್ತರು ಕೂಡ ಸಭಾಂಗಣದಲ್ಲಿ ಹುಚ್ಚೆದ್ದು ಕುಣಿದರು. ರೇಣುಕಾಚಾರ್ಯ ಕೆಳಗೆ ಬಂದಾಗ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಅಭಿಮಾನಿಗಳು ಹೆಜ್ಜೆ ಹಾಕಿದರು.

ನೃತ್ಯ ಮಾಡಿದ ರೇಣುಕಾಚಾರ್ಯ

ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಹಿತ ಗಣ್ಯರು ಬರುವವರೆಗೆ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ರಸಮಂಜರಿ ಕಲಾವಿದರ ಜತೆಗೆ ಹೆಜ್ಜೆ ಹಾಕಿದರು. ಇದರಿಂದ ಪ್ರೇರಣೆಗೊಂಡ ಕಾರ್ಯಕರ್ತರು ಕೂಡ ಸಭಾಂಗಣದಲ್ಲಿ ಹುಚ್ಚೆದ್ದು ಕುಣಿದರು. ರೇಣುಕಾಚಾರ್ಯ ಕೆಳಗೆ ಬಂದಾಗ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಅಭಿಮಾನಿಗಳು ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT