ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಸಾಮಗ್ರಿ ದೇಸಿ ಉತ್ಪಾದನೆಗೆ ಒತ್ತು

ಉದ್ಯಮಿಗಳಿಗೆ ಏರ್‌ ಮಾರ್ಷಲ್‌ ಸಂಜಯ್‌ ಶರ್ಮಾ ಸಲಹೆ
Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಸೇನೆಗೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಆದ್ಯತೆ ನೀಡಲಾಗುತ್ತಿದೆ. ಈ ಮುಕ್ತ ಅವಕಾಶವನ್ನು ಉದ್ಯಮಿಗಳು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು‘ ಎಂದು ಏರ್‌ ಮಾರ್ಷಲ್‌ ಸಂಜಯ್‌ ಶರ್ಮಾ ಸಲಹೆ ನೀಡಿದರು.

ಭಾರತೀಯ ವಾಯುಸೇನೆ ಮತ್ತು  ಪ್ರಗತಿ ಸೌಹಾರ್ದ ಅಭಿವೃದ್ಧಿ (ಪಿಎಚ್‌ಡಿ) ಛೇಂಬರ್‌ ಹಾಗೂ ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ ಮಹಾಸಂಘ (ಎಫ್‌ಕೆಸಿಸಿ) ನಗರದಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ವಾಯುಸೇನೆ ಅಗತ್ಯಗಳನ್ನು ಸ್ಥಳೀಯವಾಗಿ ಭರಿಸುವ ಕುರಿತ ವಿಚಾರಸಂಕಿರಣ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ಷಣಾ ಸಾಮಗ್ರಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಅಗತ್ಯ ಅನುದಾನವೂ ಲಭ್ಯ. ಇದನ್ನು ಬಳಸಿಕೊಳ್ಳುವುದರಿಂದ ದೇಶದ ಕೈಗಾರಿಕಾ ರಂಗಕ್ಕೂ ಸಾಕಷ್ಟು ಅನುಕೂಲಗಳಾಗಲಿವೆ. ಉದ್ಯಮಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮೇಲ್ದರ್ಜೆಗೇರಲು ಇದರಿಂದ ಉತ್ತೇಜನ ಸಿಗಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಗೂ ಬೆಂಬಲ ಸಿಕ್ಕಂತಾಗಲಿದೆ’ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿರುವ ಚೆನ್ನೈ–ಬೆಂಗಳೂರು ನಡುವಿನ ರಕ್ಷಣಾ ಕಾರಿಡಾರ್ ಯೋಜನೆ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಯು ಸೇನೆಯು ಹಳೆಯ ವಿಮಾನಗಳು, ಯುದ್ಧೋಪಕರಣಗಳು, ನಿಷ್ಕ್ರಿಯಗೊಂಡ ಶಸ್ತ್ರಾಸ್ತ್ರಗಳನ್ನು ಸಂಪೂರ್ಣ ಬದಲಾಯಿಸಿ, ಹೊಸ ಉಪಕರಣಗಳನ್ನು ಅಳವಡಿಸಿಕೊಳ್ಳುತ್ತಿದೆ. ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದರು.

ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಅಧ್ಯಕ್ಷ ಟಿ.ಸುವರ್ಣ ರಾಜು, ‘ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಪ್ರಗತಿಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಗಮನಾರ್ಹ ಕೊಡುಗೆ ನೀಡುತ್ತಿವೆ. ಎಚ್‌ಎಎಲ್‌ ಇವುಗಳಿಗೆ ಬಿಡಿ ಭಾಗಗಳ ಉತ್ಪಾದನೆಯ ಅವಕಾಶ ಕಲ್ಪಿಸಿದ್ದಲ್ಲದೇ ತಂತ್ರಜ್ಞಾನದ ನೆರವನ್ನೂ ಒದಗಿಸುತ್ತಿದೆ’ ಎಂದರು.

ಅಂಕಿ– ಅಂಶ

47,000

ರಕ್ಷಣಾ ಸಾಮಗ್ರಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ

70

ಹೊಸ ರಕ್ಷಣಾ ಸಾಮಗ್ರಿಗಳನ್ನು ಈ ವರ್ಷದಲ್ಲಿ ಉತ್ಪಾದಿಸುವ ಗುರಿ ಇದೆ

1700

ರಕ್ಷಣಾ ಸಾಮಗ್ರಿಗಳನ್ನು ಮುಂಬರುವ ವರ್ಷಗಳಲ್ಲಿ ಉತ್ಪಾದಿಸಲಾಗುತ್ತದೆ

* ಪರಿಸರಸ್ನೇಹಿ ವಾಯುಯಾನ ನೀತಿ ಅಳವಡಿಸಿಕೊಂಡಿರುವ ಏಕೈಕ ರಾಜ್ಯ ನಮ್ಮದು. ರಕ್ಷಣಾ ಕಾರಿಡಾರ್‌ ನಮ್ಮ ರಾಜ್ಯದಲ್ಲಿ ನಿರ್ಮಾಣವಾಗುವುದು ಹೆಮ್ಮೆಯ ಸಂಗತಿ

–ಕೆ.ರವಿ, ಎಫ್‌ಕೆಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT