ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳು ಜಾತಿಭೇದ ಮುಕ್ತವಾದರೆ ಸಾಮರಸ್ಯ ಸಾಧ್ಯ: ಶಾಂತವೀರ ಸ್ವಾಮೀಜಿ

ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ
Last Updated 3 ಫೆಬ್ರುವರಿ 2023, 4:37 IST
ಅಕ್ಷರ ಗಾತ್ರ

ಹೊನ್ನಾಳಿ: ‘ದೇವರು ಹಾಗೂ ಸಂವಿಧಾನ ಯಾರಿಗೂ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆ ಹೊಂದಿದೆ’ ಎಂದು ರಾಜ್ಯ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಹೇಳಿದರು.

ಗುರುವಾರ ತಾಲ್ಲೂಕಿನ ಮಂಜುನಾಥಸ್ವಾಮಿ ಹಾಗೂ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಮಿಸಿದ ರಾಜಗೋಪುರದ ಕಳಸಾರೋಹಣ ಮತ್ತು ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ದೇವರಿಗೆ ಬಡವ, ಬಲ್ಲಿದ, ಜಾತಿ, ಧರ್ಮ ಎಂಬ ಭೇದಭಾವ ಇಲ್ಲ. ಯಾವುದೇ ಜಾತಿ, ಧರ್ಮದವರು ಭಕ್ತಿ ಪೂರ್ವಕವಾಗಿ ಬೇಡಿಕೊಂಡರೆ ಕೇಳಿದ್ದನ್ನು ಕೊಡುವ ಸ್ವಭಾವ ಅವನದು. ಅದೇ ರೀತಿ ಸಂವಿಧಾನವೂ ಸಹ. ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಜಾರಿಗೆ ತರದೇ ಎಲ್ಲರಿಗೂ ಒಂದೇ ತೆರನಾಗಿ ಇದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ಪಾಲಿಸಬೇಕು, ಇಲ್ಲದಿದ್ದರೆ ಶಿಕ್ಷೆ ತಪ್ಪಿದ್ದಲ್ಲ’ ಎಂದರು.

‘ಗ್ರಾಮಕ್ಕೊಂದು ಶಾಲೆ, ದೇವಸ್ಥಾನ ಹೇಗೆ ಅತ್ಯವಶ್ಯವೋ ಹಾಗೆಯೇ ಪ್ರತಿ ಮನೆಯಲ್ಲೂ ಒಂದು ಶೌಚಾಲಯ ಇರಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ದೇವಸ್ಥಾನಗಳಲ್ಲಿ ಯಾವುದೇ ಜಾತಿ, ಮತ ಹಾಗೂ ಪಂಗಡಕ್ಕೆ ಸೀಮಿತವಾಗದೇ ಎಲ್ಲರಿಗೂ ಮುಕ್ತವಾಗಿ ದರ್ಶನ ಭಾಗ್ಯ ಸಿಗುವಂತಾಗಬೇಕು. ಆಗ ಮಾತ್ರ ಆ ಗ್ರಾಮದಲ್ಲಿ ಸಾಮರಸ್ಯ ಉಂಟಾಗುತ್ತದೆ’ ಎಂದರು.

ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ನಿವೃತ್ತ ಉಪನ್ಯಾಸಕ ಎಸ್.ಆರ್. ಹನುಮಂತಪ್ಪ ಅವರು ರಚಿಸಿದ ‘ಮನಸ್ಸು ಮತ್ತು ಮಹಿಮೆ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.

ವಡ್ನಾಳ್ ವಿಶ್ವಕರ್ಮ ಸಾವಿತ್ರಿ ಪೀಠದ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸ್ವಾಮೀಜಿ, ಬೆಂಗಳೂರಿನ ಸಿದ್ಧಿ ವಿನಾಯಕ ಶರಭೇಶ್ವರ ಪೀಠದ ಮಹರ್ಷಿ ಗಂದೋಡಿ ಜಯಶ್ರೀನಿವಾಸನ್ ಗುರೂಜಿ, ನಿವೃತ್ತ ಶಿಕ್ಷಕ ಎಸ್.ಆರ್. ಮಂಜುನಾಥ್, ನಿವೃತ್ತ ಉಪನ್ಯಾಸಕ ಎಸ್.ಆರ್. ಹನುಮಂತಪ್ಪ ಮಾತನಾಡಿದರು. ಫೆ. 3ರಂದು ರಾಜಗೋಪುರ ಲೋಕಾರ್ಪಣೆ ಇರುವುದರಿಂದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಸಚಿವೆ ಶಶಿಕಲಾ ಜೊಲ್ಲೆ ಅವರು ಬರಲಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ ತಿಳಿಸಿದರು.

ವೇದಿಕೆಯ ಮೇಲೆ ಮಾಜಿ ಚೇರ್ಮನ್ ಎಸ್.ಎಚ್. ನರಸಪ್ಪ, ಪ್ರಧಾನ ಅರ್ಚಕ ರಾಜುಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಮ್ಮ ಹಳದಪ್ಪ, ಸದಸ್ಯರಾದ ಡಿ.ಬಿ. ಶ್ರೀನಾಥ್, ಕರಿಯಮ್ಮ ಅಣ್ಣಪ್ಪ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಚಂದ್ರಮ್ಮ ತಿಮ್ಮಪ್ಪ, ಎಸ್.ಕೆ. ಕರಿಯಪ್ಪ, ಗೌರಮ್ಮ ರಾಮಚಂದ್ರಪ್ಪ, ಎ.ಕೆ. ಅಣ್ಣಪ್ಪ, ಪ್ರಸನ್ನಕುಮಾರ್, ಎಚ್.ಆರ್. ರಾಕೇಶ್, ಎಂಜಿನಿಯರ್ ಕೃಷ್ಣಮೂರ್ತಿ, ಕುಂಕೋವ ಜಿ.ಆರ್. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT