ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿದರೆ ವಿನಂತಿ, ಮಂಗಳಾರತಿ ಇನ್ನಿಲ್ಲ

ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ
Last Updated 7 ಏಪ್ರಿಲ್ 2020, 16:11 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ ಇದ್ದರೂ ರಸ್ತೆಗಿಳಿಯುವವರಿಗೆ ಮಂಗಳಾರತಿ, ಹೂ ಮಾಲೆ ಹಾಕುವುದು, ವಿನಂತಿಸುವುದು, ಗದರಿಸುವುದು, ಆದೇಶಿಸುವುದನ್ನು ಇಲ್ಲಿಯವರೆಗೆ ಮಾಡಿ ಸಾಕಾಯಿತು. ಇನ್ನು ಮುಂದೆ ಅನಗತ್ಯವಾಗಿ ರಸ್ತೆಗೆ ಬಂದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಷಬ್ ಎ ಬರಾತ್ ಹಾಗೂ ಗುಡ್‌ಫ್ರೈಡೇ ಹಬ್ಬದ ಪ್ರಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅಗತ್ಯ ದಿನಸಿ ಸಾಮಗ್ರಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಮನೆಯ ಬೀದಿಗಳಲ್ಲಿಯೇ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ. ಕುಂಟು ನೆಪ ಹೇಳಿ ರಸ್ತೆಗಿಳಿಯವಾರದು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಸ್ವಚ್ಛತೆ ಹಾಗೂ ದೈನಂದಿನ ಪೂಜೆ, ಪ್ರಾರ್ಥನೆ ಮಾಡಲು ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಸಾರ್ವಜನಿಕರು ಮನೆಯಲ್ಲಿದ್ದು, ಪ್ರಾರ್ಥನೆ, ನಮಾಜ್, ಪೂಜೆ ಮಾಡಬೇಕು’ ಎಂದು ತಿಳಿಸಿದರು.

‘ವಿನಾಕಾರಣ ರಸ್ತೆಗಿಳಿಯುವ ಬೈಕ್ ಸವಾರರಿಗೆ ಸಮುದಾಯಗಳ ಮುಖಂಡರು ಜಾಗೃತಿ ಮೂಡಿಸಿ ಮನೆಯಲ್ಲಿರಲು ಸೂಚಿಸಬೇಕು. ಎಲ್ಲ ಕಾರ್ಯಗಳನ್ನು ಜಿಲ್ಲಾಡಳಿತದ ಮೇಲೆ ಹಾಕಬೇಡಿ. ಇದರಲ್ಲಿ ನಿಮ್ಮ ಹೊಣೆಗಾರಿಕೆ ಸಹ ಮುಖ್ಯವಾಗಿ ಇದೆ ಎಂದು ಅರಿತು ನಡೆಯಬೇಕು’ ಎಂದರು.

ದಾವಣಗೆರೆ ಸೇರಿದಂತೆ ಅಕ್ಕ ಪಕ್ಕದ 4 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಸದ್ಯಕ್ಕೆ ನೆಗೆಟಿವ್ ಎಂದು ವರದಿಯಾಗಿವೆ. ದೇಶದಲ್ಲಿ ಹಾಕಲಾಗಿರುವ ಲಾಕ್‌ಡೌನ್ ಅವಧಿ ಇನ್ನೂ ಮುಂದುವರಿಯಬಹುದು. ಆದ ಕಾರಣ ಸಾರ್ವಜನಿಕರು ರೋಗ ನಿಯಂತ್ರಣಕ್ಕೆ ಮನೆಯಲ್ಲಿರುವುದೇ ಮದ್ದು ಎಂದರು.

ಮುಸ್ಲಿಂ ಸಮುದಾಯದ ಮುಖಂಡ ಅಮಾನುಲ್ಲಾ ಖಾನ್, ‘ಹಿರಿಯರ ಆತ್ಮಕ್ಕೆ ಶಾಂತಿ ಕೋರುವ ಷಬ್ ಎ ಬರಾತ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಸಾಂಕೇತಿಕವಾಗಿ ಮನೆಯಲ್ಲಿಯೇ ಆಚರಿಸೋಣ. ಕಬರ್‌ಸ್ತಾನಕ್ಕೆ ಹೋಗುವುದು ಬೇಡ. ಮಸೀದಿಯಲ್ಲಿ ಆಜಾನ್‌ ಮಾತ್ರ ಇರಲಿದೆ. ಧಾರ್ಮಿಕ ಸಭೆಯಲ್ಲಿ ಕೂಡ ಈ ಬ್ಗೆಗ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

ಸಿ.ಎಸ್.ಐ ಚಿಯೋನ್ ದೇವಾಲಯದ ಧರ್ಮಗುರು ಡ್ಯಾನಿಯಲ್ ಎಸ್. ಹೊನ್ನಾಯಕರ್ ‘ದಕ್ಷಿಣ ಭಾರತದ ಧರ್ಮ ಸಭೆಯಲ್ಲಿ ತೀರ್ಮಾನಿಸಿದಂತೆ, ನಾವೇಲ್ಲರೂ ಗುಡ್‌ಫ್ರೈಡೇ ಹಬ್ಬವನ್ನು ಮನೆಯಲ್ಲಿಯೇ ಇದ್ದು ಆಚರಿಸುತ್ತೇವೆ. ಪ್ರತಿ ಭಾನುವಾರದ ಪ್ರಾರ್ಥನೆಯನ್ನು ಸಹ ಕೊರೋನಾ ರೋಗ ನಿಯಂತ್ರಣವಾಗುವವರೆಗೆ ಮನೆಯಲ್ಲಿಯೇ ಮಾಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಹಿಂದೂ ಸಮಾಜದ ಮುಖಂಡ ಕೆ.ಬಿ.ಶಂಕರ್‌ನಾರಾಯಣ ಮುಂತಾದವರು ಮಾತನಾಡಿದರು. ಜಿಲ್ಲಾ ವಕ್ಫ್‌ ಸಮಿತಿ ಅಧ್ಯಕ್ಷ ಮಹಮ್ಮದ್ ನಿಯಾಜ್, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT