ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಗಾರ ಕೆಟ್ಟವನಾದರೆ ಸಂವಿಧಾನವೂ ಕೆಟ್ಟದು: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

Last Updated 26 ಜನವರಿ 2020, 14:17 IST
ಅಕ್ಷರ ಗಾತ್ರ

ದಾವಣಗೆರೆ: ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದಾಗುವುದು ಅದರೊಳಗಿನ ಬರಹದಿಂದಲ್ಲ. ಒಳ್ಳೆಯದು ಅಥವಾ ಕೆಟ್ಟದಾಗುವುದು ಅದನ್ನು ಜಾರಿಗೆ ತರುವವರಿಂದ. ಜಾರಿಗೆ ತರುವವರು ಒಳ್ಳೆಯವರಾದರೆ ಸಂವಿಧಾನವೂ ಒಳ್ಳೆಯದಾಗುತ್ತದೆ. ಕೆಟ್ಟವರಾದರೆ ಕೆಟ್ಟದಾಗುತ್ತದೆ ಎಂಬ ಅಂಬೇಡ್ಕರ್‌ ಮಾತು ನಿಜ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯ. ಈ ಆಶಯಕ್ಕೆ ತಕ್ಕಂತೆ ದೇಶ ಪ್ರಗತಿ ಸಾಧಿಸುತ್ತಿದೆಯೇ ಎಂಬ ಬಗ್ಗೆ ಈ ಸಂದರ್ಭದಲ್ಲಿ ಅವಲೋಕಿಸಬೇಕಾದ ಅಗತ್ಯವಿದೆ ಹಾಗೂ ಈ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ನಾವು ಪಣ ತೊಡಬೇಕು ಎಂದು ಹೇಳಿದರು.

ಸಂವಿಧಾನ ಕೇವಲ ಜನರಿಗೆ ತಮ್ಮ ಹಕ್ಕುಗಳನ್ನು ನೀಡುವುದಿಲ್ಲ. ಜತೆಗೆ ಜನರ ಜವಾಬ್ದಾರಿಯನ್ನೂ ತಿಳಿಸುತ್ತದೆ. ಸಂವಿಧಾನ ಮತ್ತು ಅದರಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ ಕಾರ್ಯಗಳು, ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಭವ್ಯ ಭಾರತದ ಕನಸು ನನಸಾಗಿಸಬೇಕು ಎಂದು ತಿಳಿಸಿದರು.

‘ಸಮಾನತೆಯ ರಥವನ್ನು ಇಲ್ಲಿಯವರೆಗೆ ಎಳೆದುಕೊಂಡು ಬಂದಿದ್ದೇನೆ. ಸಾಧ್ಯವಾದರೆ ಈ ರಥವನ್ನು ಒಂದಿಂಚಾದರೂ ಮುಂದಕ್ಕೆ ತಳ್ಳಿ, ಆದರೆ ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳಬೇಡಿ’ ಎಂಬ ಅಂಬೇಡ್ಕರ್‌ ಮಾತುಗಳನ್ನು ನಾವು ಎಚ್ಚರದಿಂದ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಭಾರತದ ಸಂವಿಧಾನ ಏಳು ದಶಕಗಳ ಕಾಲ ಉಳಿದಿದೆ ಎಂಬುದು ಒಂದು ಸಾಧನೆ. ಯಾಕೆಂದರೆ ಪ್ರಪಂಚದಲ್ಲಿ ಸಂವಿಧಾನಗಳು ಇಷ್ಟು ದೀರ್ಘ ಕಾಲ ಬಾಳುವುದಿಲ್ಲ. ಅಮೆರಿಕದ ಷಿಕಾಗೋ ವಿಶ್ವವಿದ್ಯಾಲಯ ಇತ್ತೀಚೆಗೆ ಹಾಕಿದ ಲೆಕ್ಕಾಚಾರದ ಪ್ರಕಾರ ಸಂವಿಧಾನಗಳ ಸರಾಸರಿ ಆಯುಷ್ಯ 17 ವರ್ಷ ಮಾತ್ರ. ಅಷ್ಟೇ ಅಲ್ಲ, ಪ್ರತೀ ನೂರರಲ್ಲಿ ಏಳು ಸಂವಿಧಾನಗಳು ಎರಡು ವರ್ಷ ತುಂಬುವುದರೊಳಗೆ ಕಾಲದಲ್ಲಿ ಕಳೆದುಹೋಗಿವೆ ಎಂದರು.

ದಾವಣಗೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹರಿಹರ ನಗರದ ಶ್ರೀಷ್ಮಾ ಹೆಗ್ಡೆ ಎಂ.ಪಿ ದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಖಿಲ ಭಾರತ ಹಿರಿಯ ವಿಭಾಗದ(ಬಾಲಕಿಯರು) ಎನ್‌ಸಿಸಿ ಪೆರೇಡ್‌ನ ಮುಂದಾಳತ್ವ ವಹಿಸಿರುವುದು ಜಿಲ್ಲೆಯ ಹೆಮ್ಮೆ. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಬಿ.ಎಚ್. ವೀರಪ್ಪ ರಾಷ್ಟ್ರಪತಿಗಳ ವಿಶಿಷ್ಟ ಪದಕಕ್ಕೆ ಭಾಜನಾಗಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಪಂ ಅಧ್ಯಕ್ಷರಾದ ಯಶೋಧಮ್ಮ ಮರುಳಪ್ಪ, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಎಂ ಸಿದ್ದೇಶ್ವರ, ಮುಖ್ಯ ಸಮಾದೇಷ್ಟರಾದ ಆರ್‌ಪಿ ಡಿಎಆರ್ ಎಸ್.ಎನ್.ಕಿರಣ್‌ಕುಮಾರ್ ಕನ್ನಡದಲ್ಲಿ ಆದೇಶವನ್ನು ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಪಂಚಾಯಿತ್ ಅಧ್ಯಕ್ಷೆ ಯಶೋದಮ್ಮ ಮರಳಪ್ಪ, ಶಾಸಕ ಎಸ್.ಎ. ರವೀಂದ್ರನಾಥ, ವಿಧಾನ ಪರಿಷತ್ ಸದಸ್ಯರ ಅಬ್ದುಲ್ ಜಬ್ಬಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ದೂಡ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT