ಹರಿಹರ: ದಶಕಗಳ ಹೋರಾಟ ಕಡೆಗಣನೆ: ಪ್ರಸನ್ನಾನಂದ ಸ್ವಾಮೀಜಿ ಬೇಸರ

ಹರಿಹರ: ಯಾವುದೇ ಬೇಡಿಕೆ ಇಲ್ಲದಿದ್ದರೂ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿ ಘೋಷಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜದ ದಶಕಗಳ ಹೋರಾಟವನ್ನು ಕಡೆಗಣಿಸಿದೆ. ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಮೀಸಲಾತಿ ಘೋಷಣೆಗೆ ಸರ್ಕಾರಕ್ಕೆ 2 ತಿಂಗಳು ಗಡುವು ನೀಡಲಾಗಿತ್ತು. ಗಡುವಿನ ಅವಧಿ ಮೀರಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮೀಸಲಾತಿ ಹೆಚ್ಚಳ ಕುರಿತ ಭಾನುವಾರ ನಡೆದ ವಾಲ್ಮಿಕಿ ಸಮುದಾಯದ ಸಚಿವರು, ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಚಿವ ಶ್ರೀರಾಮುಲು, ‘ಮುಂಬರುವ ಅಧಿವೇಶನಕ್ಕೂ ಮುನ್ನ ಶ್ರೀಗಳ ಆಣತಿಯಂತೆ ಶಾಸಕರ ಭವನದಲ್ಲಿ ಸೆ. 21ರಂದು ಸಮಾಜದ ಶಾಸಕರು ಹಾಗೂ ಸಂಸದರ ಸಭೆ ಆಯೋಜಿಸಲಾಗಿದೆ. ಎಲ್ಲರೂ ಸೇರಿ ಚರ್ಚಿಸಿ ಮುಖ್ಯಮಂತ್ರಿ ಬಳಿ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಮಂಡಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಬೇಡಿಕೆಯನ್ನು ಖಂಡಿತವಾಗಿ ನೆರವೇರಿಸುವ ವಿಶ್ವಾಸವಿದೆ’ ಎಂದರು.
ಮೀಸಲಾತಿ ಹೆಚ್ಚಳ ನಿರ್ಧಾರಕ್ಕಾಗಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕೊರೊನಾ ಕಾರಣ ವರದಿ ಪರಿಶೀಲನೆ ತಡವಾಗಿದೆ. ಮುಂಬರುವ ಅಧಿವೇಶನದಲ್ಲಿ ವರದಿ ಅನುಷ್ಠಾನಕ್ಕೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
‘ಪರಿವಾರ ಹಾಗೂ ತಳವಾರ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಮೂಲಕ ಕೇಂದ್ರ ಸರ್ಕಾರ ಸಮಾಜದ 4 ದಶಕಗಳ ಹೋರಾಟಕ್ಕೆ ಸ್ಪಂದಿಸಿದೆ. ಶ್ರೀಗಳು ಹಾಗೂ ಸಮಾಜದ ಶಾಸಕರು ನೀಡಿರುವ ಮೀಸಲಾತಿ ಹೋರಾಟದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ’ ಎಂದು ತಿಳಿಸಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ, ‘ಶ್ರೀರಾಮುಲು ಸರ್ಕಾರದಲ್ಲಿದ್ದಾರೆ. ಸಮಾಜದ ಶಾಸಕರು ಪಕ್ಷಾತೀತವಾಗಿ ಶ್ರೀರಾಮುಲು ನೇತೃತ್ವದಲ್ಲಿ ಒಗ್ಗಟ್ಟಾಗಿ ಹೋರಾಡೋಣ’ ಎಂದು ತಿಳಿಸಿದರು.
‘ಹಲವು ವರ್ಷಗಳಿಂದ ಮೀಸಲು ಹೆಚ್ಚಳಕ್ಕೆ ಹೋರಾಟ ನಡೆಸಿದ್ದೇವೆ. ಆದರೆ, ಸರ್ಕಾರ ಮೇಲ್ವರ್ಗದವರಿಗೆ
ಶೇ 10ರಷ್ಟು ಮೀಸಲು ಎಲ್ಲಿಂದ ನೀಡಿದೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಸುರಪುರದ ಶಾಸಕ ರಾಜೂಗೌಡ, ‘ಶ್ರೀರಾಮನ ಹೆಸರಿನ ಬಲದಿಂದ ಅಧಿಕಾರಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಶ್ರೀರಾಮನ ರಾಮಾಯಣದ ಕರ್ತೃ ವಾಲ್ಮೀಕಿ. ಹಾಗಾಗಿ ನಮ್ಮ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕು ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು’ ಎಂದು ಆಗ್ರಹಿಸಿದರು.
ಶಾಸಕರಾದ ಎಸ್.ವಿ. ರಾಮಚಂದ್ರ, ಗಣೇಶ್, ಇ. ತುಕಾರಾಂ, ರಘುಮೂರ್ತಿ, ಅನಿಲ್ ಚಿಕ್ಕಮಾದು, ಪ್ರತಾಪ್‌ಗೌಡ, ಸಂಸದ ದೇವೇಂದ್ರಪ್ಪ, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ಸಮಾಜದವರು ಭಾಗವಹಿಸಿದ್ದರು.
‘ಡ್ರಗ್ ಜಾಲ ನಿರ್ಮೂಲನೆಗೆ ಸರ್ಕಾರ ಬದ್ಧ’:
ರಾಜ್ಯವನ್ನು ಕಂಗೆಡಿಸಿರುವ ಡ್ರಗ್ಸ್ ಸುಳಿಯಲ್ಲಿ ಕೇವಲ ಚಿತ್ರರಂಗ ಮಾತ್ರವಲ್ಲ, ಯುವ ಪೀಳಿಗೆಯೂ ಸಿಲುಕಿದೆ. ಡ್ರಗ್ಸ್ ಜಾಲ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
‘ರಾಜ್ಯದಲ್ಲಿ ಹರಡಿರುವ ಡ್ರಗ್ಸ್ ಮಾಫಿಯಾವನ್ನುಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ. ಕೆಲ ಪ್ರಭಾವಿಗಳು ಹಾಗೂ ಪಟ್ಟಭದ್ರರು ಈ ಜಾಲದಲ್ಲಿ ತೊಡಗಿರುವ ಮಾಹಿತಿ ಇದೆ. ಯಾವುದೇ ಒತ್ತಡಗಳಿಗೂ ಸರ್ಕಾರ ಮಣಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.