ಪಾಲಿಕೆ ಸಿಬ್ಬಂದಿಯಿಂದ ಅಕ್ರಮ: ಜನಸ್ಪಂದನದಲ್ಲಿ ದೂರು

7

ಪಾಲಿಕೆ ಸಿಬ್ಬಂದಿಯಿಂದ ಅಕ್ರಮ: ಜನಸ್ಪಂದನದಲ್ಲಿ ದೂರು

Published:
Updated:
Prajavani

ದಾವಣಗೆರೆ: ಪಾಲಿಕೆಯ ಸಿಬ್ಬಂದಿ ಅಕ್ರಮ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರಿಗೆ ದೂರು ಸಲ್ಲಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ದೂರು ಸಲ್ಲಿಸಲಾಗಿದೆ. ಪಾಲಿಕೆ ದ್ವಿತೀಯ ದರ್ಜೆ ಸಹಾಯಕಿಯೊಬ್ಬರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದಾರೆ. ಕೆಪಿಎಂಉ ನಿಯಮಾವಳಿಗಳನ್ನು ಮೀರಿ ಆಸ್ಪತ್ರೆಗೆ ಅವಕಾಶ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ದೂರಲ್ಲಿ ತಿಳಿಸಿದ್ದಾರೆ.

ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮೆಕ್ಕೆಜೋಳದ ಬೆಳೆ ವಿಮೆ ಕಂತು ಪಾವತಿಸಿದ್ದರೂ ವಿಮೆ ಹಣ ಇನ್ನೂ ಕೂಡ ಬಂದಿಲ್ಲ ಎಂದು ನ್ಯಾಮತಿಯ ಅರಬಗಟ್ಟೆ ಗ್ರಾ.ಪಂ ವ್ಯಾಪ್ತಿಯ ಮಾದನಬಾವಿ ಗ್ರಾಮದ ಹನುಮಂತಪ್ಪ ಮತ್ತು ಇತರೆ ರೈತರು ಅರ್ಜಿ ಸಲ್ಲಿಸಿದರು.

ಹರಿಹರ-ಕೊಟ್ಟೂರು ರೈಲ್ವೆ ಗಾಡಿಯನ್ನು ಹೊಸಪೇಟೆಯವರೆಗೆ ವಿಸ್ತರಿಸುವಂತೆ ಹರಿಹರ ತಾಲ್ಲೂಕಿನ ಅಮರಾವತಿ ಕಾಲೊನಿಯ ಜಿ.ಗುರುರಾಜ್ ಮನವಿ ಮಾಡಿದರು.

6 ಜನರ ಜಮೀನನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿದ್ದೆವು ಆದರೆ ಇದೂವರೆಗೆ ಯಾರೂ ಬಂದಿರುವುದಿಲ್ಲ ಎಂದು ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದ ಎಚ್.ಮಲ್ಲಪ್ಪ ಮನವಿ ಸಲ್ಲಿಸಿದರು.

1978ರಲ್ಲಿ ಹಕ್ಕುಪತ್ರದ ಮೂಲಕ ಸರ್ಕಾರದಿಂದ ಸರ್ವೆ ನಂ.24/1ಬಿ ರಲ್ಲಿ ನಿವೇಶನ ನೀಡಲಾಗಿದೆ. ಭೂ ದಾಖಲೆಗಳ ಇಲಾಖೆಯ ಭೂಮಾಪಕರು ಅಳತೆ ಮಾಡಿ ಪರಿಶೀಲಿಸಿದ್ದಾರೆ. ಮೂಲ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲು ಕೋರಿ ಸಲ್ಲಿಸಿದ ಅರ್ಜಿ ಹಾಗೂ ಈ ಸೊತ್ತಿನ ಇ-ದಾಖಲೆ ಕೊಡಿಸಬೇಕು ಎಂದು ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಮಹಾಲಿಂಗಯ್ಯ ಮನವಿ ಮಾಡಿದರು.

ಒಂದು ವರ್ಷದ ಮಗುವಿಗೆ ಮೂತ್ರಕೋಶ ತೊಂದರೆ ಇರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ಒದಗಿಸಬೇಕು ಎಂದು ಜಾಲಿನಗರದ ನಸರೀನಬಾನು ಅರ್ಜಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !