ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರಿಗೂ ಮೀಸಲಾತಿ ಜಾರಿಗೊಳಿಸಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ
Last Updated 2 ಅಕ್ಟೋಬರ್ 2022, 4:42 IST
ಅಕ್ಷರ ಗಾತ್ರ

ದಾವಣಗೆರೆ: ‘ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇರುವ ಶೇ 10 ಮೀಸಲಾತಿಯನ್ನು ಬ್ರಾಹ್ಮಣರಿಗೂ ಅನ್ವಯವಾಗುವಂತೆ ರಾಜ್ಯದಲ್ಲೂ ಜಾರಿಗೊಳಿಸಬೇಕು’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಒತ್ತಾಯಿಸಿದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಶನಿವಾರ ನಡೆದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿಪ್ರ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ‘ವಿಪ್ರಶ್ರೀ’, ಸಮಾಜದ ಸಾಧಕರಿಗೆ ಸನ್ಮಾನ ಹಾಗೂ ಮಂಡಳಿಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

‘ದೇಶದ ವಿವಿಧ ರಾಜ್ಯಗಳಲ್ಲಿ ಶೇ 10 ಮೀಸಲಾತಿ ಇದ್ದು, ಕರ್ನಾಟಕದಲ್ಲಿ ಬ್ರಾಹ್ಮಣರು ಸೇರಿದಂತೆ 4 ಜಾತಿಗಳಿಗೆ ಆ ಸೌಲಭ್ಯ ಸಿಕ್ಕಿಲ್ಲ. ಇದನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ’ ಎಂದು
ಹೇಳಿದರು.

‘ಮುಂದಿನ ಫೆಬ್ರುವರಿ ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 1.50 ಲಕ್ಷ ಜನರನ್ನು ಸೇರಿಸಿ ಬ್ರಾಹ್ಮಣರ ವಿರಾಟ್ ಶಕ್ತಿ ಪ್ರದರ್ಶನ ನಡೆಸಲು ಉದ್ದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ 42.50 ಲಕ್ಷ ಬ್ರಾಹ್ಮಣರು ಇದ್ದು, 44 ಉಪ ಜಾತಿಗಳಿವೆ. ಅವರೆಲ್ಲ ಒಗ್ಗಟ್ಟಾದರೆ ಸಮಾಜದ ಶಕ್ತಿ ಹೆಚ್ಚಾಗುತ್ತದೆ. ರಾಜ್ಯದ 21 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರೇ ನಿರ್ಣಾಯಕರಿದ್ದೇವೆ. ನಮ್ಮ ಬಲವನ್ನು ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘ಬ್ರಾಹ್ಮಣ ಸಮಾಜದಲ್ಲಿ ಬುದ್ಧಿವಂತರು, ಸಂಸ್ಕಾರವಂತರು ಇದ್ದಾರೆ. ಮಂಡಳಿಯ ಯೋಜನೆಗಳ ಪ್ರಯೋಜನವನ್ನು ಸಮಾಜದವರು ಪಡೆದುಕೊಳ್ಳಬೇಕು. ಕೆಳ ಸ್ತರದ ಸಮಾಜಗಳ ಬಗ್ಗೆಯೂ ಕಾಳಜಿ ವಹಿಸುವುದರ ಜೊತೆಗೆ ಅವರಿಗೆ ಮಾರ್ಗದರ್ಶನ ನೀಡಬೇಕು’ ಎಂದು ಮಾಯಕೊಂಡ ಶಾಸಕ ಪ್ರೊ.ಎನ್. ಲಿಂಗಣ್ಣ ‌ಹೇಳಿದರು.

‘ಬ್ರಾಹ್ಮಣ ಸಮಾಜ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ಸಾಮರಸ್ಯ ಬಯಸುತ್ತಿದೆ. ಸರ್ಕಾರ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗಾಗಿ ನಿಮ್ಮ ಜತೆಗೆ ಇರುತ್ತೇನೆ’ ಶಾಸಕ ಎಂ.ಪಿ.ರೇಣುಕಾಚಾರ್ಯ ಭರವಸೆ
ನೀಡಿದರು.

ಮಂಡಳಿಯ ನಿರ್ದೇಶಕ ಪಿ.ಸಿ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಬಿ.ಪಿ. ಹರೀಶ್, ಮೇಯರ್ ಆರ್. ಜಯಮ್ಮ ಗೋಪಿನಾಯ್ಕ,
ಮಂಡಳಿಯ ನಿರ್ದೇಶಕಿ ವತ್ಸಲ ನಾಗೇಶ್, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಬಿ.ಟಿ. ಅಚ್ಚುತ್, ಸಮಾಜದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ದಾವಣಗೆರೆ ನಗರ ಅಧ್ಯಕ್ಷ ಡಾ. ಶಶಿಕಾಂತ್, ಶ್ರೀ ಸದ್ಗುರು ಬ್ರಹ್ಮಚೈತನ್ಯ ಭಕ್ತ ಮಂಡಳಿ ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ
ಇದ್ದರು.

ದೇಶಸ್ಥ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಡಾ. ಸುರೇಶ ಬಾಬು, ಅಡುಗೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಗುರುರಾಜ್, ಭಾಗವಹಿಸಿದ್ದರು.
ಕೆ.ವಿ. ಆನಂದರಾವ್, ಡಾ.ಎಸ್‌.ಆರ್.ಹೆಗಡೆ, ವ್ಯಂಗ್ಯಚಿತ್ರಕಾರ ಎಚ್.ಪಿ. ಮಂಜುನಾಥ್, ಡಾ.ಶಾಂತಾಭಟ್ ಸೇರಿದಂತೆ 13 ಮಂದಿಗೆ ‘ವಿಪ್ರಶ್ರೀ’ ಪ್ರಶಸ್ತಿ, ಪತ್ರಕರ್ತ ರಮೇಶ್ ಜಾಗೀರ್‌ದಾರ್ ಸೇರಿದಂತೆ 33 ಮಂದಿಗೆ ಸಾಧಕರು, ಪಿಯುಸಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ 11, ಎಸ್ಸೆಸ್ಸೆಲ್ಸಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ 12 ಜನ ಟಾಪರ್‌ಗಳನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT