ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಪ್ರೇಮದ ಹೆಸರಲ್ಲಿ ದೇಶ ಮಾರುವವರು ಅಧಿಕಾರದಲ್ಲಿ

ಎಐಟಿಯುಸಿ ಶತಮಾನೋತ್ಸವ ಸಂಭ್ರಮಾಚರಣೆ ಉದ್ಘಾಟಿಸಿದ ಡಿ.ಎ. ವಿಜಯ ಭಾಸ್ಕರ್‌
Last Updated 23 ನವೆಂಬರ್ 2020, 3:56 IST
ಅಕ್ಷರ ಗಾತ್ರ

ದಾವಣಗೆರೆ: ‘ಸ್ವಾತಂತ್ರ್ಯಪೂರ್ವದಲ್ಲಿ ಕಾರ್ಮಿಕರೂ ಸೇರಿದಂತೆ ಎಲ್ಲರೂ ಹೋರಾಟದಲ್ಲಿ ಭಾಗಿಯಾಗಿದ್ದರೆ, ಕೇಸರಿ ಬಾವುಟ ಹಿಡಿದವರು ಬ್ರಿಟಿಷರ ಜತೆಗೆ ಇದ್ದರು. ಇಂದು ಅವರೇ ದೇಶಪ್ರೇಮದ ಹೆಸರಲ್ಲಿ ಅಧಿಕಾರ ಹಿಡಿದು ದೇಶ ಮಾರುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ‌ವಿಜಯಭಾಸ್ಕರ್‌ ಟೀಕಿಸಿದರು.

ನಗರದ ಸಿಪಿಐ ಕಾಂಪ್ಲೆಕ್ಸ್‌ ಮಹಡಿ ಮೇಲೆ ಭಾನುವಾರ ನಡೆದ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ಶತಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1920ರಲ್ಲಿ ಎಐಟಿಯುಸಿ ಆರಂಭಗೊಂಡಿತು. ಅದಕ್ಕಿಂತ ಎರಡು ವರ್ಷ ಮೊದಲು ಸ್ಪ್ಯಾನಿಶ್‌ ಇನ್‌ಫ್ಲುವೆಂಝ ಎಂಬ ಕಾಯಿಲೆ ಬಂದು ಜನರ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಾಣ ಕಳೆದುಕೊಂಡಿದ್ದರು. ಕೆಲಸ ಇಲ್ಲದಂತಾಗಿತ್ತು. ಈಗ 100 ವರ್ಷ ತುಂಬಿದ ಸಮಯದಲ್ಲಿ ಕೊರೊನಾ ಸೋಂಕಿನಿಂದಾಗಿ ಅಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ಕಾರ್ಮಿಕರು ಇಷ್ಟೇ ಅವಧಿ ಕೆಲಸ ಮಾಡಬೇಕು ಎಂಬುದಿರಲಿಲ್ಲ. ಪುರುಷರು 14ರಿಂದ 16 ಗಂಟೆ, ಮಹಿಳೆಯರು 11 ಗಂಟೆ, ಮಕ್ಕಳು ಏಳೂವರೆ ಗಂಟೆ ದುಡಿಯಬೇಕಿತ್ತು. ಅದರ ವಿರುದ್ಧ ಎಐಟಿಯುಸಿ ಚಳವಳಿ ಮಾಡಿದ ಬಳಿಕ 8 ಗಂಟೆ ದುಡಿಮೆ ಜಾರಿಯಾಯಿತು. ನಿಗದಿತ ವೇತನ, ಪಿಂಚಣಿ, ಬೋನಸ್‌ ಸಹಿತ ಎಲ್ಲವೂ ಎಐಟಿಯುಸಿ ಹೋರಾಟದಿಂದ ಪಡೆದಿರುವುದು ಆಗಿದೆ. ಈಗ ನಾವು ಪಡೆದಿರುವ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕೆಂದರೆ ಕಾರ್ಮಿಕರ, ಕೃಷಿಕರ, ದಲಿತರ, ಮಹಿಳೆಯರ ಹಕ್ಕು ಕಿತ್ತುಕೊಳ್ಳುವ, ಬಂಡವಾಳಶಾಹಿಗಳ ಪರ ಇರುವ ಸರ್ಕಾರ ದೇಶವನ್ನು ಆಳುತ್ತಿದೆ ಎಂದು ಹೇಳಿದರು.

ಕಾರ್ಮಿಕರು ಎಲ್ಲ ಒಟ್ಟಿಗಿದ್ದರೆ ತೊಂದರೆ ಎಂದು ಸ್ವಾತಂತ್ರ್ಯ ಬಂದ ಕೂಡಲೇ 1947ರಲ್ಲಿ ಎಐಟಿಯುಸಿ ಬಿಟ್ಟು ಕಾಂಗ್ರೆಸ್‌ ಇಂಟಕ್‌ ಎಂಬ ಕಾರ್ಮಿಕ ಸಂಘಟನೆಯನ್ನು ಸ್ಥಾಪಿಸಿತು. ಕೋಮು ರಾಜಕಾರಣ ಮಾಡುವುದಕ್ಕಾಗಿ ಸಂಘ ಪರಿವಾರವು 1954ರಲ್ಲಿ ಬಿಎಂಎಸ್‌ ಸ್ಥಾಪಿಸಿತು. ಲೋಹಿಯಾವಾದಿಗಳು 1955ರಲ್ಲಿ ಎಚ್‌ಎಂಎಸ್‌ ಆರಂಭಿಸಿದರು. ಕಮ್ಯುನಿಸ್ಟ್‌ ಪಕ್ಷ ಒಡೆದ ಬಳಿಕ ಸಿಐಟಿಯು ಆರಂಭಗೊಂಡಿತು. ಹೀಗೆ ಕಾರ್ಮಿಕ ಸಂಘಟನೆಗಳು ಒಡೆದು ಹೋದ ಪರಿಣಾಮವೇ ಇವತ್ತು. ರೈತರ, ಕಾರ್ಮಿಕರ ಶತ್ರುಗಳು ದೇಶವನ್ನು ಆಳುತ್ತಿದ್ದಾರೆ ಎಂದು
ವಿವರಿಸಿದರು.

ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಿ ಸ್ವಿಸ್‌ ಬ್ಯಾಂಕ್‌ನಲ್ಲಿ ದುಡ್ಡು ಇಟ್ಟರು. ಅದಷ್ಟೇ ಭ್ರಷ್ಟಾಚಾರವೇ? ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಿ ಚುನಾವಣೆ ಸಂದರ್ಭದಲ್ಲಿ ಕಮಿಷನ್‌ ಪಡೆಯುವುದು ಭ್ರಷ್ಟಾಚಾರ ಅಲ್ಲವೇ? ಬಿಜೆಪಿ ಪ್ರತಿ ಕ್ಷೇತ್ರದಲ್ಲಿ ನೂರಾರು ಕೋಟಿ ಸುರಿದು ಚುನಾವಣೆ ಗೆಲ್ಲುತ್ತಿರುವುದು ಅದೇ ಹಣದಿಂದ ಎಂದು ಆರೋಪಿಸಿದರು.

ಎಐಬಿಇಎ ಉಪಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, ‘ದೇಶದ ಆರ್ಥಿಕತೆಯ ಜೀವನಾಡಿಗಳಾಗಿ ಬ್ಯಾಂಕ್‌ಗಳು ಕೆಲಸ ಮಾಡುತ್ತಿವೆ. ಯಾವ ಬ್ಯಾಂಕ್‌ ಕೂಡ ನಷ್ಟದಲ್ಲಿ ಇಲ್ಲ. ವಾರ್ಷಿಕ ಆಯವ್ಯಯವನ್ನು ಅಧ್ಯಯನ ಮಾಡಿದರೆ ಇದು ತಿಳಿಯುತ್ತದೆ. ಆದರೂ ಬ್ಯಾಂಕ್‌ಗಳಿಗೆ ಯಾಕೆ ನಷ್ಟವಾಗುತ್ತಿದೆ ಅಂದರೆ, ಬಂಡವಾಳಶಾಹಿಗಳ, ರಾಜಕೀಯ ಪುಡಾರಿಗಳ ಸಾಲಮನ್ನಾಕ್ಕೆ ಬ್ಯಾಂಕ್‌ಗಳ ಲಾಭ ಹೋಗುತ್ತಿದೆ’ ಎಂದು ವಿಷಾದಿಸಿದರು.

ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಆನಂದರಾಜ್‌ ಧ್ವಜಾರೋಹಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಟಿ.ಎಸ್‌. ನಾಗರಾಜ್‌, ಎಂ.ಬಿ. ಶಾರದಮ್ಮ, ಮಹಮ್ಮದ್‌ ಬಾಷಾ, ಎಚ್‌.ಕೆ. ಕೊಟ್ರಪ್ಪ, ಮಹಮ್ಮದ್‌ ರಫೀಕ್‌, ಆವರಗೆರೆ ವಾಸು, ಐರಣಿ ಚಂದ್ರು, ಪ್ರಸನ್ನಕುಮಾರ್‌, ರುದ್ರಮ್ಮ, ಲಕ್ಷ್ಮಣ, ಸಂತೋಷ್‌, ಬಾಡದ ವೀರಣ್ಣ ಅವರೂ ಇದ್ದರು. ‘ನೂರರ ಸಂಭ್ರಮ’, ’ಕೆಂಬಾವುಟ’ ಕೃತಿಗಳು ಬಿಡುಗಡೆಗೊಂಡವು.

ಎರಡನೇ ರಾಷ್ಟ್ರೀಯ ವಿಮೋಚನಾ ಚಳವಳಿ

ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ವಿಮೋಚನಾ ಚಳವಳಿ ನಡೆದಿತ್ತು. ಈಗ ಹಕ್ಕುಗಳ ಉಳಿಸುವುದಕ್ಕಾಗಿ ಎರಡನೇ ರಾಷ್ಟ್ರೀಯ ವಿಮೋಚನಾ ಚಳವಳಿ ನಡೆಯಲಿದೆ. ನ.26ರಂದು ರೈತರ, ಕಾರ್ಮಿಕರ, ಶೋಷಿತರ ಹಕ್ಕುಗಳಿಗಾಗಿ ನಡೆಯುವ ಮುಷ್ಕರವನ್ನು ಯಶಸ್ವಿಗೊಳಿಸಿ ಈ ಚಳವಳಿಗೆ ನಾಂದಿ ಹಾಡಬೇಕು ಎಂದು ಡಿ.ಎ. ‌ವಿಜಯಭಾಸ್ಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT