ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಮಂದಿರಕ್ಕಿಲ್ಲ ಉದ್ಘಾಟನೆ ಭಾಗ್ಯ

ಕನ್ನಡದ ಅನುಭಾವ ಕವಿ ಮಹಲಿಂಗರಂಗನ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ
Last Updated 20 ಜೂನ್ 2019, 4:21 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ವರ್ಷಗಳೇ ಕಳೆದರೂ ಇಲ್ಲಿನ ‘ಮಹಲಿಂಗರಂಗ’ ರಂಗಮಂದಿರ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕನ್ನಡದ ಅನುಭಾವ ಕವಿ ಮಹಲಿಂಗರಂಗನ ಹೆಸರಿನಲ್ಲಿ ನಿರ್ಮಾಣವಾಗಿ ರಂಗಾಸಕ್ತರನ್ನು ಸೆಳೆಯಬೇಕಿದ್ದ ಈ ಮಂದಿರದ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ. ರಂಗಾಸಕ್ತರ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.

ನಗರದಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಹೆಚ್ಚು ಜನರು ಕೂರಬಹು ದಾದ ಉತ್ತಮ ರಂಗಮಂದಿರ ಬೇಕು ಎಂಬ ರಂಗಾಸಕ್ತರು, ಕಲಾವಿದರು, ರಂಗಕರ್ಮಿಗಳ ಹೋರಾಟದ ಫಲವಾಗಿ ಹುಟ್ಟಿಕೊಂಡದ್ದು ಈ ರಂಗಮಂದಿರ. ಹೋರಾಟದ ಫಲವಾಗಿ ಇಲ್ಲಿನ ಮೀನು ಮಾರುಕಟ್ಟೆ ಸಮೀಪ ರಂಗಮಂದಿರದ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ 7 ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅನುದಾನ ಕೊರತೆ, ಸಮರ್ಪಕ ಯೋಜನೆ ಇರದ ಕಾರಣ ಕಾಮಗಾರಿ ವರ್ಷಗಳಿಂದ ಅಪೂರ್ಣಗೊಂಡಿದೆ.

ಕೆಆರ್‌ಐಡಿಎಲ್‌ಗೆ ಕಾಮಗಾರಿ ನಿರ್ವಹಣೆ ನೀಡಲಾಗಿದೆ. ನಿಗದಿತ 3 ವರ್ಷಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 5 ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ₹ 4.34 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಮಂದಿರಕ್ಕೆ ಈಗ ಅನುದಾನ ಸಾಲುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಕಾರಣ ರಂಗಮಂದಿರದಲ್ಲಿ ಕೆಲ ಬದಲಾವಣೆ ಅಗತ್ಯ ಇರುವ ಕಾರಣ ಕಾಮಗಾರಿ ವೆಚ್ಚ ಹೆಚ್ಚುತ್ತಿದೆ.

ದಶಕಗಳ ಬೇಡಿಕೆಗೆ ಅನುಗುಣವಾಗಿ ಯೋಜನಾಬದ್ಧವಾಗಿ ನಿರ್ಮಾಣ ವಾಗಬೇಕಿದ್ದ ರಂಗಮಂದಿರ ನಿರ್ಮಾಣ ಹಂತದಲ್ಲೇ ಅವೈಜ್ಞಾನಿಕವಾಗಿದ್ದು, ಅದನ್ನು ಮಾರ್ಪಾಡು ಮಾಡುವಂತಹ ಸ್ಥಿತಿ ಬಂದಿರುವುದು ವಿಪರ್ಯಾಸ ಎಂಬುದು ರಂಗಾಸಕ್ತರ ದೂರು.

ರಂಗಮಂದಿರದಲ್ಲಿ ಅಗತ್ಯವಿರುವ ಕಾಮಗಾರಿ, ಯಾವ ಯಾವ ಬದಲಾವಣೆಯಾಗಬೇಕು ಎಂಬುದರ ವರದಿ ನೀಡಬೇಕು ಎಂದು ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ನಿರ್ದೇಶನದಂತೆ ಮೂವರ ತಜ್ಞರ ಸಮಿತಿ ನೇಮಕ ಮಾಡಲಾಗಿತ್ತು. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ.

ರಂಗಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳವೇ ಸೂಕ್ತವಲ್ಲ. ರೈಲ್ವೆ ಹಳಿ ಸಮೀಪವೇ ಇದೆ. ಮೀನು ಮಾರುಕಟ್ಟೆ ಸೇರಿ ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿದ್ದು, ಇದರಿಂದ ಕಾರ್ಯಕ್ರಮ ಆಯೋಜಿಸಲು ಸಮಸ್ಯೆಯಾಗುತ್ತದೆ. ಅಲ್ಲದೇ ವೇದಿಕೆಯ ಮುಂಭಾಗದಲ್ಲೇ ಅವೈಜ್ಞಾನಿಕವಾಗಿ ಎರಡು ಕಂಬ ಗಳನ್ನು ನಿರ್ಮಿಸಲಾಗಿದೆ. ಇದು ರಂಗಮಂದಿರದ ಸೌಂದರ್ಯವನ್ನೇ ಹಾಳು ಮಾಡಿದೆ. ದ್ವಾರಬಾಗಿಲಲ್ಲೇ ಈ ಕಂಬಗಳು ಇರುವ ಕಾರಣ ಪ್ರೇಕ್ಷರಿಗೂ ತೊಂದರೆಯಾಗುತ್ತದೆ ಎಂದು ದೂರುತ್ತಾರೆ ಅವರು.

ಅನುದಾನ ಸಂಬಂಧ ಹೆಚ್ಚುವರಿ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಶಾಸಕರು, ನಾಟಕ ಅಕಾಡೆಮಿಅಧ್ಯಕ್ಷರ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ. ಹಂತ ಹಂತವಾಗಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. ಅಗತ್ಯ ಇರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅನುದಾನದ ಬಳಿಕ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೇ ವರ್ಷದಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ.

ರೈಲ್ವೆ ಹಳಿ ಇರುವ ಕಾರಣ ಎತ್ತರದ ಗೋಡೆ ಸೇರಿ, ಕಿಟಕಿಗಳಿಗೆ ದಪ್ಪನೆಯ ಗಾಜು ಸೇರಿ ಅಗತ್ಯ ಕಾಮಗಾರಿ ಕೈಗೊಂಡರೆ ಉತ್ತಮವಾದ ರಂಗಮಂದಿರವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ನಗರದ ಜನರ ಬಹುದಿನದ ಬೇಡಿಕೆ ಶೀಘ್ರ ಸಾಕಾರಗೊಳ್ಳಬೇಕು ಎಂಬುದು ರಂಗಾಸಕ್ತರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT