ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರು ಬೆಂಗಳೂರಿನ ಡಿವಿಲಿಯರ್ಸ್!

Last Updated 23 ಮೇ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ತೀರಾ ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆಗಳಲ್ಲಿ ರಿಕ್ಷಾದಲ್ಲಿ ತನ್ನ ಪತ್ನಿ, ಮಗನೊಂದಿಗೆ ಪ್ರಯಾಣಿಸುತ್ತ  ಅಭಿಮಾನಿಗಳೊಂದಿಗೆ ನಲಿದಿದ್ದ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌ (ಎಬಿಡಿ)ಇದ್ದಕ್ಕಿದ್ದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಬುಧವಾರ ‘ನಾನು ದಣಿದಿದ್ದೇನೆ’ ಎಂದು ಟ್ವೀಟ್ ಮಾಡಿರುವ ಅವರು, ನಿವೃತ್ತಿಯನ್ನೂ ಪ್ರಕಟಿಸಿದ್ದಾರೆ. ಈ ಬಾರಿಯ ಐಪಿಎಲ್‌ ಕ್ರಿಕೆಟ್ ಟೂರ್ನಿಯಲ್ಲಿ ಅವರ ಸ್ಫೋಟಕ ಬ್ಯಾಟಿಂಗ್, ಚುರುಕಿನ ಫೀಲ್ಡಿಂಗ್‌ ನೋಡಿದವರು ‘ಎಬಿಡಿ ನಿವೃತ್ತಿ ನಿಜಾನಾ?’ ಎಂದು ಕೇಳುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿಯ ಸಂದೇಶಗಳ ಮಹಾಪೂರವೇ ಹರಿದಿದೆ.

ದಕ್ಷಿಣ ಆಫ್ರಿಕಾದ ಈ ಬ್ಯಾಟ್ಸ್‌ಮನ್‌ ತಮ್ಮ ಆಟ ಮತ್ತು ಸ್ನೇಯಮಯಿ ವ್ಯಕ್ತಿತ್ವದ ಮೂಲಕ ಎಲ್ಲ ದೇಶಗಳಲ್ಲಿಯೂ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಕಾರಣದಿಂದ ಅವರು ಬೆಂಗಳೂರಿನವರೇ ಆಗಿಹೋಗಿದ್ದಾರೆ.

2015ರ ನವೆಂಬರ್‌ನಲ್ಲಿ ಮಹಾತ್ಮಾ ಗಾಂಧಿ–ನೆಲ್ಸನ್‌ ಮಂಡೇಲಾ ಕ್ರಿಕೆಟ್ ಸರಣಿಯ ಟೆಸ್ಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಅದು ಎಬಿಡಿಗೆ 100ನೇ ಟೆಸ್ಟ್ ಪಂದ್ಯವಾಗಿತ್ತು. ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಮಾಧ್ಯಮ ಗ್ಯಾಲರಿಗೆ ಬಂದಿದ್ದ ಎಬಿಡಿ ಅವರ ತಾಯಿ ಮಿಲ್ಲಿ ಡಿವಿಲಿಯರ್ಸ್‌ ಹೇಳಿದ ಮಾತು ಎಬಿ ಮತ್ತು ಬೆಂಗಳೂರಿನ ನಂಟಿಗೆ ಸಾಕ್ಷಿಯಾಗಿತ್ತು.

‘ನನ್ನ ಮಗನನ್ನು ಇಲ್ಲಿಯ (ಬೆಂಗಳೂರು) ಜನರು ಪ್ರೀತಿಸುತ್ತಿರುವ ಪರಿಯನ್ನ ಕಂಡು ಮಾತುಗಳೇ ಬತ್ತಿಲ್ಲ. ಎಂತಹ ನಿಷ್ಕಲ್ಮಷ ಪ್ರೇಮ ಇದು. ಎಬಿ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಷ್ಟು ಹೊತ್ತು ಜನರು  ಅವರ ಹೆಸರನ್ನೇ ಪಠಿಸುತ್ತಿದ್ದರು. ಎಬಿ ಪ್ರತಿವರ್ಷ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡಲು ಇಲ್ಲಿ ಬರುತ್ತಾರೆ. ಅವರು ನಿಮ್ಮ ಊರಿನವರೇ ಆಗಿಬಿಟ್ಟಿದ್ದಾರೆ. ಎಂದು ಮಿಲಿ ಗದ್ಗದಿತರಾಗಿದ್ದರು. ಅವರ ಪಕ್ಕದಲ್ಲಿಯೇ ಕುಳಿತಿದ್ದ ಸೀನಿಯರ್ ಎಬಿಡಿ (ತಂದೆ), ‘ಅವರಿಗೆ ಹಿಂದಿ ಕಲಿಸುವುದೊಂದೇ ಈಗ ಬಾಕಿಯಿದೆ’ ಎಂದು ನಕ್ಕಿದ್ದರು.

ಎಬಿಡಿ ಅವರು ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದು ಕಡಿಮೆ. 2011ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಿರುವ ಅವರು ಭರಪೂರ ರಸದೌತಣ ನೀಡಿದ್ದಾರೆ. ‘ಮಿಸ್ಟರ್‌ 360 ಡಿಗ್ರಿ’ ಎಂದೇ ಕರೆಸಿಕೊಳ್ಳುವ ಅವರ ಬ್ಯಾಟಿಂಗ್ ಶೈಲಿಗೆ ಮನಸೋತವರು ಹಲವರಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಅವರು 12 ಪಂದ್ಯಗಳನ್ನು ಆಡಿ 480 ರನ್ ಗಳಿಸಿದ್ದರು. ಅವರಂತಹ ಆಟಗಾರರು ತಂಡದಲ್ಲಿದ್ದರೂ ಆರ್‌ಸಿಬಿಗೆ ಇದುವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ಆದರೆ ಅವರು ಆಡುವ ಸ್ಕೂಪ್ ಶಾಟ್, ಅತಿ ಎತ್ತರದ (111.1 ಮೀಟರ್ಸ್) ಸಿಕ್ಸರ್, ಬೌಂಡರಿಗೆರೆಯ ಬಳಿಯಲ್ಲಿ ‘ಸ್ಪೈಡರ್‌ ಮ್ಯಾನ್’ ರೀತಿಯಲ್ಲಿ ಹಾರಿ ಲಬಕ್ಕನೆ ಪಡೆದ ಕ್ಯಾಚ್, ನಿಖರ ಥ್ರೋ ಮೂಲಕ  ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ರನ್‌ಔಟ್ ಮಾಡಿದ ಪರಿ ಕ್ರಿಕೆಟ್‌ ಅಭಿಮಾನಿಗಳ ಮನಗಳಲ್ಲಿ ಅಚ್ಚಳಿಯದೇ ಉಳಿದಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯಾದರೂ ಮುಂದಿನ ಆವೃತ್ತಿಯಲ್ಲಿ ಆರ್‌ಸಿಬಿಯಲ್ಲಿ ಆಡುವ ನಿರೀಕ್ಷೆ ಇದೆ.

**

ಟೆನಿಸ್‌ಗೆ ನಷ್ಟ; ಕ್ರಿಕೆಟ್‌ಗೆ ಲಾಭ

ಎಬಿಡಿ ಅವರು ಕ್ರಿಕೆಟ್‌ ಆಡದೇ ಹೋಗಿದ್ದರೆ ಗಾಲ್ಫ್ ಆಟಗಾರನಾಗುವ ಸಾಧ್ಯತೆ ಇತ್ತು. ಟೆನಿಸ್‌ ಕೂಡ ಚೆನ್ನಾಗಿ ಆಡುತ್ತಿದ್ದ ಎಬಿಡಿ ಕ್ರಿಕೆಟ್‌ನತ್ತ ಆಕರ್ಷಿತರಾಗಿದ್ದು ಆಕಸ್ಮಿಕ.  ಬಾಲ್ಯದಲ್ಲಿ ಅವರು ಕ್ರಿಕೆಟ್‌ ಆಡಿದ್ದೇ ಇಲ್ಲ. ಆದರೆ ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಟೆನಿಸ್‌ ಹೊಡೆತಗಳು, ಗಾಲ್ಫ್ ಸ್ಟ್ರೋಕ್‌ಗಳ ಶೈಲಿಯ ಸೆಳಕು ಕಾಣಬಹುದು.

ಅವರ ದೈಹಿಕ ಕ್ಷಮತೆ ಅಮೋಘವಾದದ್ದು. ಟೆಸ್ಟ್‌ ಪಂದ್ಯಗಳಲ್ಲಿ ಸುದೀರ್ಘ ಇನಿಂಗ್ಸ್‌ ಆಡುವ ಕೌಶಲದ ಜೊತೆಗೆ ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಬೀಸಾಟದ ಶೈಲಿಯೂ ಅವರಿಗೆ ಕರತಲಾಮಲಕ. ಅದರಲ್ಲೂ ಬೃಹತ್ ಗುರಿ ಬೆನ್ನತ್ತಿದ ಸಂದರ್ಭದಲ್ಲಿ ಅವರ ಆಟ ರಂಗೇರುತ್ತಿತ್ತು.

ಟೆಸ್ಟ್‌ನಲ್ಲಿ ಅಜೇಯ ದ್ವಿಶತಕ (278*) ಹೊಡೆದಿರುವ ಸಮರ್ಥ ಆಟಗಾರ ಎಬಿಡಿ, ಏಕದಿನ ಮಾದರಿಯಲ್ಲಿಯೂ ಅತಿ ವೇಗದ ಶತಕ ಗಳಿಸಿದ ದಾಖಲೆವೀರ. ಮೂರು ವರ್ಷಗಳ ಹಿಂದೆ ವೆಸ್ಟ್‌ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಹೊಡೆದಿದ್ದರು.

2015ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಅವರ ಭರ್ಜರಿ ಬ್ಯಾಟಿಂಗ್‌ ಮುಂದೆ ಮಹೇಂದ್ರಸಿಂಗ್ ದೋನಿ ನಾಯಕತ್ವದ ತಂಡವು ತಲೆಬಾಗಿತ್ತು.

**

ಮಿಸ್ಟರ್ 360 ಡಿಗ್ರಿ

ಎಬಿಡಿ ತಮ್ಮ ವಿಶಿಷ್ಟ ರೀತಿಯ ಬ್ಯಾಟಿಂಗ್ ಮೂಲಕ  ಅಭಿಮಾನಿಗಳಿಂದ ‘ಮಿಸ್ಟರ್ 360 ಡಿಗ್ರಿ’ ಎಂದೇ ಕರೆಸಿಕೊಂಡಿದ್ದಾರೆ. ಚೆಂಡನ್ನು ಮೈದಾನದ ಎಲ್ಲ ಭಾಗಗಳ ಬೌಂಡರಿ ಗೆರೆ ದಾಟಿಸಿದ ಶ್ರೇಯ ಅವರದು.

ವೇಗದ ಬೌಲರ್‌ಗಳ ಎಸೆತಗಳನ್ನು ಮಂಡಿಯೂರಿ ಕುಳಿತು ಸ್ಕೂಪ್ ಮಾಡುತ್ತಿದ್ದ ಆವರ ಆಟಕ್ಕೆ ಮನಸೋತವರು ಹಲವರು. ಕೊನೆಯ ಹಂತದ ಓವರ್‌ಗಳಲ್ಲಿ ಅವರು ಕ್ರೀಸ್‌ನಲ್ಲಿದ್ದರೆ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್‌ ಮರೆತು ಬೌಲಿಂಗ್ ಮಾಡುವುದೊಂದೇ ದಾರಿ. ಆಫ್ ಸ್ಟಂಪ್‌ನ ನೇರ ಅಥವಾ ವೈಡ್ ಎಸೆತ, ಯಾರ್ಕರ್, ಶಾಟ್‌ ಪಿಚ್ ಎಸೆತಗಳಿಗೆ ತಮ್ಮದೇ ರೀತಿಯ ಉತ್ತರ ಕೊಡುತ್ತಿದ್ದರು.

ಚೆಂಡನ್ನು ವಿಕೆಟ್‌ಕೀಪರ್ ತಲೆಮೇಲಿಂದ ಸಿಕ್ಸರ್‌ಗೆ ಎತ್ತುತ್ತಿದ್ದ ಅವರ ಸ್ಕೂಪ್‌ನ ಪರಿ ಹಲವು ಯುವ ಆಟಗಾರರಿಗೆ ಪಾಠವಾಗಿದ್ದು ಸುಳ್ಳಲ್ಲ.ದೆಹಲಿಯ ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕರ್ನಾಟಕದ ಕೆ.ಎಲ್. ರಾಹುಲ್ ಆ ಹೊಡೆತಗಳನ್ನು ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮೂವರೂ ಎಬಿಡಿ!

ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಕುಟುಂಬದ ವಿಶೇಷ ಗೊತ್ತೆ? ಅವರ ತಂದೆ ಮತ್ತು ಮಗನ ಹೆಸರು ಕೂಡ ಎ.ಬಿ. ಡಿವಿಲಿಯರ್ಸ್! ಮಾಧ್ಯಮಗಳಲ್ಲಿ ತಂದೆಯನ್ನು ಎ.ಬಿ.ಡಿ ಸೀನಿಯರ್ ಮತ್ತು ಕ್ರಿಕೆಟಿರ್ ಎಬಿಡಿ ಮತ್ತು ಅವರ ಮಗನನ್ನು ಎಬಿಡಿ ಜೂನಿಯರ್ ಎಂದು ಕರೆಯಲಾಗುತ್ತಿದೆ.

**

ಎಬಿ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ವಿಶಿಷ್ಟ ಪ್ರತಿಭೆಯ ಆಟಗಾರ. ತಮ್ಮ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ಮುಂದೆ ಅವರ ಆಟವನ್ನು ನೋಡುವ ಅವಕಾಶ ಸಿಗುವುದಿಲ್ಲ ಎನ್ನವುದೇ ಬೇಸರ.
–ಡೇವಿಡ್ ರಿಚರ್ಡಸನ್, ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT