ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಭ್ರಷ್ಟರನ್ನು ಲೋಕಾಯುಕ್ತ ಬಲೆಗೆ ಬೀಳಿಸಿದವರಿಗೆ ಪ್ರೋತ್ಸಾಹಧನ

Last Updated 12 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ಹರಿಹರ: ಇಲ್ಲಿನ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಕರಿಬಸಯ್ಯ ಬಿ.ಎಂ. ಅವರನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದ ಬೆಸ್ಕಾಂ ಗುತ್ತಿಗೆದಾರ ಮಹೇಶ್ ಬೇವಿನಹಳ್ಳಿ ಅವರಿಗೆ ನಗರಸಭೆ ಮಾಜಿ ಸದಸ್ಯ ಡಿ.ಜಿ. ರಘುನಾಥ್ ₹ 25,000 ಪ್ರೋತ್ಸಾಹಧನದ ಚೆಕ್ ವಿತರಿಸಿದರು.

‘ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕರಿಬಸಯ್ಯ ಪ್ರತಿ ಐಪಿ ಸೆಟ್‌ಗೆ ₹ 1000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಫೆಬ್ರುವರಿ 23ರಂದು ₹ 6000 ಲಂಚ ಪಡೆಯುವಾಗ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಹಿಂದೆ ನನ್ನ ಶಾಲೆಗೆ ಎನ್‌ಒಸಿ ನೀಡಲು ಲಂಚ ಕೇಳಿದ್ದ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದೆ. ಆಗ ಭ್ರಷ್ಟರನ್ನು ಬಂಧಿಸಲು ಕಾರಣವಾದ ದೂರುದಾರರಿಗೆ ಪ್ರೋತ್ಸಾಹಧನ ನೀಡುತ್ತೇನೆ ಎಂದು ಘೋಷಿಸಿದ್ದೆ. ಅದರಂತೆ ನೀಡಿದ್ದೇನೆ’ ಎಂದು ‌ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಹಿಂದೆ ಮಲೇಬೆನ್ನೂರಿನ ಜ್ಯೋತಿ ಚಿತ್ರಮಂದಿರ ಮಾಲೀಕರಿಗೆ ಎನ್‌ಒಸಿ ನೀಡಲು ಲಂಚ ಕೇಳಿದ್ದ ಅಗ್ನಿ ಶಾಮಕ ಅಧಿಕಾರಿಯನ್ನು ಲೋಕಾಯುಕ್ತರು ಬಂಧಿಸಿದ್ದರು. ಆ ಪ್ರಕರಣದ ದೂರುದಾರ ಚಿತ್ರಮಂದಿರದ ಮಾಲಿಕ ಅರುಣ್ ಅವರಿಗೆ ₹ 25,000 ಪ್ರೋತ್ಸಾಹಧನ ನೀಡಿದ್ದೆ’ ಎಂದರು.

‘ತಾಲ್ಲೂಕಿನ ಬಹುತೇಕ ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳು ಭ್ರಷ್ಟಾಚಾರದಿಂದ ಕೂಡಿವೆ. ಜನ ಸಾಮಾನ್ಯರ ಕಾನೂನುಬದ್ಧ ಕೆಲಸ ಮಾಡಿಕೊಡಲು ಲಂಚ ನೀಡಿದರೂ ಹತ್ತಾರು ಬಾರಿ ಅಲೆದಾಡಿಸಲಾಗುತ್ತಿದೆ. ಇನ್ನು ಮುಂದೆ ಯಾರೇ ಲೋಕಾಯುಕ್ತ ಕ್ಕೆ ದೂರು ನೀಡಿದರೆ ರಘುನಾಥ ಅವರಂತೆ ನಾನೂ ₹ 10,000 ಪ್ರೋತ್ಸಾಹಧನ ನೀಡುತ್ತೇನೆ’ ಎಂದು ಮಹೇಶ್ ಬೇವಿನಹಳ್ಳಿ ಹೇಳಿದರು.

ರಾಜನಹಳ್ಳಿ ಗುಡ್ಡದಯ್ಯ ಎಚ್.ಎಂ., ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕೊಪ್ಪಳ, ಕೃಷ್ಣಮೂರ್ತಿ, ರಾಘವೇಂದ್ರ ನಾಗೇನಹಳ್ಳಿ, ನವೀನ್ ಕುಮಾರ್, ಭಾನುವಳ್ಳಿ ಡಿ.ಜಿ.ರುದ್ರಗೌಡ್ರು, ಮಹೇಶಪ್ಪ, ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT