ಹೊಂದಾಣಿಕೆಯಾಗದ ಹೊಸ ಸಮಾಜ– ಹಳೇ ಪಠ್ಯ: ಪ್ರೊ.ಜೋಗನ್‌ ಶಂಕರ್‌

7
ಸಮಾಜ ವಿಜ್ಞಾನ ಶೈಕ್ಷಣಿಕ ಕಾರ್ಯಾಗಾರ

ಹೊಂದಾಣಿಕೆಯಾಗದ ಹೊಸ ಸಮಾಜ– ಹಳೇ ಪಠ್ಯ: ಪ್ರೊ.ಜೋಗನ್‌ ಶಂಕರ್‌

Published:
Updated:
Deccan Herald

ದಾವಣಗೆರೆ: ‘21ನೇ ಶತಮಾನದ ಸಮಾಜದಲ್ಲಿ ನಾವಿದ್ದೇವೆ. ಸಮಾಜ ವಿಜ್ಞಾನದ ಪಠ್ಯವು 18–19ನೇ ಶತಮಾನದಲ್ಲಿದೆ. ಹಾಗಾಗಿ ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ. ನಮ್ಮ ಪಠ್ಯವನ್ನೂ 21ನೇ ಶತಮಾನಕ್ಕೆ ಸರಿಯಾಗಿ ರೂಪಿಸಬೇಕು’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಸಲಹೆ ನೀಡಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜ ವಿಜ್ಞಾನ ಉಪನ್ಯಾಸಕರ ವೇದಿಕೆಯಿಂದ ನಗರದ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡಬೇಕಿದ್ದರೆ, ಇಲ್ಲಿನ ಸಮಾಜವನ್ನು ಮೊದಲು ಅಧ್ಯಯನ ಮಾಡಿದ್ದರು. ಯಾರ ಹಿಡಿತದಲ್ಲಿ ಈ ಸಮಾಜ ಇದೆ? ಯಾರು ಹೇಳಿದಂತೆ ನಡೆಯುತ್ತದೆ? ಜಾತಿ ವ್ಯವಸ್ಥೆ ಅಂದರೆ ಏನು? ಯಾರನ್ನು ತಮ್ಮವರನ್ನಾಗಿ ಮಾಡಿಕೊಂಡರೆ ಆಳ್ವಿಕೆ ಸುಲಭ ಎಂಬುದನ್ನೆಲ್ಲ ತಿಳಿದುಕೊಂಡಿದ್ದರು ಎಂದು ವಿವರಿಸಿದರು.

ಸಮಾಜವನ್ನು ಪುನರ್‌ನಿರ್ಮಿಸಲು ಸಮಾಜ ಶಾಸ್ತ್ರಜ್ಞರ ನೇತೃತ್ವ ಬೇಕು. ಆದರೆ ನಮ್ಮ ಎಲ್ಲ ಸಮಾಜ ವಿಜ್ಞಾನ ತಜ್ಞರು ಕೀಳರಿಮೆಯಿಂದ ಬಳಲುತ್ತಿದ್ದಾರೆ. ಜ್ಞಾನ ಇದ್ದರೂ ಪುಕ್ಕಲರಾಗಿದ್ದಾರೆ. ಯಾವುದೇ ಸವಾಲನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಇದು ಸಮಾಜ ವಿಜ್ಞಾನ ಉಪನ್ಯಾಸಕರಿಗೂ ಅನ್ವಯ. ತಮ್ಮ ಪಾಠ ಆಯಿತು ತಾವು ಆಯಿತು ಎಂಬಂತಿದ್ದಾರೆ ಎಂದು ಟೀಕಿಸಿದರು.

ಪಠ್ಯವು ಸಮಾಜಕ್ಕೆ ಅನ್ವಯವಾಗಿ ಇರಬೇಕು. ಆದರೆ ಸದ್ಯಕ್ಕೆ ಪಠ್ಯದಲ್ಲಿ ಇರುವುದು ಬೇರೆ, ಸಮಾಜ ಇರುವುದು ಬೇರೆ ಎಂಬುದು ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ. ಅದಕ್ಕಾಗಿ ಕ್ಷೇತ್ರ ಅಧ್ಯಯನ ಹೆಚ್ಚೆಚ್ಚು ಆಗಬೇಕಿದೆ. ಹೊಸ ಪ್ರವೃತ್ತಿಗಳು, ಸಮಾಜದ ಸಮಸ್ಯೆಗಳನ್ನು ಪಠ್ಯ ಒಳಗೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತದಲ್ಲಿ ಸಮಾಜ ವಿಜ್ಞಾನವು ಒಂದು ಅಧ್ಯಯನವಾಗಿ ಆರಂಭಗೊಂಡು 102 ವರ್ಷಗಳಾದವು. ಕೋಲ್ಕತ ಮತ್ತು ಮುಂಬೈ ವಿಶ್ವವಿದ್ಯಾಲಯಗಳು ಮೊದಲು ಈ ಅಧ್ಯಯನ ಆರಂಭಿಸಿದವು. ಕೋಲ್ಕತವು ಮಾನವಶಾಸ್ತ್ರದ ಕಡೆಗೆ ಹೆಚ್ಚು ಒಲವು ತೋರಿದರೆ, ಮುಂಬೈಯು ಜಾತಿ ಮತ್ತು ಜನಾಂಗದ ಅಧ್ಯಯನ ಕಡೆಗೆ ಒಲವು ತೋರಿಸಿತು ಎಂದು ನೆನಪು ಮಾಡಿಕೊಂಡರು.

ವಾಣಿಜ್ಯ ವಿಭಾಗದವರಿಗೂ ಐಚ್ಛಿಕ ವಿಷಯವಾಗಿ ಸಮಾಜ ವಿಜ್ಞಾನವನ್ನು ಇರಲು ಅನುಮತಿ ಸಿಕ್ಕಿರುವುದಕ್ಕೆ ಹೆಚ್ಚು ರೋಮಾಂಚನಗೊಳ್ಳಬೇಕಿಲ್ಲ. ರಾಜಕೀಯ, ಅರ್ಥ, ವೈದ್ಯಕೀಯ, ನರ್ಸಿಂಗ್‌ ಹೀಗೆ ಎಲ್ಲ ವಿಷಯಗಳಿಗೂ ಸಮಾಜ ವಿಜ್ಞಾನದ ಅಗತ್ಯ ಇದೆ. ಸಮಾಜ ವಿಜ್ಞಾನದ ಆಧಾರದಲ್ಲಿ ಐಎಎಸ್‌, ಐಪಿಎಸ್‌ ಮಾಡಿದವರು ಹೆಚ್ಚು ಯಶಸ್ವಿಯಾಗಿದ್ದಾರೆ. ಪಿಯು ಮಟ್ಟದಿಂದಲೇ ಸಮಾಜ ವಿಜ್ಞಾನವನ್ನು ಗಟ್ಟಿಗೊಳಿಸುವುದು ಅಗತ್ಯವಿದೆ ಎಂದರು.

ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜಿ.ಎಚ್‌. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಡಾ. ಕೆ.ಎಚ್‌. ಶೇಖರಪ್ಪ, ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ, ಸಹ ಪ್ರಾಧ್ಯಾಪಕ ಡಾ.ಗಂಗಾಧರಯ್ಯ ಹಿರೇಮಠ್‌,  ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್. ಪ್ರದೀಪ್‌ ಕುಮಾರ್‌, ಪ್ರಾಚಾರ್ಯ ಜಿ.ಎನ್‌.ಎಚ್‌. ಕುಮಾರ್‌, ಮಲ್ಲೇಶಪ್ಪ ಉಪಸ್ಥಿತರಿದ್ದರು.

ಪ್ರೊ. ಸಿ.ಎ. ಸೋಮಶೇಖರಪ್ಪ, ಡಾ. ಹನುಮಗೌಡ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮುಂಬಡ್ತಿ ಪಡೆದ ಟಿ. ಹಾಲೇಶ್‌, ನಿವೃತ್ತರಾದ ಕೆ. ಬಸವರಾಜಪ್ಪ, ಕೆ. ಚನ್ನಪ್ಪ, ಪಿ.ಎಸ್‌. ಚಂದ್ರಶೇಖರಪ್ಪ, ಎಂ.ಎಸ್‌. ಮಂಜುಳಾ, ನಿರ್ಮಲ ಕುಮಾರಿ, ಷಡಕ್ಷರಪ್ಪ ಅವರನ್ನು ಸನ್ಮಾನಿಸಲಾಯಿತು. ಜಿ.ಬಿ. ಚಂದ್ರಶೇಖರ್‌ ಸ್ವಾಗತಿಸಿದರು. ಬಿ. ಪಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರಪ್ಪ ವಂದಿಸಿದರು. ಆರ್‌.ಜಿ. ಸಂತೋಷ್‌ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !