ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಮಾಡುವ ಗುಣ ಹೆಚ್ಚಾಗಲಿ: ಕಿವುಡ, ಮೂಕರ ಸಂಘದ ಅಧ್ಯಕ್ಷ

ಮಹಿಳಾ ಸಮಾಜದ ಅಂಗಸಂಸ್ಥೆಯಾದ ವಿಮೋಚನ ಹಾಗೂ ಸಾಹಸ್ ಸಂಸ್ಥೆಯ ವಾರ್ಷಿಕೋತ್ಸವ
Last Updated 12 ಡಿಸೆಂಬರ್ 2019, 9:58 IST
ಅಕ್ಷರ ಗಾತ್ರ

ದಾವಣಗೆರೆ: ಸೇವೆ ಮಾಡುವ ಗುಣ ಹೆಚ್ಚಾದಾಗ ಮಾತ್ರ ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಸಾಧ್ಯ ಎಂದು ರಾಜ್ಯ ಕಿವುಡ ಮತ್ತು ಮೂಕರ ಸಂಘದ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿ, ವನಿತಾ ಸಮಾಜದಿಂದ ‘ವಿಮೋಚನಾ’ ಹಾಗೂ ‘ಸಾಹಸ್’ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ‘ಮಹಿಳಾ ಸಮಾಜದ ಅಂಗಸಂಸ್ಥೆಯಾದ ವಿಮೋಚನಾ ಹಾಗೂ ಸಾಹಸ್ ವಿಶೇಷ ಚೇತನರ ಕೊರತೆಗಳನ್ನು ನೀಗಿಸಿ ಎಲ್ಲರ ಹಾಗೆ ಸ್ವಾವಲಂಬಿಗಳಾಗಿ ಬೆಳೆಯಲು ಅನುಕೂಲ ಒದಗಿಸಿ ಅವರ ಬಾಳಿನ ಆಶಾಕಿರಣವಾಗಿದೆ’ ಎಂದರು.

ಬಡ ಕಿವುಡ ಮಕ್ಕಳಿಗಾಗಿ ದಾವಣಗೆರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕಾಕ್ಲಿಯರ್ ಇಂಪ್ಲಾಟೇಶನ್ ಚಿಕಿತ್ಸಾ ಕೇಂದ್ರವನ್ನು ತೆರೆಯುವ ಯೋಜನೆಯಿದ್ದು, ಅದಕ್ಕಾಗಿ ನಾಗಮ್ಮ ಕೇಶವಮೂರ್ತಿಯವರು ಸಹಾಯ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ವನಿತಾ ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಮಾತನಾಡಿ, ನಮ್ಮ ಆತ್ಮತೃಪ್ತಿಗಾಗಿ ಸಮಾಸ ಸೇವೆಯನ್ನು ಆರಂಭಿಸಿದ್ದು, ಕೊನೆವರೆಗೂ ಈ ಕಾರ್ಯ ನಡೆಯುತ್ತಲೇ ಇರುತ್ತದೆ. ಯಾವ ಫಲಾಪೇಕ್ಷೆಯಿಲ್ಲದೇ ಸಂಸ್ಥೆಯು ಬಡ ಮಕ್ಕಳಿಗಾಗಿ, ಹೆಣ್ಣುಮಕ್ಕಳ ಸ್ವಾವಲಂಬನೆಗಾಗಿ ದುಡಿಯುತ್ತಿದೆ’ ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ವೀಣಾ ಕೃಷ್ಣಮೂರ್ತಿ, ‘ಸಮಾಜಸೇವೆಗಾಗಿ ಜೀವನ ಮುಡಿಪಾಗಿಡುವವರ ಸಂಖ್ಯೆ ಕಡಿಮೆ. ಅಂಥಹ ಸಂಸ್ಥೆ ಸ್ಥಾಪಿಸಿದ ನಾಗಮ್ಮ ಅವರು ನಮಗೆಲ್ಲಾ ಮಾದರಿ. ಈ ಸಂಸ್ಥೆಯ ನೆರವಿನಿಂದ ಬೆಳೆದ ಮಕ್ಕಳು ಸಮಾಜಕ್ಕಾಗಿ ಜೀವನ ನಡೆಸಿದಾಗ ಇವರ ಶ್ರಮ ಸಾರ್ಥಕವಾಗುತ್ತದೆ ಅಂಥಹ ಮನೋಭಾವ ಎಲ್ಲರಲ್ಲಿ ಮೂಡಲಿ, ಹೆಚ್ಚೆಚ್ಚು ದಾನಿಗಳು ಹುಟ್ಟಲಿ’ ಎಂದು ಆಶಿಸಿದರು.

ಸನ್ಮಾನಿತರಾದ ದಾನಿ ಲಕ್ಷ್ಮಣ್‍ರಾಜ್ ಕೊಠಾರಿ ಅಭಿಪ್ರಾಯ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ದಾನಿಗಳಾದ ಇಂದುಮತಿ, ವಿಜಯ ವೀರಣ್ಣ, ಲಕ್ಷ್ಮೀ, ಡಾ. ಪ್ರಕಾಶ್, ಶೋಭಾ, ಉಷಾ, ತಾರಾ, ಶಾಂತ ಹಾಗೂ ಅವರನ್ನು ಸನ್ಮಾನಿಸಲಾಯಿತು. ‘ವಿಮೋಚನ’ ಹಾಗೂ ‘ಸಾಹಸ್’ ನ ಮಕ್ಕಳು ಬಸವಣ್ಣ, ರಾಧಾಕೃಷ್ಣ, ಅಂಬೇಡ್ಕರ್, ವಿವೇಕಾನಂದ ವೇಷ ಧರಿಸಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರು ರೇಣುಕಮ್ಮ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಹಾಗೂ ನೃತ್ಯ ಪ್ರದರ್ಶನ ನೀಡಿದರು.

ದೀಪಾ ರಾಮ್‍ಕುಮಾರ್ ಪ್ರಾರ್ಥಿಸಿದರು. ಪ್ರಭಾ ರವೀಂದ್ರ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ಹಾಗೂ ಸುನೀತ ಇಂದೂಧರ ವರದಿ ವಾಚನ ಮಾಡಿದರು. ಭವಾನಿ ಗುರುಪ್ರಸಾದ್ ಅತಿಥಿ ಪರಿಚಯ ನಡೆಸಿಕೊಟ್ಟರು. ವಿಜಯಲಕ್ಷ್ಮೀ ವಂದಿಸಿದರು. ನಾಗಶ್ರೀ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT