ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯ: ಆರೋಪ

ಬೃಹತ್‌ ಜಾಥಾ ನಡೆಸಲು ನಿರ್ಧಾರ
Published 24 ಆಗಸ್ಟ್ 2024, 14:13 IST
Last Updated 24 ಆಗಸ್ಟ್ 2024, 14:13 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೊಳಿಸಿದ 7ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಅನ್ಯಾಯವಾಗಿದ್ದು, ಪರಿಷ್ಕೃತ ವೇತನಕ್ಕೆ ಅನುಗುಣವಾಗಿ ನಿವೃತ್ತಿ ಉಪಧನ, ಪಿಂಚಣಿ ಮತ್ತು ಗಳಿಕೆ ರಜೆಯ ನಗದೀಕರಣದ ಸೌಲಭ್ಯಕ್ಕಾಗಿ ಬೃಹತ್‌ ಜಾಥಾ ನಡೆಸಲು ಕರ್ನಾಟಕ ನಿವೃತ್ತ ನೌಕರರ ವೇದಿಕೆ ನಿರ್ಧರಿಸಿದೆ.

ಇಲ್ಲಿನ ಗುರುಭವನದಲ್ಲಿ ಶನಿವಾರ ನಡೆದ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಜಾಥಾ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಶೀಘ್ರದಲ್ಲೇ ಜಾಥಾದ ದಿನ ನಿಗದಿಪಡಿಸಲಿದ್ದು, ಸರ್ಕಾರದ ಗಮನ ಸೆಳೆಯಲು ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

‘7ನೇ ವೇತನ ಆಯೋಗದ ವರದಿ 2022ರ ಜುಲೈಗೆ ಪೂರ್ವಾನ್ವಯವಾಗುವಂತೆ ಅಂಗೀಕರಿಸಬೇಕಿತ್ತು. ಆದರೆ, ಸರ್ಕಾರ ಈ ಶಿಫಾರಸನ್ನು ಪರಿಗಣಿಸಿಲ್ಲ. 2022ರ ಜುಲೈನಿಂದ 2024ರ ಜುಲೈವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಈ ಸೌಲಭ್ಯ ಅನ್ವಯವಾಗಿಲ್ಲ. ಈ ಅವಧಿಯಲ್ಲಿ ನಿವೃತ್ತಿ ಹೊಂದಿದ 30 ಸಾವಿರ ನೌಕರರಿಗೆ ಅನ್ಯಾಯವಾಗಿದೆ’ ಎಂದು ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೊಳ್ಳಬೇಕು. ಇದೇ ಮೊದಲ ಬಾರಿಗೆ ಏಳು ವರ್ಷಗಳ ಸುದೀರ್ಘ ಅಂತರವನ್ನು ಸರ್ಕಾರ ತೆಗೆದುಕೊಂಡಿದೆ. ನಿವೃತ್ತಿ ಉಪದನ, ಪಿಂಚಣಿ ಸೇರಿ ಇತರ ಸೌಲಭ್ಯಗಳನ್ನು 6ನೇ ವೇತನಕ್ಕೆ ಅನುಗುಣವಾಗಿ ಒದಗಿಸಲಾಗುತ್ತಿದೆ. ಈ ಅನ್ಯಾಯದ ಬಗ್ಗೆ ಶಾಸಕರು, ಸಂಸದರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರಿಸಿದರು.

‘1993ರಲ್ಲಿ 4ನೇ ವೇತನ ಆಯೋಗ ಜಾರಿಯ ಸಂದರ್ಭದಲ್ಲಿಯೂ ಇದೇ ಸಮಸ್ಯೆ ತಲೆದೋರಿತ್ತು. ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ನಿವೃತ್ತರಿಗೂ ಸೌಲಭ್ಯ ವಿಸ್ತರಿಸಿ ಅನುಕೂಲ ಮಾಡಿಕೊಟ್ಟಿದ್ದರು. ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರಿಗೆ ಈ ಸಮಸ್ಯೆ ಇತ್ಯರ್ಥಪಡಿಸಲು ಕಷ್ಟವಾಗದು. ಇದರಿಂದ ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗದು’ ಎಂದು ಹೇಳಿದರು.

‘70 ವರ್ಷ ದಾಟಿದ ನೌಕರರ ವೇತನ ಶೇ 10ರಷ್ಟು ಏರಿಕೆಯಾಗಬೇಕು. ವೈದ್ಯಕೀಯ ಸೌಲಭ್ಯ ವಿಸ್ತರಿಸಬೇಕು ಎಂಬ ಆಯೋಗದ ಶಿಫಾರಸನ್ನು ಸರ್ಕಾರ ನಿರ್ಲಕ್ಷಿಸಿದೆ. ನಿವೃತ್ತಿಯ ಅಂಚಿನಲ್ಲಿರುವ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ಯಾಯವಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಹಾಗೂ ಸರ್ಕಾರಿ ನೌಕರರ ಸಂಘ ಗಂಭೀರವಾಗಿ ಆಲೋಚಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರಾದ ಅಂಶೋಕ ಎಂ.ಸಜ್ಜನ, ಗುರು ತಿಗಡಿ, ಶಂಕರಪ್ಪ ಲಮಾಣಿ, ಎಸ್‌.ಜಿ.ಬೆಸರೊಟ್ಟಿ ಇದ್ದರು.

ಸಭೆಯ ನಿರ್ಣಯಗಳು

* ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸುವುದು

* ಬೆಂಗಳೂರಿನಲ್ಲಿ ಬೃಹತ್‌ ಸಭೆ ನಡೆಸಿ ಸರ್ಕಾರದ ಗಮನ ಸೆಳೆಯುವುದು

* ಕಾನೂನು ಹೋರಾಟಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು

* ಸರ್ಕಾರಿ ನೌಕರರ ಸಂಘ ಹಾಗೂ ನಿವೃತ್ತರ ಸಂಘದ ಬೆಂಬಲ ಪಡೆಯಲು ಪ್ರಯತ್ನಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT