ಸೋಮವಾರ, ಡಿಸೆಂಬರ್ 9, 2019
24 °C

‘ಅಂತರಂಗದ ಗುಣವೇ ಮನುಷ್ಯನ ವ್ಯಕ್ತಿತ್ವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮ್ಮೊಳಗೆ ಪ್ರೀತಿ ಇದ್ದರೆ ಪ್ರೀತಿ, ದ್ವೇಷ ಇದ್ದರೆ ದ್ವೇಷ ಹೊರಬರುತ್ತದೆ. ನಮ್ಮ ಅಂತರಂಗವೇ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಹಾಗಾಗಿ ನಾವು ಯಾವುದನ್ನು ಒಳಗಡೆ ತೆಗೆದುಕೊಳ್ಳುತ್ತೇವೆ. ಯಾವುದನ್ನು ಹೊರಗೆ ಕೊಡುತ್ತೇವೆ ಎಂಬುದರ ಆಧಾರದಲ್ಲಿ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ’ ಎಂದು ಶಾಸ್ತ್ರಿಹಳ್ಳಿ ಸತ್ಯಸಾಯಿ ವಿದ್ಯಾನಿಕೇತನದ ಮುಖ್ಯೋಪಾಧ್ಯಾಯ ಜಗನ್ನಾಥ ನಾಡಿಗೇರ ಹೇಳಿದರು.

ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಶರಣ ಸಂಗಮದ ಪ್ರಯುಕ್ತ ಅವರು ‘ಕ್ಷಮಾದಾನ– ಸರ್ವಸಾಧನ’ ಬಗ್ಗೆ ಮಂಗಳವಾರ ಅವರು ಉಪನ್ಯಾಸ ನೀಡಿದರು.

ಮಕ್ಕಳು ಯಾವುದನ್ನೂ ತುಂಬಾ ದೂರ ಒಯ್ಯುವುದಿಲ್ಲ. ದೊಡ್ಡವರದ್ದೇ ಸಮಸ್ಯೆ. ಸಣ್ಣ ತಪ್ಪನ್ನೂ ನೆನಪಿಟ್ಟುಕೊಂಡಿರುತ್ತಾರೆ. ಪ್ರೀತಿ ದೊಡ್ಡದಾಗಿದ್ದರೆ ತಪ್ಪುಗಳು ಸಣ್ಣವಾಗಿ ಕಾಣುತ್ತವೆ. ಪ್ರೀತಿ ಸಣ್ಣವಾದರೆ ತಪ್ಪುಗಳೇ ದೊಡ್ಡದಾಗಿ ಕಾಣುತ್ತವೆ. ಕ್ಷಮಾದಾನ ಇದ್ದರೆ ಮನಸ್ಸು ನೆಮ್ಮದಿಯಿಂದ ಇರುತ್ತದೆ. ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಕ್ಷಮಾಗುಣ ಇಲ್ಲದಿದ್ದರೆ ಬದುಕು ರಣರಂಗವಾಗುತ್ತದೆ. ದ್ವೇಷ, ಹೊಟ್ಟೆಕಿಚ್ಚು, ರೋಷಗಳೇ ವಿಜ್ರಂಭಿಸುತ್ತದೆ. ವಿಶ್ವಪ್ರೇಮ ಇದ್ದರೆ ಬದುಕು ವಿಶಾಲ ಹಾಗೂ ಎತ್ತರಕ್ಕೆ ಬೆಳೆಯುತ್ತದೆ. ಬಸವಾದಿ ಶರಣರು, ಬುದ್ಧ, ಅಂಬೇಡ್ಕರ್‌, ಗಾಂಧಿ, ಏಸು ಎಲ್ಲರೂ ಕ್ಷಮಾಗುಣದಿಂದ ಮಹಾತ್ಮರಾದರು’ ಎಂದು ವಿವರಿಸಿದರು.

‘ಮೌನದಿಂದ ಮನಸ್ಸು, ಸ್ನಾನದಿಂದ ದೇಹ, ಧ್ಯಾನದಿಂದ ಬುದ್ಧಿ, ಪ್ರಾರ್ಥನೆಯಿಂದ ಆತ್ಮ, ದಾನದಿಂದ ಸಂಪಾದನೆ, ಉಪವಾಸದಿಂದ ಆರೋಗ್ಯ, ಕ್ಷಮೆಯಿಂದ ಸಂಬಂಧ ಶುದ್ಧಿಯಾಗುತ್ತದೆ. ಎಲ್ಲ ಶುದ್ಧಿಗಳಾದರೆ ಪ್ರಬುದ್ಧರಾಗುತ್ತೇವೆ’ ಎಂದರು.

ಪಾಲಿಕೆ ಸದಸ್ಯ ಸೋಗಿ ಆರ್‌. ಶಾಂತಕುಮಾರ್‌, ಭೂಮಾಪಕ ಅಧಿಕಾರಿ ಜಿ.ಪಿ. ಕೇಶವಮೂರ್ತಿ ಉಪಸ್ಥಿತರಿದ್ದರು. ಬಸವ ಕಲಾಲೋಕದವರಿಂದ ವಚನ ಸಂಗೀತ ನಡೆಯಿತು.

ಪ್ರತಿಕ್ರಿಯಿಸಿ (+)