ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

Last Updated 1 ಡಿಸೆಂಬರ್ 2020, 2:49 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಮುಸ್ಲಿಮರಲ್ಲಿ ಅರ್ಧದಷ್ಟು ಜನಸಂಖ್ಯೆ ಇರುವ ಪಿಂಜಾರ, ನದಾಫ ಸಮುದಾಯಕ್ಕೆ ‘ಪಿಂಜಾರ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ಪಿಂಜಾರ್, ನದಾಫ್, ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.

‘ರಾಜ್ಯದಲ್ಲಿರುವ ಸುಮಾರು 70 ಲಕ್ಷ ಮುಸ್ಲಿಂ ಜನಸಂಖ್ಯೆಯ ಪೈಕಿ ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯ ಸೇರಿ 35ರಿಂದ 38 ಲಕ್ಷದಷ್ಟು ಜನಸಂಖ್ಯೆ ಇದ್ದು, ಶಿಕ್ಷಣ ಹಾಗೂ ಉದ್ಯೋಗ ಸೇರಿ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಕಡಿಮೆ ಜನಸಂಖ್ಯೆ ಇರುವ ಜಾತಿಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿದೆ. ಆದರೆ ನ‌ಮ್ಮನ್ನು ಕಡೆಗಣಿಸುತ್ತಿದೆ’ ಎಂದುಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಅಬ್ಧುಲ್ ರಝಾಕ್ ನದಾಫ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಮಾರ್ಚ್‌ ತಿಂಗಳಲ್ಲಿ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ 8 ತಿಂಗಳು ಕಳೆಯುತ್ತಾ ಬಂದಿದ್ದರೂ ಭರವಸೆ ಈಡೇರಿಲ್ಲ. ಹಾಸಿಗೆಮತ್ತು ಹಗ್ಗ ತಯಾರಿಕೆಯ ಮೂಲ ಕಸುಬನ್ನು ಹೊಂದಿರುವ ಪಿಂಜಾರ ಸಮುದಾಯಕ್ಕೆ ಕೋವಿಡ್ ಸಮಯದಲ್ಲಿ ಕೆಲಸವಿಲ್ಲದಂತಾಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಸರ್ಕಾರ ಕೋವಿಡ್ ಪರಿಹಾರ ಧನವನ್ನು ನೀಡಿಲ್ಲ. ಇದರಿಂದ ಬದುಕು ನಿರ್ವಹಿಸುವುದು ಕಷ್ಟಕರವಾಗಿದೆ’ ಎಂದು ಹೇಳಿದರು.

‘ಈ ಸಮುದಾಯಗಳನ್ನು ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಿದ್ದರೂ ಕೆಲವು ಜಿಲ್ಲೆಗಳಲ್ಲಿ ಪ್ರಮಾಣ ಪತ್ರಗಳನ್ನು ನೀಡುತ್ತಿಲ್ಲ. ಡಾ.ಸಿ.ಎಸ್.ದ್ವಾರಕನಾಥ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಭರವಸೆ ಈಡೇರಿಲ್ಲ.ಕೂಡಲೇ ಸರ್ಕಾರ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಅಲ್ಲದೇ ಸಮುದಾಯದ ವಿದ್ಯಾರ್ಥಿನಿಯರಿಗೆ ಜಿಲ್ಲೆಗೆ ಒಂದರಂತೆ ವಸತಿ ನಿಲಯ ಸ್ಥಾಪಿಸಬೇಕು. ಇಲ್ಲವಾದರೆ ಮುಖ್ಯಮಂತ್ರಿಗೆ ಘೇರಾವ್ ಹಾಕಲಾಗುವುದು’ ಎಂದು ಎಚ್ಚರಿಸಿದರು.

ನೇಮಕ: ಕರ್ನಾಟಕ ಪಿಂಜಾರ್, ನದಾಫ್, ಮನ್ಸೂರಿ ಸಂಘಗಳ ಮಹಾಮಂಡಳದ ಮಧ್ಯಕರ್ನಾಟಕ ಭಾಗದ ಅಧ್ಯಕ್ಷರಾಗಿ ಎಂ. ರಾಜೇಸಾಬ ಅವರನ್ನು ಆಯ್ಕೆ ಮಾಡಲಾಯಿತು.

ಗೋಷ್ಠಿಯಲ್ಲಿ ಮುಮ್ತಾಜ್ ಬೇಗಂ, ನೌಷಾನ್‍ತಾಜ್, ಷಫೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT