ಶುಕ್ರವಾರ, ಆಗಸ್ಟ್ 6, 2021
21 °C

ಮಸೀದಿ, ದರ್ಗಾಗಳಲ್ಲಿ ಮಾರ್ಗಸೂಚಿ ಅಳವಡಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್-19 ತಡೆಯಲು ಸರ್ಕಾರದ ಮಾರ್ಗಸೂಚಿಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಜಿಲ್ಲೆಯ ಎಲ್ಲಾ ಮಸೀದಿ ಹಾಗೂ ದರ್ಗಾಗಳಿಗೆ ಭೇಟಿ ನೀಡುವ ಭಕ್ತರು ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಮನವಿ ಮಾಡಿದ್ದಾರೆ.

‘ಜುಮ್ಮಾ ನಮಾಜ್‌ಗೆ ಪ್ರತ್ಯೇಕವಾಗಿ 3 ಜಮಾತ್‍ ಅನ್ನು ಅರ್ಧ ಗಂಟೆಗೆ ಒಮ್ಮೆ ಅಂದರೆ 12:45ರಿಂದ 1:15, 1:30ರಿಂದ 2 ಹಾಗೂ 2:15ರಿಂದ 2:45 ಜನಸಂದಣಿ ಹಾಗೂ ಗೊಂದಲ ಆಗದಂತೆ ನಿರ್ವಹಿಸಬೇಕು. ಪ್ರತಿದಿನ ರಾತ್ರಿ ಇಷಾ ನಮಾಜ್‌ನ ನಂತರ ಮಸೀದಿ ಹಾಗೂ ಮಸೀದಿಯ ಆವರಣವನ್ನು ಸ್ಯಾನಿಟೈಜರ್ ಬಳಸಿ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು’ ಎಂದು ಅವರು ತಿಳಿಸಿದ್ದಾರೆ

‘10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಸೀದಿಗೆ ಪ್ರವೇಶವಿರುವುದಿಲ್ಲ. ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆ ಇರುವವರು ಮಸೀದಿಯನ್ನು ಪ್ರವೇಶಿಸಬಾರದು. ಮಸೀದಿಯ ಶೌಚಾಲಯ ಹಾಗೂ ವಜೂಖಾನಾಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಹಾಗೂ ನಮಾಜಿಗಳು ಮನೆಯಿಂದಲೇ ವಜೂ ಮಾಡಿಕೊಂಡು ಮಸೀದಿಗೆ ಬರಬೇಕು. ಪಾದರಕ್ಷೆಗಳನ್ನು ಕಡ್ಡಾಯವಾಗಿ ಮಸೀದಿಯ ಗೇಟ್ ಹೊರಗೆ ಬಿಡಬೇಕು’ ಎಂದು ತಿಳಿಸಿದ್ದಾರೆ.

ನಮಾಜಿಗಳು ಮಸೀದಿ ಒಳಗೆ ಪ್ರವೇಶಿಸುವಾಗ ಕಡ್ಡಾಯವಾಗಿ ದೇಹದ ಉಷ್ಣಾಂಶ ಪರಿಶೀಲನೆ (ಥರ್ಮಲ್ ಸ್ಕ್ರೀನಿಂಗ್) ಮಾಡಿಸಿಕೊಂಡು ಬರಬೇಕು. ಪರಿಶೀಲನೆ ರೋಗಲಕ್ಷಣಗಳು ಕಂಡು ಬಂದರೆ ತ್ವರಿತವಾಗಿ “ಆಪ್ತಮಿತ್ರ” ಸಹಾಯವಾಣಿ 14410 ಈ ನಂಬರ್‍ಗೆ ಕರೆ ಮಾಡಬೇಕು.

ಮಸೀದಿಗೆ ಪ್ರವೇಶ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್‌ ಬಳಸಬೇಕು. ಮಸೀದಿಯ ಆವರಣದಲ್ಲಿ ಕಡ್ಡಾಯವಾಗಿ ಟವೆಲ್ ಹಾಗೂ ಟೋಪಿಗಳನ್ನು ತೆರವುಗೊಳಿಸಬೇಕು. ಕಾರ್ಪೆಟ್ ಅಥವಾ ಚಾಪೆಯನ್ನು ಮನೆಯಿಂದಲೇ ತೆಗೆದುಕೊಂಡು ಬರಬೇಕು. ಮಸೀದಿಗಳಲ್ಲಿ ಐದು (5) ಹೊತ್ತಿನ ನಮಾಜನ್ನು ಮಾತ್ರ ಪ್ರಾರ್ಥಿಸಬಹುದು. ಸುನ್ನತ್ ಮತ್ತು ನಫೀಲ್ ಪ್ರಾರ್ಥನೆಯನ್ನು ಮನೆಯಲ್ಲಿಯೇ ಸಲ್ಲಿಸಬೇಕು.

‘ಮಸೀದಿಯಲ್ಲಿ ನಮಾಜ್ ಮಾಡುವ ಜಾಗದಲ್ಲಿ ಪೇಂಟ್ ಅಥವಾ ಟೇಪ್‍ನಲ್ಲಿ 2 ಮೀಟರ್ (6 ಅಡಿ) ಅಂತರದಲ್ಲಿ ಕಡ್ಡಾಯವಾಗಿ ಗುರುತು ಮಾಡಬೇಕು. ಮಸೀದಿಯಲ್ಲಿ ಪ್ರತಿಯೊಬ್ಬರೂ ಬೇರೆಯವರಿಂದ ಕನಿಷ್ಟ 2 ಮೀಟರ್ (6 ಅಡಿ) ಅಂತರ ಕಾಯ್ದುಕೊಂಡು ನಮಾಜ್ ಸಲ್ಲಿಸಬೇಕು. ನಮಾಜ್ ಮುಗಿದ ನಂತರ ತಡಮಾಡದೇ ತಮ್ಮ ತಮ್ಮ ಮನೆಗಳಿಗೆ ಹೋಗಬೇಕು. ಯಾವುದೇ ಕಾರಣಕ್ಕೂ ನಮಾಜಜಿನ ನಂತರ ಬಯಾನ್, ಖುರಾನ್-ಹದೀಸ್ ಪ್ರವಚನವನ್ನು ಮಸೀದಿಗಳಲ್ಲಿ ಮಾಡಬಾರದು’ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಂ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು