ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮತಗಟ್ಟೆ ಸ್ಥಿತಿಯ ವರದಿ ಸಿದ್ಧಪಡಿಸಲು ಸೂಚನೆ

ಜಿಲ್ಲಾಧಿಕಾರಿ ಗಮನಕ್ಕೆ ತರದೆ ಮತದಾರರ ಪಟ್ಟಿ ನಿಷ್ಕ್ರಮಣೆ ಮಾಡಬೇಡಿ
Last Updated 26 ನವೆಂಬರ್ 2022, 4:36 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಪ್ರತಿಯೊಂದು ಮತಗಟ್ಟೆ ಸುಸ್ಥಿತಿಯ ಬಗ್ಗೆ ಪರಿಶೀಲಿಸಿ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್‌ಗಳಿಂದ ಛಾಯಾಚಿತ್ರ ಆಧರಿಸಿದ ವರದಿ ಸಿದ್ಧಪಡಿಸಬೇಕು ಎಂದುಮತದಾರರ ಪಟ್ಟಿ ಪರಿಷ್ಕರಣೆ ವಿಶೇಷಾಧಿಕಾರಿ ಡಾ.ಎನ್.ವಿ. ಪ್ರಸಾದ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತ ಸಭೆಯಲ್ಲಿ ಮಾತನಾಡಿದರು.

ಮತಗಟ್ಟೆ ನೋಂದಣಿ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸೂಕ್ಷ್ಮವಾಗಿ ಕೈಗೊಳ್ಳಬೇಕು. ನಿಯಮಸಾನುರವೇ ಪರಿಷ್ಕರಣೆ ಕಾರ್ಯಕೈಗೊಳ್ಳಬೇಕು. ಜಿಲ್ಲಾಧಿಕಾರಿ ಗಮನಕ್ಕೆ ತಾರದೇ ಪಟ್ಟಿಯಲ್ಲಿ ನಿಷ್ಕ್ರಮಣೆ ಮಾಡಬಾರದು ಎಂದು ತಾಕೀತು ಮಾಡಿದರು.

ಮೃತಪಟ್ಟವರು, ಗ್ರಾಮದಿಂದ ಹೊರಹೋದವರು ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವಾಗ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಮತದಾರರ ಹೆಸರನ್ನು ಪಟ್ಟಿಯಿಂದ ಹೆಸರು ತೆಗೆಯುವಾಗ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ, ಮಾರ್ಗಸೂಚಿಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವವ ಪಟ್ಟಿ ಕೊಟ್ಟ ಕೂಡಲೇ ತೆಗೆದುಹಾಕುವಂತಿಲ್ಲ. ಪ್ರತಿಯೊಂದಕ್ಕೂ ದಾಖಲೆಗಳಿರಬೇಕು. ಮತದಾರರು ಆ ಸ್ಥಳದಲ್ಲಿ, ಕ್ಷೇತ್ರದಲ್ಲಿ ಇದ್ದಾರೆಯೇ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ಬಳಿಕ ನಿರ್ಧಾರ ಕೈಗೊಳ್ಳಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿನ ಎಷ್ಟು ಮತಗಟ್ಟೆಗಳು ಖಾಸಗಿ ಕಟ್ಟಡಲ್ಲಿವೆ ಎಂಬುದರ ಪಟ್ಟಿ ಸಿದ್ಧಪಡಿಸಬೇಕು. ಜಿಲ್ಲಾಧಿಕಾರಿ ಗಮನಕ್ಕೆ ತಾರದೇ ಮತಗಟ್ಟೆ ಬದಲು ಮಾಡುವಂತಿಲ್ಲ. ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾರ ನೋಂದಣಿ ಅಧಿಕಾರಿ ಹಾಗೂ ಸಹಾಯಕ ಮತದಾರ ನೋಂದಣಿ ಅಧಿಕಾರಿ ಸದಾ ಸಂಪರ್ಕದಲ್ಲಿ ಇರಬೇಕು. ಮತಗಟ್ಟೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಪರಿಷ್ಕರಣೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆವಾರು ಲಿಂಗ, ವಿಕಲಚೇತನ, ವಯೋಮಾನ ಆಧಾರಿತ ಮತದಾರ ಅಂಕಿ ಅಂಶಗಳನ್ನು ಸಿದ್ಧಪಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯಗಳ ಅರ್ಹ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದರು.

ಬಳಿಕ ಅವರುರಾಜಕೀಯ ಪಕ್ಷಗಳ ವಕ್ತಾರರೊಂದಿಗೆ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಚರ್ಚಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಪ್ರತಿ ಮತಗಟ್ಟೆಯಲ್ಲಿ ಪರಿಷ್ಕೃತ ಮತದಾರ ಪಟ್ಟಿ ಹಾಗೂ ಹಳೆಯ ಮತದಾರರ ಪಟ್ಟಿಯ ಭೌತಿಕ ಪ್ರತಿ ಜನರ ಪರಿಶೀಲನೆ ಲಭ್ಯ ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ತಿಮ್ಮಣ್ಣ, ಅಶ್ವಥ್, ತಹಶೀಲ್ದಾರ್‌ಗಳಾದ ಸಂತೋಷ್, ರಶ್ಮಿ, ರಾಮಚಂದ್ರಪ್ಪ, ಪುಟ್ಟಪ್ಪ, ರೇಖಾ ಇದ್ದರು.

30,000 ಮತದಾರರಸೇರ್ಪಡೆ

ಜಿಲ್ಲೆಯಲ್ಲಿ 1683 ಮತಗಟ್ಟೆಗಳಿವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಈವರೆಗೆ 30,000 ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 81,000 ಮತದಾರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಸದ್ಯ ಮತಪಟ್ಟಿ ಪರಿಷ್ಕರಣೆ ವೇಳೆ ಫಾರಂ 6ರ 8,400, ಫಾರಂ 7ರ 5156, ಹಾಗೂ ಫಾರಂ 8ರ 4193 ಸೇರಿದಂತೆ 17,758 ಅರ್ಜಿಗಳು ಬಂದಿವೆ. ಡಿಸೆಂಬರ್ ಅಂತ್ಯದವರೆಗೆ ಮತಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತಗಟ್ಟೆ ಅಧಿಕಾರಿಗಳು ಮನೆ ಮನೆ ಸರ್ವೆ ನಡೆಸುತ್ತಿದ್ದಾರೆ. ಮತಪಟ್ಟಿಯಿಂದ ಬಿಟ್ಟುಹೋದವರ ಹೆಸರು ಸೇರಿಸಲು ಅವಕಾಶವಿದೆ. 18ರಿಂದ 19 ವರ್ಷದ ಯುವ ಮತದಾರರು, ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆರು, ಕಾರ್ಮಿಕರು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಕ್ರಮ ಕೈಗೊಂಡಿದ್ದೇವೆ’ ಎಂದರು.

ಈವರೆಗೆ ಎರಡು ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜನರಿಗೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT