ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರ ಕಥೆಗಳು: ಮನಕಲಕುವ ಪರಿಸ್ಥಿತಿ ಬಿಚ್ಚಿಟ್ಟ ಮಕ್ಕಳು

ಅಹವಾಲು ವಿಚಾರಣೆ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಂಡ ಕಣ್ಣೀರ ಕಥೆಗಳು
Last Updated 2 ಜೂನ್ 2022, 6:04 IST
ಅಕ್ಷರ ಗಾತ್ರ

ದಾವಣಗೆರೆ: ‘ಅಪ್ಪ ಮೃತಪಟ್ಟಿದ್ದಾರೆ. ಅಮ್ಮ ಮನೆಕೆಲಸ ಮಾಡಿ ನಮ್ಮನ್ನು ಸಾಕುತ್ತಿದ್ದಾಳೆ. ನನಗೆ ಕಲಿಯುವ ಆಸೆ. ಮೊರಾರ್ಜಿ ವಸತಿಶಾಲೆಯಲ್ಲಿದ್ದುಕೊಂಡು ಕಲಿಯಲೆಂದು ಪರೀಕ್ಷೆ ಬರೆದೆ. ಆದರೆ ಅಂಕಗಳು ಕಡಿಮೆ ಬಂದಿವೆ. ಸೀಟು ಕೊಟ್ಟರೆ ಚೆನ್ನಾಗಿ ಓದುತ್ತೇನೆ...’

ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯಲ್ಲಿ (ಡಯಟ್) ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಹವಾಲು ವಿಚಾರಣೆ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾನ್‌ಬಾಸ್ಕೊದಲ್ಲಿ 5ನೇ ತರಗತಿ ಓದುತ್ತಿರುವ ನಿಟುವಳ್ಳಿಯ ಬಾಲಕನ ಮಾತುಗಳು ಇವು.

ಮನೆಯ ಪರಿಸ್ಥಿತಿ ಮತ್ತು ಅಂಕ ಕಡಿಮೆ ಸಿಕ್ಕಿದ ಕಾರಣ ಸೀಟು ಸಿಗದ ಆತಂಕದಲ್ಲಿ ಅಳುಮುಖದಲ್ಲೇ ನಡುಗುವ ಧ್ವನಿಯಲ್ಲಿ ಕಲಿವ ಆಸೆಯನ್ನು ಈ ಹುಡುಗ ಬಿಚ್ಚಿಟ್ಟಾಗ ಅಧಿಕಾರಿಗಳ ಮನಸ್ಸು ಕರಗಿತು. ಮೊರಾರ್ಜಿ ವಸತಿಯುತ ಶಾಲೆಯಲ್ಲಿ ಅವಕಾಶ ಮಾಡಿ ಕೊಡಲು ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕರಪ್ಪ ಸೂಚನೆ ನೀಡಿದರು.

‘ನನಗೆ ತಂದೆ, ತಾಯಿ ಇಲ್ಲ. ಸರ್ಕಾರಿ ಬಾಲಮಂದಿರದಲ್ಲಿದ್ದೇನೆ. ಬಾಲಮಂದಿರ ಚೆನ್ನಾಗಿದೆ. ಆದರೆ ಶಾಲೆ ದೂರ ಇದೆ. ನಡೆದುಕೊಂಡು ಹೋಗಿ ಬರಬೇಕು. ಸಂಜೆ ಕಾಲು ನೋವು ಬರುತ್ತದೆ. ವಾಹನದ ವ್ಯವಸ್ಥೆ ಮಾಡಿ’ ಎಂದು ಬಾಲಮಂದಿರದ ಬಾಲಕಿ ಮನವಿ ಮಾಡಿಕೊಂಡಳು. ವಾಹನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿ. ಶಂಕರಪ್ಪ ಭರವಸೆ ನೀಡಿದರು.

‘ಬಡವರಾಗಿರುವ ಕಾರಣ ನಮ್ಮನ್ನು ಶಾಲೆಯಿಂದ ಬಿಡಿಸಿದರು. ನಾನು ಹೇಗೋ ಬಿಸಿಎಂ ಹಾಸ್ಟೆಲ್‌ಗೆ ಸೇರಿಕೊಂಡೆ. ಆದರೆ ನನ್ನ ತಂಗಿ ಮನೆಯಲ್ಲೇ ಇದ್ದಾಳೆ. ಅವಳನ್ನು ಇಲ್ಲಿಗೆ ಕರೆ ತಂದು ಶಿಕ್ಷಣ ಕೊಡಿಸಿ’ ಎಂದು 8ನೇ ತರಗತಿಯ ಹುಡುಗಿ ಬೇಡಿಕೆ ಸಲ್ಲಿಸಿದಳು.

ಕೆಲವು ಮಕ್ಕಳು ಸಮಸ್ಯೆಗಳನ್ನು ವಿವರಿಸಿದರೆ, ಕೆಲವು ಮಕ್ಕಳು ಮಾತನಾಡಲು ಹಿಂಜರಿದರು.

‘ಮಕ್ಕಳ ಹಕ್ಕುಗಳನ್ನು ರಕ್ಷಿಸಿ’:

ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು. ಶಿಕ್ಷಣ ಹಾಗೂ ಇನ್ನಿತರೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ದೊರಕಿಸುವುದು ಎಲ್ಲರ ಕರ್ತವ್ಯ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.

ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಹವಾಲು ವಿಚಾರಣೆ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇತ್ತೀಚೆಗೆ ಕಾರಾಗೃಹಕ್ಕೆ ಭೇಟಿ ನೀಡಿದಾಗ ಶೇ 40 ಆರೋಪಿಗಳು ಪೋಕ್ಸೊ ಪ್ರಕರಣದವರಾಗಿದ್ದರು. ಅಂತಹ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಇಂತಹ ಅಹವಾಲು ವಿಚಾರಣಾ ಹಾಗೂ ಸಂವಾದ ಕಾರ್ಯಕ್ರಮಗಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ದೊರಕಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಂಕರಪ್ಪ ಡಿ., ‘ಮಕ್ಕಳು ಅಥವಾ ಪೋಷಕರು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದರೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಶಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮ ನಾಯ್ಕ್ ವೈ., ಪರಿಶಿಷ್ಟ ವರ್ಗಗಳ ಇಲಾಖೆ ಉಪನಿರ್ದೇಶಕ ಮಂಜ ನಾಯ್ಕ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ್ ಬಿದರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೌಸರ್ ರೇಷ್ಮಾ, ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಶಾರದಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪೂರ್ಣಿಮಾ ಎಂ. ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT