ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಡೆಯುತ್ತಿದೆಯೇ ಒತ್ತಾಯದ ಗರ್ಭಪಾತ?

4 ವಾರಗಳ ಬಳಿಕ 12 ವಾರಗಳ ಒಳಗೆ ನಡೆಯುತ್ತಿರುವ ಅಬಾರ್ಶನ್‌ ಬಗ್ಗೆ ಮೂಡಿದ ಸಂದೇಹ
Last Updated 29 ನವೆಂಬರ್ 2021, 3:58 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾಲದಲ್ಲಿ ಗರ್ಭಪಾತದ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ. ಗರ್ಭಪಾತದಲ್ಲಿ ತನ್ನಿಂದತಾನೆ ಮತ್ತು ವೈದ್ಯಕೀಯ ಕಾರಣಕ್ಕೆ ಆಗಿರುವುದಲ್ಲದೇ ಬೇರೆ ಕಾರಣಗಳೂ ಇವೆಯೇ ಎಂಬ ಆತಂಕ ಶುರುವಾಗಿದೆ. ಭ್ರೂಣಾವಸ್ಥೆಯಲ್ಲೇ ಲಿಂಗಪತ್ತೆ ಮಾಡಿ ಗರ್ಭಪಾತ ಮಾಡುವ ಜಾಲವೂ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

2017–18ರಲ್ಲಿ ಒಟ್ಟು 3,227 ಗರ್ಭಪಾತ ಪ್ರಕರಣಗಳು ದಾಖಲಾಗಿದ್ದರೆ, 2018–19ರಲ್ಲಿ 2,600 ಪ್ರಕರಣಗಳಿದ್ದವು. 2019–20ರಲ್ಲಿ 2,738 ಪ್ರಕರಣಗಳು ಇದ್ದವು. ಬಳಿಕ ಕೊರೊನಾ ಬಂದಿದ್ದರಿಂದ ಗರ್ಭಪಾತ ಪ್ರಮಾಣ ಕಡಿಮೆಯಾಗಿತ್ತು. 2020–21ರಲ್ಲಿ 1,504 ಪ್ರಕರಣಗಳಷ್ಟೇ ದಾಖಲಾಗಿದ್ದವು. 2021–22ರಲ್ಲಿ ಇಲ್ಲಿವರೆಗೆ 1,409 ಪ್ರಕರಣಗಳು ದಾಖಲಾಗಿವೆ. 2022ರ ಮಾರ್ಚ್‌ ಅಂತ್ಯದವರೆಗೆ ಲೆಕ್ಕ ತೆಗೆದುಕೊಳ್ಳುವುದರಿಂದ ಈ ಬಾರಿ ಮತ್ತೆ 2 ಸಾವಿರ ದಾಟುವ ಸಾಧ್ಯತೆ ಇದೆ.

ಗರ್ಭಪಾತವನ್ನು ಮೂರು ವಿಭಾಗಗಳನ್ನಾಗಿ ಮಾಡಲಾಗುತ್ತದೆ. ಗರ್ಭ ನಿಂತ ಮೂರ್ನಾಲ್ಕು ವಾರಗಳಲ್ಲಿಯೇ ಗರ್ಭಪಾತವಾಗಿ ಬಿಡುತ್ತದೆ. ಸಾಧಾರಣವಾಗಿ ಇವು ಹೆಚ್ಚಿರುತ್ತದೆ. 12 ವಾರಗಳ ನಂತರ ಗರ್ಭಪಾತ ಹೆಚ್ಚಾಗಿ ವೈದ್ಯಕೀಯ ಕಾರಣಕ್ಕಾಗಿ ಆಗುತ್ತದೆ. ಅಂದರೆ ಪತಿ–ಪತ್ನಿ ಗರ್ಭಪಾತ ಬಯಸದೇ ಇದ್ದರೂ ಬೆಳೆಯದ ಮಗು ಎಂಬ ಕಾರಣಕ್ಕಾಗಿ, ರೋಗದ ಕಾರಣಕ್ಕಾಗಿ, ತಾಯಿ ಅಥವಾ ಮಗುವಿಗೆ ಅಪಾಯವಿದ್ದ ಕಾರಣಕ್ಕಾಗಿ ವೈದ್ಯರ ಸಲಹೆ ಮೇರೆಗೆ ಗರ್ಭ ತೆಗೆಸಲಾಗುತ್ತದೆ. ಇದಲ್ಲದೇ ಮೂರನೇಯ ವಿಭಾಗ ಇದೆ. ಅದೇ ಎಲ್ಲ ಸಂದೇಹಗಳಿಗೆ ಕಾರಣವಾಗಿರುವಂಥದ್ದಾಗಿದೆ. ಅದು ನಾಲ್ಕು ವಾರ ದಾಟಿ 12 ವಾರಗಳ ಒಳಗೆ ಆಗುವ ಗರ್ಭಪಾತ. ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಗರ್ಭಪಾತಗಳಾಗಿವೆ, ಅವುಗಳಿಗೆ ಏನು ಕಾರಣ ಎಂದು ಪತ್ತೆ ಹಚ್ಚುವುದಕ್ಕಾಗಿಯೇ ಪಿಸಿ–‍ಪಿಎನ್‌ಡಿಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

‘ಒಟ್ಟು ಗರ್ಭಿಣಿಯರಲ್ಲಿ ಶೇ 10ರಷ್ಟು ಗರ್ಭಪಾತವಾಗುತ್ತದೆ. ದಾವಣಗೆರೆ ಜಿಲ್ಲೆ ಸದ್ಯ ಅದೇ ಅನುಪಾತದಲ್ಲಿದೆ. ಅದರ ನಡುವೆ ಒಂದು, ಎರಡು ಪ್ರಕರಣಗಳಲ್ಲಿ ಕೂಡ ಹೆಣ್ಣು ಭ್ರೂಣಹತ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಎಲ್ಲ ಆಸ್ಪತ್ರೆಗಳು, ಸ್ಕ್ಯಾನಿಂಗ್‌ ಕೇಂದ್ರಗಳಿಂದ ಮಾಹಿತಿ ಒದಗಿಸಬೇಕು ಎಂದು ಆರೋಗ್ಯ ಇಲಾಖೆಗೆ ತಿಳಿಸಿದ್ದೇನೆ’ ಎಂದು ಪಿಸಿ ಮತ್ತು ಪಿಎನ್‌ಡಿಟಿ (ಪ್ರಿ ಕನ್ಸೆಪ್ಶನ್ ಆ್ಯಂಡ್‌ ಪ್ರಿ ನೇಟಲ್‌ ಡಯಾಗ್ನೋಸ್ಟಿಕ್‌ ಟೆಕ್ನಿಕ್‌) ಸಲಹಾ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆಗಿರುವ ಮಕ್ಕಳ ತಜ್ಞ ಡಾ. ಎನ್‌.ಕೆ. ಕಾಳಪ್ಪನವರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಹೊಸ ಕಾಯ್ದೆಯ ಅನ್ವಯ ಎಲ್ಲವೂ ದಾಖಲಾಗಬೇಕು. ಅದಕ್ಕಾಗಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ ಅಧಿನಿಯಮ (ಪಿಸಿ ಮತ್ತು ಪಿಎನ್‌ಡಿಟಿ) ಸಲಹಾ ಸಮಿತಿಯ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಂದ ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುತ್ತದೆ’ ಎಂದು ಸಮಿತಿಯ ಸಕ್ಷಮ ಪ್ರಾಧಿಕಾರಿ ಆಗಿರುವ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಪ್ರತಿಕ್ರಿಯಿಸಿದ್ದಾರೆ.

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಪಿಸಿ ಮತ್ತು ಪಿಎನ್‌ಡಿಟಿ ಸಲಹಾ ಸಮಿತಿ ಸಭೆಯಲ್ಲಿ ಕೂಡ ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗುತ್ತಿರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಕಾರ್ಯವೈಖರಿ ಬಗ್ಗೆ ಅನುಮಾನಗಳಿವೆ. ಇಂತಹ ಆಸ್ಪತ್ರೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಚರ್ಚೆಯಾಗಿತ್ತು.

ಗರ್ಭಪಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಗರ್ಭಪಾತಕ್ಕೆ ಕಾರಣಗಳು, ಗರ್ಭಪಾತ ಎಷ್ಟನೇ ಹೆರಿಗೆಗೆ ಸಂಬಂಧಿಸಿದ್ದು ಎಂಬುದನ್ನು ಪರಿಶೀಲಿಸಬೇಕಿದೆ. ಒಂದು ಅಥವಾ ಎರಡು ಮಕ್ಕಳನ್ನು ದಂಪತಿ ಪಡೆಯಲು ಬಯಸುವುದೇ ಹೆಚ್ಚು. ಹೀಗಾಗಿ ಗಂಡು ಮಗು ಬೇಕೆಂಬ ಆಶಯದೊಂದಿಗೆ ಗರ್ಭಪಾತ ಮಾಡಿಸಿರುವ ಸಾಧ್ಯತೆಗಳೂ ಇರುತ್ತವೆ. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಲಹಾ ಸಮಿತಿಯು ಹೆಚ್ಚಿನ ಪರಿಶೀಲನೆ ನಡೆಸಬೇಕು. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾದ ಒಟ್ಟು ಗರ್ಭಿಣಿಯರು, ಹೆರಿಗೆಗೆ ನೋಂದಣಿಯಾದವರು, ನೋಂದಣಿಯಾಗದವರು, ಗರ್ಭಪಾತಗೊಂಡವರು, ಯಾವುದೇ ಮಾಹಿತಿಗೆ ಒಳಗಾದವರ, ಒಳಗಾಗದವರ ಸಂಖ್ಯೆಯ ವಿವರಗಳ ಬಗ್ಗೆಯೂ ಚರ್ಚೆಯಾಗಿತ್ತು.

2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ 23,675 ಗರ್ಭಿಣಿಯರ ನೋಂದಣಿಯಾಗಿತ್ತು. ಹೆರಿಗೆಗಾಗಿ 20,360 ಮಂದಿ ಬಂದಿದ್ದು, 2,600 ಗರ್ಭಪಾತವಾಗಿದ್ದವು. 715 ಗರ್ಭಿಣಿಯರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಡಿಎಚ್‍ಒ ಡಾ. ನಾಗರಾಜ್ ಮಾಹಿತಿ ನೀಡಿದರು.

ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ. ಅದರಲ್ಲಿ ಮೂರು ಪ್ರಮುಖ ಅಂಶಗಳು ಇವೆ. ಹಿಂದೆ ಮೂರು ತಿಂಗಳ ನಂತರ ಅಂದರೆ 12 ವಾರಗಳ ನಂತರವಷ್ಟೇ ದಾಖಲಿಸಲಾಗುತ್ತಿತ್ತು. ಈಗ ನಾಲ್ಕು ವಾರ ದಾಟಿದ ಕೂಡಲೇ ಅದನ್ನು ಇಲಾಖೆಯ ಪೋರ್ಟಲ್‌ನಲ್ಲಿ ದಾಖಲು ಮಾಡಬೇಕು. ಹಿಂದೆ ತನ್ನಿಂದತಾನೆ ಆಗುತ್ತಿದ್ದ ಗರ್ಭಪಾತ ಅಷ್ಟಾಗಿ ದಾಖಲಾಗುತ್ತಿರಲಿಲ್ಲ. ಈ ನಿಯಮದಿಂದಾಗಿ ಅವೆಲ್ಲ ದಾಖಲಾಗುತ್ತಿವೆ. ಗರ್ಭಿಣಿಯ ಜೀವಕ್ಕೆ ಅಪಾಯ ಇದೆ ಎಂದು ಕಂಡು ಬಂದರೆ ಈಗ 8 ತಿಂಗಳು ದಾಟಿದ ಮೇಲೂ ಗರ್ಭಪಾತ ಮಾಡಲು ಅವಕಾಶ ನೀಡಲಾಗಿದೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ಎರಡನೇ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈಗ ಅಂಥ ಪ್ರಕರಣಗಳನ್ನು ನೇರವಾಗಿ ಜಿಲ್ಲಾ ನ್ಯಾಯಾಲಯಕ್ಕೆ ತರಬೇಕು. ಅಲ್ಲಿ ವಿಚಾರಣೆ ನಡೆಯಬೇಕು. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಮಿತಿಯನ್ನು ಮಾಡಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರೇಣುಕಾರಾಧ್ಯ ಎ.ಎಂ. ವಿವರಿಸಿದರು.

ಪತ್ತೆಹಚ್ಚಲು ಸಹಾಯ ಮಾಡುವ ‘ಬಾಲಿಕಾ’ ಸಾಫ್ಟ್‌ವೇರ್‌

ಬಾಲಿಕಾ ಎಂಬ ಸಾಫ್ಟ್‌ವೇರ್‌ ಇದೆ. ಅದು ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಇರುತ್ತದೆ. ಗರ್ಭಿಣಿಯರ ತಪಾಸಣೆ ಮಾಡಿದ ಮೇಲೆ ನಮೂನೆ ‘ಎಫ್‌’ನಲ್ಲಿ ಅಪ್‌ಡೇಟ್‌ ಆಗುತ್ತದೆ.

ಸ್ಕ್ಯಾನಿಂಗ್‌ ಮಾಡಿದಾಗ ಪಿಕ್ಚರ್‌ ಸೇವ್‌ ಆಗುತ್ತದೆ. ಒಮ್ಮೆ ಸೇವ್‌ ಆದರೆ ಆಮೇಲೆ ಸ್ಕ್ಯಾನಿಂಗ್‌ ಸೆಂಟರ್‌ನವರು ಡಿಲೀಟ್‌ ಮಾಡಲು ಇಚ್ಛೆಪಟ್ಟರೂ ಡಿಲೀಟ್‌ ಆಗುವುದಿಲ್ಲ. ಆ ರೀತಿ ಸಾಫ್ಟ್‌ವೇರ್‌ ಡೆವಲಪ್‌ ಮಾಡಲಾಗಿದೆ. ಹಾಗಾಗಿ ಕ್ರಾಸ್‌ ವೆರಿಫಿಕೇಶನ್‌ ಮಾಡಿದರೆ ಸಹಜ ತಪಾಸಣೆಯೋ, ಲಿಂಗಪತ್ತೆಗಾಗಿ ತಪಾಸಣೆಯೋ ಎಂಬುದು ಗೊತ್ತಾಗಿ ಬಿಡುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಸುನಿಲ್‌.

ಹೆಣ್ಣು ಮಕ್ಕಳ ಲಿಂಗಾನುಪಾತ (1000 ಗಂಡು ಮಕ್ಕಳಿಗೆ)

946- 2001ರ ಜನಗಣತಿ ಪ್ರಕಾರ

948-2011ರ ಜನಗಣತಿ ಪ್ರಕಾರ

946-2020ರ ಡಿಸೆಂಬರ್‌ ಅಂತ್ಯಕ್ಕೆ ಗ್ರಾಮೀಣ ಭಾಗಗಳಲ್ಲಿ ಲಿಂಗಾನುಪಾತ

952-2020ರ ಡಿಸೆಂಬರ್‌ ಅಂತ್ಯಕ್ಕೆ ನಗರ ಪ್ರದೇಶಗಳಲ್ಲಿ ಲಿಂಗಾನುಪಾತ

ಅಂಕಿ ಅಂಶ

96-ಜಿಲ್ಲೆಯಲ್ಲಿ ಇರುವ ಸ್ಕ್ಯಾನಿಂಗ್‌ ಸೆಂಟರ್‌ಗಳು.

76-ಅದರಲ್ಲಿ ದಾವಣಗೆರೆಯಲ್ಲೇ ಇರುವ ಸ್ಕ್ಯಾನಿಂಗ್‌ ಸೆಂಟರ್‌ಗಳು

ವರ್ಷವಾರು ಗರ್ಭಪಾತದ ಅಂಕಿ ಅಂಶ

ವರ್ಷ; ತನ್ನಿಂದ ತಾನೆ; 12 ವಾರಗಳ ಒಳಗೆ; 12 ವಾರಗಳ ಬಳಿಕ

2017–18; 1571; 1066; 590

2018–19; 1139; 1017; 444

2019–20; 1173; 1005; 560

2020–21; 779; 216; 509

2021–22 (ಆಕ್ಟೋಬರ್‌ ಅಂತ್ಯದವರೆಗೆ): 623; 446; 340

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT