ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ಕೊನೆಯ ಚುನಾವಣೆ: ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟನೆ

Last Updated 23 ಮೇ 2019, 15:50 IST
ಅಕ್ಷರ ಗಾತ್ರ

ದಾವಣಗೆರೆ: ಜನರಿಗೆ ನೀಡಿದ ಆಸ್ವಾಸನೆಗಳನ್ನು ಈಡೇರಿಸಿದ ಬಳಿಕ ಚುನಾವಣೆಯಿಂದ ನಿವೃತ್ತಿ ಹೊಂದುತ್ತೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸಿ, ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಶಿಕ್ಷಣ, ಆರೋಗ್ಯ ಒತ್ತು ನೀಡಿ, ಎಲ್ಲ ಯೋಜನೆಗಳನ್ನು ಸಮರ್ಪಣೆ ಮಾಡಿದ ಬಳಿಕ ಚುನಾವಣೆಯಿಂದ ದೂರ ಉಳಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ನೀಡುವ ಉದ್ದೇಶವಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನಿವೃತ್ತಿಯಾಗುತ್ತೇನೆ’ ಎಂದು ಹೇಳಿದರು.

‘ನಾನು ಮಂತ್ರಿಯಾಗಬೇಕು ಎಂದು ಆಸೆ ಪಟ್ಟವನಲ್ಲ. ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್ ಅವರು ಮಂತ್ರಿಯನ್ನಾಗಿ ಮಾಡಿಸಿದರು. ಆದರೆ ಎರಡು ಕಾಲು ವರ್ಷಗಳಿಗೆ ಬದಲಾವಣೆಯಾಯಿತು. ಮಂತ್ರಿಯಾಗುವುದಕ್ಕಿಂತ ಹೆಚ್ಚಾಗಿ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಶಾಸಕರ ಜೊತೆಗೂಡಿ ಕೆಲಸ ಮಾಡುತ್ತೇನೆ. ಯಾವ ಸ್ಥಾನ ಕೊಟ್ಟರೂ ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಕೈಗಾರಿಕೆಗಳ ಸ್ಥಾಪನೆಗೆ ಒತ್ತು:

‘ದಾವಣಗೆರೆಯನ್ನು ಮ್ಯಾಂಚೆಸ್ಟರ್ ಮಾಡುವ ಉದ್ದೇಶ ಈಡೇರಬೇಕಾದರೆ ಕೈಗಾರಿಕೆಗಳನ್ನು ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಹರಿಹರದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸುವ ಉದ್ದೇಶವಿದೆ. ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದರೆ ಜಮೀನು ಇಲ್ಲ. ಕೆಐಎಡಿಬಿ ಭೂಸ್ವಾಧೀನ ಮಾಡಿ ಜಾಗ ಕೊಟ್ಟರೆ ಬೇರೆ ಬೇರೆ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ’ ಎಂದರು.

‘ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಡಿಪಿಆರ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಅನುಮೋದನೆ ಮಾಡಿಸುತ್ತೇವೆ. ಆದರೆ ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ನನ್ನ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಮಂಜೂರು ಮಾಡಿಸುತ್ತೇನೆ. ಬಿಜೆಪಿ ಸರ್ಕಾರ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಎಲ್ಲಾ ಕೆಲಸಗಳು ಆಗುತ್ತವೆ’ ಎಂದು ಹೇಳಿದರು.

ಎರಡು ಪಾರ್ಲಿಮೆಂಟ್ ಕ್ಷೇತ್ರಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಿದ್ದೇಶ್ವರ ‘ಖಂಡಿತವಾಗಿಯೂ ಆಗುತ್ತದೆ. ಹೊಸ ಸರ್ಕಾರ ಬಂದ ನಂತರ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ಆದರೆ ಯಾವುದೇ ಯೋಜನೆಗಳು ಆಗಬೇಕಾದರೆ ರಾಜ್ಯ ಸರ್ಕಾರ ಭೂಮಿ ಕೊಡಬೇಕು. ಆದರೆ ಭೂಮಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಪಕ್ಷದ ಕಾರ್ಯಕರ್ತರ ಶ್ರಮ:

‘ಚುನಾವಣೆಗೆ ಮೊದಲು ಎರಡು ತಿಂಗಳಿನಿಂದ ಪಕ್ಷದ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರ ಪರಿಶ್ರಮದ ಫಲವಾಗಿ ಹೆಚ್ಚು ಅಂತರಗಳಲ್ಲಿ ಗೆದ್ದಿದ್ದೇನೆ. ನರೇಂದ್ರಮೋದಿ ಸಾಧನೆ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿರುವ ಕೆಲಸಗಳನ್ನು ಜನರು ನೆನಪಿನಲ್ಲಿಟ್ಟುಕೊಂಡು ಗೆಲ್ಲಿಸಿದ್ದಾರೆ’ ಅವರಿಗೆ ನಾನು ಚಿರಋಣಿ ಎಂದು ಹೇಳಿದರು.

‘ಯಡಿಯೂರಪ್ಪ ಅವರು ರಾಜ್ಯದ 28 ಕ್ಷೇತ್ರಗಳಲ್ಲಿ ಸುತ್ತಾಡಿದ್ದರ ಫಲವಾಗಿ ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನ ಪಡೆಯುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಅವರು ರೈತರ ಆದಾಯ ದ್ವಿಗುಣ, ರೈತರಿಗೆ 24 ಗಂಟೆ ವಿದ್ಯುತ್, ಯುವಕರಿಗೆ ಉದ್ಯೋಗ ನೀಡುವ ಆಶಾದಾಯಕ ಗುರಿ ಇಟ್ಟುಕೊಂಡಿದ್ದು, ಅಭಿವೃದ್ಧಿಯಲ್ಲಿ 6ನೇ ಸ್ಥಾನದಲ್ಲಿರುವ ಭಾರತವನ್ನು ನಂಬರ್ ಸ್ಥಾನಕ್ಕೆ ತರುತ್ತಾರೆ’ ಎಂದು ಹೇಳಿದರು.

ಶಾಸಕರಾದ ಪ್ರೊ. ಲಿಂಗಣ್ಣ, ಮಾಡಾಳ್‌ ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ.ಪಿ. ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT