ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 'ದೇಶಕ್ಕೆ ಅನ್ನ ಕೊಡುವುದು ಅದಾನಿ, ಅಂಬಾನಿಯಲ್ಲ'

ವಾಲ್ಮೀಕಿ ಜಾತ್ರೆಯಲ್ಲಿ ರೈತ ಗೋಷ್ಠಿಯನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ
Last Updated 9 ಫೆಬ್ರುವರಿ 2023, 6:29 IST
ಅಕ್ಷರ ಗಾತ್ರ

ದಾವಣಗೆರೆ: ದೇಶಕ್ಕೆ ಅನ್ನ ಕೊಡುವವರು ಅದಾನಿ ಅಂಬಾನಿಯೂ ಅಲ್ಲ, ಟಾಟಾ, ಬಿರ್ಲರೂ ಅಲ್ಲ. ಅನ್ನಕೊಡುವವನು ರೈತ. ಕೃಷಿಕರೇನಾದರೂ ಒಂದು ವರ್ಷ ಮುಷ್ಕರ ಹೂಡಿ ಬೆಳೆ ಬೆಳೆಯುವುದಿಲ್ಲ ಎಂದು ಹೇಳಿದ್ರೆ ಎಲ್ಲರೂ ಹಸಿವೆಯಿಂದ ನರಳುವಂತಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಬುಧವಾರ ಆರಂಭಗೊಂಡ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ನಡೆದ ರೈತ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 38 ಕೋಟಿ ಜನ ಇದ್ದರು. ಆದರೆ, ಎಲ್ಲರ ಹಸಿವು ನೀಗಿಸುವಷ್ಟು ಆಹಾರ ನಮ್ಮಲ್ಲಿರಲಿಲ್ಲ. ಈಗ ಜನಸಂಖ್ಯೆ 138 ಕೋಟಿಗೆ ತಲುಪಿದೆ. ಭೂಮಿ ಅಷ್ಟೇ ಇದೆ. ಈಗ ನಮಗೆ ಬೇಕಾದಷ್ಟು ಬೆಳೆದು ರಫ್ತು ಕೂಡ ಮಾಡುತ್ತಿದ್ದೇವೆ. ಇದಕ್ಕೆ ಕೃಷಿಕರು ಕಾರಣ ಎಂದು ತಿಳಿಸಿದರು.

ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ ₹ 6,000 ನೀಡುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ₹ 4,000 ಸೇರಿಸಿದೆ. ರೈತರ ಜಮೀನು ಇರುವಲ್ಲಿಗೇ ಪ್ರಯೋಗಾಲಯ ಹೋಗುವ ವ್ಯವಸ್ಥೆ ಮಾಡಲಾಗಿದೆ. ರೈತ ವಿದ್ಯಾಸಿರಿ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿತು. ಕೃಷಿಕಾರ್ಮಿಕರ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ಚಿಂತನೆ ನಡೆಸಿ 47 ಸಾವಿರ ಕೃಷಿ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಜಮೀನು ಉಳುಮೆಗಾಗಿ ಬಳಸುವ ಟ್ರ್ಯಾಕ್ಟರ್‌ಗೆ ಪ್ರತಿ ಎಕರೆಗೆ 20 ಲೀಟರ್‌ನಂತೆ ಐದು ಎಕರೆಗೆ ಡೀಸೆಲ್‌ ಸಬ್ಸಿಡಿ ನೀಡಬೇಕು ಎಂದು ಯೋಚನೆ ಮಾಡಲಾಗಿತ್ತು. ಕೊರೊನಾ ಬಂದು ನೀಡಲಾಗಲಿಲ್ಲ. ಲೀಟರ್‌ಗೆ ₹ 25 ರಿಯಾಯಿತಿಯಂತೆ ಈಗ ಪ್ರತಿ ಎಕರೆಗೆ 10 ಲೀಟರ್‌ ನೀಡಲಾಗುತ್ತಿದೆ. 5 ಎಕರೆವರೆಗೆ ಈ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ರೈತರಿಗೆ ಸಾಲ, ಸಣ್ಣ ಉದ್ದಿಮೆಗೆ ಸಾಲ, ಗೊಬ್ಬರ, ನೀರಾವರಿ ಸಹಿತ ಅನೇಕ ಯೋಜನೆಗಳಿಗೆ ರಿಯಾಯಿತಿ ನೀಡುವ ಮೂಲಕ ಸರ್ಕಾರ ಸಹಾಯ ಮಾಡುತ್ತಿದೆ. ರೈತರೂ ಒಂದು ಹೆಜ್ಜೆ ಮುಂದೆ ಬರಬೇಕು. ಸಮಗ್ರ ಕೃಷಿ ಮಾಡಬೇಕು. ಹೊಸ ಕೃಷಿ ನೀತಿಯನ್ನು ಅನುಸರಿಸಬೇಕು. ರಾಸಾಯನಿಕ ಗೊಬ್ಬರ ಹಾಕಿ, ಕ್ರಿಮಿನಾಶಕ ಸಿಂಪಡಿಸಿ ಭೂಮಿ ತಾಯಿಯನ್ನು ಬಂಜೆಯನ್ನಾಗಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಸಾವಯವ ಕೃಷಿ ನೀತಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯ ಬೆಳೆಯಬೇಕು ಎಂದು ಸಲಹೆ ನೀಡಿದರು.

ರೈತರು ಕಿರು ಉದ್ಯಮ ಮಾಡಬೇಕು. ನಿಮ್ಮ ಬೆಳೆಯನ್ನು ನೀವೇ ಸಂಸ್ಕರಣೆ ಮಾಡಿ ಪ್ಯಾಕ್‌ ಮಾಡಿ ಮಾರಾಟ ಮಾಡುವಂತಾಗಬೇಕು. ಕೃಷಿ ಉದ್ಯಮವಾಗಬೇಕು ಎಂದರು.

‌ಪ್ರಸ್ತುತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರಗಳು ಬಗ್ಗೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಉಪನ್ಯಾಸ ನೀಡಿ, ‘ಕರ್ನಾಟಕದಲ್ಲಿ 87 ಲಕ್ಷ ಕುಟುಂಬಗಳು ಭೂಮಿಯನ್ನು ಹೊಂದಿದ್ದಾರೆ. ಅದರಲ್ಲಿ 69 ಲಕ್ಷ ಸಣ್ಣ ಹಿಡಿವಳಿದಾರರಿದ್ದಾರೆ. 45 ಲಕ್ಷ ರೈತರು ಪಂಪ್‌ಸೆಟ್‌ ಹೊಂದಿದ್ದಾರೆ. 97 ಬೆಳೆಗಳನ್ನು ಬೆಳಯಲಾಗುತ್ತಿದೆ. 1977ರಲ್ಲಿ ದೇಶಕ್ಕೆ ಎರಡು ಹೊತ್ತು ಊಟಕ್ಕೆ ಗತಿ ಇರಲಿಲ್ಲ. ಇಂದು ರೈತರು ಅದನ್ನು ಬದಲಾಯಿಸಿದ್ದಾರೆ. ಆದರೆ ಹೆಚ್ಚು ಉತ್ಪಾದನೆ ಮಾಡಿದವರು ಹೆಚ್ಚು ಶ್ರೀಮಂತನಾಗಬೇಕಿತ್ತು. ಆದರೆ ಸಾಲಗಾರರಿದ್ದಾರೆ. 23 ನಿಮಿಷಕ್ಕೆ ಒಬ್ಬ ರೈತ ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯ, ದೇಶದ ಸರ್ಕಾರಗಳು ಕೃಷಿ ಅಧ್ಯಯನ ಮಾಡುವಲ್ಲಿ ವಿಫಲವಾಗಿವೆ. ದೇಶದಲ್ಲಿ 500ಕ್ಕೂ ಅಧಿಕ ಕೃಷಿ ವಿಶ್ವವಿದ್ಯಾಲಯಗಳು ಇವೆ. ರೈತ ಯಾವ ಬೆಳೆ ಬೆಳೆಯಲು ಎಷ್ಟು ಖರ್ಚು ಮಾಡುತ್ತಿದ್ದಾನೆ ಎಂದು ಯಾವ ವಿಶ್ವವಿದ್ಯಾಲಯಗಳೂ, ಆರ್ಥಿಕ ತಜ್ಞರೂ ಸಂಶೋಧನೆ ಮಾಡಲಿಲ್ಲ. ರೈತರು ಶೇ 23ರಷ್ಟು ನಷ್ಟದಲ್ಲಿ ಕೃಷಿ ಮಾಡುತ್ತಿದ್ದಾನೆ ಎಂದು ಡಾ. ಸ್ವಾಮಿನಾಥನ್‌ ಆಯೋಗವೊಂದೇ ಈ ಬಗ್ಗೆ ವರದಿ ನೀಡಿತ್ತು. ಸರ್ಕಾರಗಳು ಮಾತ್ರ ರೈತರಿಗೆ ಯಾವುದು ಅವಶ್ಯ ಎಂಬುದನ್ನು ಕಂಡುಕೊಂಡಿಲ್ಲ ಎಂದು ಟೀಕಿಸಿದರು.

ಕೊರೊನಾ ಬಂದಾಗ ಎಲ್ಲರೂ ಮನೆಯಿಂದ ಹೊರಗೆ ಬರಲಿಲ್ಲ. ರಾಜ್ಯದ 26 ಸಾವಿರ ಗ್ರಾಮಗಳಲ್ಲಿ ರೈತರು ಮಾತ್ರ ಮನೆಯ ಒಳಗೆ ಕೂರಲಿಲ್ಲ. ರಾಜ್ಯದ 358 ಪಟ್ಟಣಗಳಿಗೆ ತರ್ಕಾರಿ, ಸೊಪ್ಪು ಒದಗಿಸಿದರು. ಇಂಥ ರೈತರು ಸಾವಿಗೆ ಶರಣಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಸವನ ಗೌಡ ದದ್ದಲ್‌ ಮಾತನಾಡಿ, ‘ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಇರುತ್ತೇವೆ. ಸರ್ಕಾರಗಳು ರೈತರ ಬೆನ್ನೆಲುಬು ಆದಾಗ ಮಾತ್ರ ರೈತರು ದೇಶದ ಬೆನ್ನೆಲುಬು ಆಗಲು ಸಾಧ್ಯ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪರ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಕೇಣಿಗೆ ಹಾಕಿಕೊಂಡವರಿಗೆ ಬೆಳೆ ನಷ್ಟವಾದರೆ ಪರಿಹಾರ ಸಿಗುವುದಿಲ್ಲ. ಜಮೀನು ಮಾಲೀಕನ ಖಾತೆಗೆ ಹಣ ಜಮಾ ಆಗುತ್ತದೆ. ನಷ್ಟ ಆರಿಗೆ ಆಗುತ್ತದೆಯೋ ಅವರಿಗೇ ಪರಿಹಾರ ಸಿಗುವಂತೆ ಸರ್ಕಾರ ಮಾಡಬೇಕು ಎಂದರು.

ಮದಕರಿ ನಾಯಕನ ಭಾವಚಿತ್ರವನ್ನು ಸಂಸದ ರಾಜ ಅಮರೇಶ್ ನಾಯಕ, ಗಂಡುಗಲಿ ಕುಮಾರರಾಮ ಭಾವಚಿತ್ರವನ್ನು ಶಾಸಕ ಶಿವನಗೌಡ, ಎಲ್‌.ಜಿ. ಹಾವನೂರು ಅವರ ಭಾವಚಿತ್ರವನ್ನು ಶಾಸಕ ಬಸವನಗೌಡ ದದ್ದಲ್‌ ಅನಾವರಣಗೊಳಿಸಿದರು. ಸಂಸದ ದೇವೇಂದ್ರಪ್ಪ, ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ದಲಿತ ನಾಯಕ ವೆಂಕಟಸ್ವಾಮಿ, ರೈತ ಮುಖಂಡರಾದ ಬನವಾಸಿ ಹನುಮಂತಪ್ಪ ಮಡ್ಲೂರು, ಕೆ.ಪಿ. ಭೂತಯ್ಯ ಚಳ್ಳಕೆರೆ, ಭೀಮಪ್ಪ ಚೋಮಪ್ಪ ಜೋಡಗಣ್ಣನವರ್‌, ಎಚ್‌.ಆರ್‌. ಬಂಗಾರಸ್ವಾಮಿ, ವಾಸುದೇವ ಮೇಟಿ, ರವೀಂದ್ರ ಗೌಡ ಪಾಟೀಲ್‌, ದೊಡ್ಡಮನೆ ಶರಣಪ್ಪ, ಬೇವಿನಹಳ್ಳಿ ಮಹೇಶ್‌, ಗೋಸಲ ಭರಮಪ್ಪ ಮುಂತಾದವರು ಇದ್ದರು.

ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊದಿಗೆರೆ ರಮೇಶ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT