ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವ ಹೇಳುವುದಕ್ಕಿಂತ ಪಾಲಿಸಿದರೆ ಒಳಿತು: ಬಸವಪ್ರಭು ಸ್ವಾಮೀಜಿ ಸಲಹೆ

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಲಹೆ
Last Updated 4 ಜುಲೈ 2022, 7:00 IST
ಅಕ್ಷರ ಗಾತ್ರ

ದಾವಣಗೆರೆ: ‘ಜಗತ್ತಿಗೆ ತತ್ವಜ್ಞಾನಿಗಳ ಕೊಡುಗೆ ಅಪಾರವಾಗಿದ್ದು, ‌ತತ್ವಗಳನ್ನು ಹೇಳುವುದಕ್ಕಿಂತ ಅವುಗಳನ್ನು
ಪಾಲಿಸಿದರೆ ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುತ್ತದೆ’ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಜಗತ್ತಿಗೆ ತತ್ವಜ್ಞಾನದ ಕೊಡುಗೆ ಏನು?’ ವಿಷಯ ಕುರಿತು ಅವರು ಮಾತನಾಡಿದರು.

‘ಭಾರತವು ಜಗತ್ತಿಗೆ ತತ್ವಜ್ಞಾನವನ್ನು ಕೊಡುಗೆಯಾಗಿ ನೀಡಿದೆ. ಇದರಿಂದ ಭಾರತ ಬಹುದಿನಗಳವರೆಗೆ ಬಾಳುತ್ತದೆ. ಇತರರಿಗೂ ಬಾಳುವುದನ್ನು ಕಲಿಸುತ್ತದೆ. ದಯೆಗೆ ಗೌತಮಬುದ್ಧ, ಸತ್ಯಕ್ಕೆ ಗಾಂಧಿ, ಪ್ರೀತಿಗೆ ಯೇಸು, ಸಮಾನತೆಗೆ ಬಸವಣ್ಣ, ವೈಚಾರಿಕತೆಗೆ ಅಂಬೇಡ್ಕರ್ ಹೀಗೆ ಒಂದೊಂದು ತತ್ವಗಳಿಗೆ ಹೆಸರಾಗಿದ್ದಾರೆ’ ಎಂದು ಹೇಳಿದರು.

‘ವಿಜ್ಞಾನ, ತಂತ್ರಜ್ಞಾನಗಳು ಸಾಧನಗಳ ಶೋಧನೆಯಲ್ಲಿ ತೊಡಗಿದರೆ ತತ್ವಜ್ಞಾನವು (ಅಂತರಂಗದ ಸಾಧನೆ) ಪಾರಮಾರ್ಥಿಕ ಸುಖದ ಸಾಧನೆಗೆ ಒತ್ತು ನೀಡುತ್ತದೆ. ಆಧ್ಯಾತ್ಮಿಕ ಜ್ಞಾನವೇ ಪರಮಸುಖ. ಅದು ಸತ್ಯದ ದರ್ಶನ ಮಾಡಿಸುತ್ತದೆ.ಆಧ್ಯಾತ್ಮಿಕ ಸುಖವನ್ನು ಆಸಕ್ತರು ಮಾತ್ರ ಅನುಭವಿಸಲು ಸಾಧ್ಯ’ ಎಂದು ಹೇಳಿದರು.

‘ತತ್ವಜ್ಞಾನ, ತತ್ವಜ್ಞಾನಿಗಳು ನಮ್ಮ ನೆಲದಲ್ಲೇ ಅಡಗಿದ್ದಾರೆ. ಆದರೆ ನಾವು ಅವರನ್ನು ಗ್ರಹಿಸುತ್ತಿಲ್ಲ. ಬುದ್ಧ, ಬಸವಾದಿ ಶರಣರು ಅಡೆತಡೆಗಳನ್ನು ಮೀರಿ ಬೆಳೆದಿದ್ದಾರೆ. ಸಾಕ್ರೆಟಿಸ್ ಹಾಗೂ ಬುದ್ಧ ಅವರ ಆಲೋಚನೆಗಳು ಒಂದೆಯೇ ಆಗಿದ್ದು, ಇಬ್ಬರು ಸಮಾನರು. ಮಹಿಳಾ ತತ್ವಜ್ಞಾನಿಗಳಲ್ಲಿ ಅಕ್ಕಮಹಾದೇವಿ ಶ್ರೇಷ್ಠರು’ ಎಂದು ಜೆ.ಎಚ್. ಪಟೇಲ್ ಕಾಲೇಜು ಸಂಸ್ಥಾಪಕಿ ಪ್ರತಿಭಾ ಬಳ್ಳಿಗಾವಿ ಹೇಳಿದರು.

ಸಂಚಾರಿ ಕೆ.ಬಿ.ಆರ್. ಡ್ರಾಮಾ ಕಂಪನಿಯ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ, ವಿಶ್ವವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ವಜನಾ ಮಹಾಲಿಂಗಯ್ಯ ಪಾಲ್ಗೊಂಡಿದ್ದರು.

ಅದ್ವೈತ ಫೌಂಡೇಶನ್ ಸದಸ್ಯರು ‘ಜಗಜ್ಯೋತಿ ಬಸವೇಶ್ವರ’ ನಾಟಕ ಪದರ್ಶಿಸಲಾಯಿತು. ರುದ್ರಾಕ್ಷಿಬಾಯಿ, ರುಕ್ಮಾಬಾಯಿ ಅವರಿಂದ ವಚನಗಾಯನ ನಡೆಯಿತು. ಶರಣಬಸವ ಸ್ವಾಗತಿಸಿದರು. ಜ್ಯೋತಿ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT